ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

101 ತೆಂಗಿನಕಾಯಿ ಒಡೆದು, ಅಭಿಷೇಕ–ಅನ್ನಸಂತರ್ಪಣೆ; ಮತ್ತೆ ಜನಸೇವೆಗೆ ಮರಳಲಿ ಎಂದು ಪ್ರಾರ್ಥನೆ

ಶಾಸಕ ಪ್ರದೀಪ್ ಈಶ್ವರ್ ಅವರು ಆಕಸ್ಮಿಕವಾಗಿ ಜಾರಿ ಬಿದ್ದು ಕಾಲಿನ ಮೂಳೆ ಮುರಿತಕ್ಕೊಳ ಗಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತ ರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇದನ್ನು ಮನಗಂಡ ಶಾಸಕರು, ಯಾರೂ ಆತಂಕಪಡುವ ಅಗತ್ಯವಿಲ್ಲ. ಆಕಸ್ಮಿಕವಾಗಿ ಜಾರಿಬಿದ್ದು ಕಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ

ಚಿಕ್ಕಬಳ್ಳಾಪುರ: ಆಕಸ್ಮಿಕವಾಗಿ ಜಾರಿಬಿದ್ದು ಕಾಲಿನ ಮೂಳೆ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿರುವ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರು ಶೀಘ್ರ ಗುಣಮುಖರಾಗಿ ಮತ್ತೆ ಮೊದಲಿನಂತೆ ಜನರ ನಡುವೆ ಕಾಣಿಸಿಕೊಂಡು ಸಾರ್ವಜನಿಕ ಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಅವರ ಅಭಿಮಾನಿಗಳು ದೇವರ ಮೊರೆ ಹೋದರು.

ನಗರದ ಕಂದವಾರ ಬಾಗಿಲಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಶಾಸಕರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಹಿತೈಷಿಗಳು ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ 101 ತೆಂಗಿನಕಾಯಿ ಒಡೆದು ದೇವರಲ್ಲಿ ಪ್ರಾರ್ಥಿಸಿದರು. ಪೂಜೆ ಹಾಗೂ ಈಡುಗಾಯಿ ಸೇವೆಯ ಬಳಿಕ ನೂರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಿ ತಮ್ಮ ನೆಚ್ಚಿನ ನಾಯಕನ ಶೀಘ್ರ ಚೇತರಿಕೆಗಾಗಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ: Chikkaballapur News: ಹಿರಿಯರಿಂದ ಕಿರಿಯರಿಗೆ ದೀಪ ವರ್ಗಾವಣೆ; ಕುಟುಂಬದ ಐಕ್ಯತೆ, ಕುಲಪರಂಪರೆ ಸಾರಿದ ವಿಶಿಷ್ಟ ಸಂಪ್ರದಾಯ

ಶಾಸಕ ಪ್ರದೀಪ್ ಈಶ್ವರ್ ಅವರು ಆಕಸ್ಮಿಕವಾಗಿ ಜಾರಿ ಬಿದ್ದು ಕಾಲಿನ ಮೂಳೆ ಮುರಿತಕ್ಕೊಳ ಗಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇದನ್ನು ಮನಗಂಡ ಶಾಸಕರು, ಯಾರೂ ಆತಂಕಪಡುವ ಅಗತ್ಯವಿಲ್ಲ. ಆಕಸ್ಮಿಕವಾಗಿ ಜಾರಿಬಿದ್ದು ಕಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಆದಷ್ಟು ಬೇಗ ನಿಮ್ಮ ಸೇವೆಗೆ ಮರಳುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು.

ಶಾಸಕರ ಆರೋಗ್ಯದ ಬಗ್ಗೆ ಪಕ್ಷಾತೀತವಾಗಿ ಹಿತೈಷಿಗಳು ಕಾಳಜಿ ವ್ಯಕ್ತಪಡಿಸಿದ್ದು, ಕ್ಷೇತ್ರದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆಗಳು ನಡೆದಿವೆ. ಚರ್ಚ್‌ಗಳು ಹಾಗೂ ಮಸೀದಿಗಳಲ್ಲಿಯೂ ಅವರ ಆರೋಗ್ಯ ಸುಧಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಕಾಳಜಿಗೆ ಸಾಕ್ಷಿಯಾಗಿದೆ.

1584716 ಒಕ

ಸೋಮವಾರ ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಒಗ್ಗೂಡಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕಾಲಿನ ಮೂಳೆ ಶೀಘ್ರವಾಗಿ ಕೂಡಿಕೊಂಡು, ಶಾಸಕರು ಸಂಪೂರ್ಣ ಆರೋಗ್ಯವಂತ ರಾಗಿ ಮತ್ತೆ ಕ್ಷೇತ್ರಕ್ಕೆ ಮರಳಿ ಜನರ ಸಮಸ್ಯೆಗಳನ್ನು ಆಲಿಸುವಂತಾಗಲಿ ಎಂದು ದೇವರಲ್ಲಿ ಮನಸಾರೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಡಾನ್ಸ್ ಶ್ರೀನಿವಾಸ್, ಶಾಸಕ ಪ್ರದೀಪ್ ಈಶ್ವರ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ವಿರೋಧಿಗಳು ಮಾಡುವ ಟೀಕೆಗಳನ್ನು ಬದಿಗಿಟ್ಟು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದರೆ, ಶಾಸಕರು ಚಿಕ್ಕಬಳ್ಳಾಪುರದ ಸಮಗ್ರ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ತಿಳಿಯುತ್ತದೆ. ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಆರೋಗ್ಯ ಸುಧಾರಿಸಿ ಮತ್ತೆ ಜನರ ಮಧ್ಯೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂಬ ಕಾರಣಕ್ಕೆ ತಾಲ್ಲೂಕಿನ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ ಎಂದರು.

ಮಾಜಿ ಶಾಸಕ ಶಿವಾನಂದ್ ಮಾತನಾಡಿ, ಜನಪರ ಕಾಳಜಿಯುಳ್ಳ ಶಾಸಕ ಪ್ರದೀಪ್ ಈಶ್ವರ್ ಅವರು ಸಂಪೂರ್ಣ ಆರೋಗ್ಯವಂತರಾಗಿ ಕ್ಷೇತ್ರಕ್ಕೆ ಮರಳಬೇಕು. ಆಕಸ್ಮಿಕ ಘಟನೆಯಿಂದ ಕಾಲಿನ ಮೂಳೆಗೆ ಪೆಟ್ಟಾಗಿದ್ದರೂ, ವೈಯಕ್ತಿಕ ನೋವಿನ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳುವ ಅವರ ಆಸಕ್ತಿ ಸೇವಾ ಮನೋಭಾವವನ್ನು ತೋರಿಸುತ್ತದೆ. ಭಗವಂತನ ಕೃಪೆಯಿಂದ ಅವರು ಬೇಗನೆ ಚೇತರಿಸಿಕೊಂಡು ಕ್ಷೇತ್ರಕ್ಕೆ ಮರಳಲಿ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ರೂಪುರೇಷೆಗಳನ್ನು ಸಿದ್ಧಪಡಿಸುವುದರ ಜೊತೆಗೆ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿ. ಕಂದವಾರ ಕೆರೆಯ ರಸ್ತೆಯ ಸಮಸ್ಯೆಯನ್ನೂ ಆದಷ್ಟು ಬೇಗ ಸರಿಪಡಿಸಲಾಗುವುದು ಎಂದರು.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂದೀಪ್ ಚಕ್ರವರ್ತಿ ಮಾತನಾಡಿ, ನಮ್ಮ ನಾಯಕ ಶಾಸಕ ಪ್ರದೀಪ್ ಈಶ್ವರ್ ಅವರ ಆರೋಗ್ಯ ಸುಧಾರಿಸಲಿ ಎಂಬ ಉದ್ದೇಶದಿಂದ ಅಭಿಮಾನಿಗಳೆಲ್ಲರೂ ಸೇರಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದೇವೆ. ಅವರು ಸಂಪೂರ್ಣ ಚೇತರಿಸಿಕೊಂಡು ಕ್ಷೇತ್ರಕ್ಕೆ ಮರಳಿದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲಾಗುವುದು ಎಂದರು.

ಏಡುಕೊಂಡಲು ಶ್ರೀನಿವಾಸ್ ಮಾತನಾಡಿ, ಶಾಸಕರಿಗೆ ಕಾಲಿನ ಮೂಳೆಯ ಸಮಸ್ಯೆಯಾಗಿರುವುದು ಗಮನಕ್ಕೆ ಬಂದ ಕೂಡಲೇ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಇಂದು ಅಭಿಮಾನಿ ಗಳೆಲ್ಲರೂ ಒಟ್ಟಾಗಿ ಭಗವಂತನ ಸೇವೆ ಮಾಡುವ ಮೂಲಕ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದೇವೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಶಾಸಕರು ಶೀಘ್ರ ಗುಣಮುಖ ರಾಗಿ ಮರಳಿದ ಬಳಿಕ ಅವರ ಜನಸೇವೆಯ ಕಾರ್ಯಗಳು ಎಂದಿನಂತೆ ನಿರ್ವಿಘ್ನವಾಗಿ ಮುಂದುವರಿಯಲಿವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಕರವೇ ಶ್ರೀಧರ್ ಮಾತನಾಡಿ, ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವುದು, ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗುವುದು ಶಾಸಕರ ಕಾರ್ಯಶೈಲಿಯಾಗಿದೆ. ಇಂತಹ ಜನಸಂಪರ್ಕ ಹೊಂದಿರುವ ವ್ಯಕ್ತಿಗೆ ಕಾಲಿಗೆ ಪೆಟ್ಟಾಗಿರುವುದು ಅಭಿಮಾನಿಗಳಿಗೆ ನೋವು ತಂದಿದೆ. ಕಾಲಿನ ನೋವಿನ ನಡುವೆಯೂ ತಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು ಅವರ ಶಿಕ್ಷಣದ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಶಾಸಕರು ಸಂಪೂರ್ಣ ಗುಣಮುಖರಾಗಿ ಮತ್ತೆ ಎಂದಿನಂತೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಲಿ ಎಂಬ ಉದ್ದೇಶದಿಂದ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ 101 ತೆಂಗಿನಕಾಯಿ ಒಡೆಯಲಾಗಿದೆ ಎಂದು ತಿಳಿಸಿದರು.

ಶಾಸಕರ ಆರೋಗ್ಯದ ಬಗ್ಗೆ ರಾಜಕೀಯ ಭಿನ್ನಾಭಿಪ್ರಾಯಗಳಾಚೆಗೂ ವಿವಿಧ ವರ್ಗಗಳ ಜನರು ತೋರುತ್ತಿರುವ ಕಾಳಜಿ, ಅಭಿಮಾನ ಹಾಗೂ ಹಾರೈಕೆಗಳು ಈ ಸಂದರ್ಭದಲ್ಲಿ ಗಮನ ಸೆಳೆದವು. ಶಾಸಕರು ಶೀಘ್ರ ಚೇತರಿಸಿಕೊಂಡು ಮತ್ತೆ ಜನರ ನಡುವೆ ಕಾಣಿಸಿಕೊಳ್ಳಬೇಕು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಬೇಕು ಹಾಗೂ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾರ್ಯ ಗಳನ್ನು ಮುಂದುವರಿಸಬೇಕು ಎಂಬುದು ಅಭಿಮಾನಿಗಳು ಮತ್ತು ಹಿತೈಷಿಗಳ ಆಶಯವಾಗಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾನ್ಸ್ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ರಕ್ಷಿತ್ ರೆಡ್ಡಿ, ಎನ್.ಬಿ.ಕೆ ರಾಜು, ಕರವೇ ಶ್ರೀಧರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂದೀಪ್ ಚಕ್ರವರ್ತಿ, ಅಣ್ಣಮ್ಮ, ಮೋಹನ್, ಏಳುಕೊಂಡಲು ಶ್ರೀನಿವಾಸ್, ಹಮೀಮ್, ತಂಝೀಮ್, ಬಾಬಾಜಾನ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.