ಚಿಕ್ಕಬಳ್ಳಾಪುರ: ಐತಿಹಾಸಿಕ ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿನಾರೇಯಣ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ಗುರುಪೂಜಾ ಸಂಗೀತೋತ್ಸವದ ಎರಡನೇ ದಿನ ಭಕ್ತಿ, ಸಂಗೀತ ಹಾಗೂ ಸಾಂಸ್ಕೃತಿಕ ವೈಭವದ ಸಂಭ್ರಮ ಮನೆ ಮಾಡಿತು.
ಬೆಳಗ್ಗಿನಿಂದಲೇ ನಾದಸ್ವರ ಹಾಗೂ ತವಿಲ್ ವಾದನದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆ ಯಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಖ್ಯಾತ ಕಲಾವಿದರು ಕಂಠಸಂಗೀತ, ವಾದ್ಯ ಸಂಗೀತ ಮತ್ತು ನೃತ್ಯ ಪ್ರದರ್ಶನಗಳ ಮೂಲಕ ಸಂಗೀತಾಭಿಮಾನಿಗಳನ್ನು ರಂಜಿಸಿದರು. ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದ್ದು, ಸಾವಿರಾರು ಭಕ್ತರು ದರ್ಶನ ಪಡೆದು ಗುರುಸೇವೆಯಲ್ಲಿ ಭಾಗಿಯಾದರು.
ಸಂಜೆಯ ವಿಶೇಷ ಕಾರ್ಯಕ್ರಮದಲ್ಲಿ ಸುಮಂತ್ ಮತ್ತು ಮಾಳವಿಕಾ ಅವರ ಪಿಟೀಲು ಸೋಲೋ, ಶಂಕರ್ ನಂಬೂದರಿ ಅವರ ಗಾಯನ, ಅಮಿತ್ ಎ. ನಾಡಿಗ್ ಅವರ ಕೊಳಲು ವಾದನ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದ ಜಾನಪದ ಗಾಯನ, ಹೈದರಾಬಾದ್‌ನ ಎಸ್.ಎಂ. ಸುಭಾನಿ ಅವರ ಮ್ಯಾಂಡೋಲಿನ್ ವಾದನ ಹಾಗೂ ನೂಪುರ ಫೈನ್ ಆರ್ಟ್ಸ್ ತಂಡದ ಕೂಚಿಪುಡಿ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಚಿಂತಾಮಣಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ಸಂಗೀತೋತ್ಸವಕ್ಕೆ ಭೇಟಿ ನೀಡಿ ಕಾರ್ಯಕ್ರಮ ವೀಕ್ಷಿಸಿದರು. ಇದೇ ವೇಳೆ ಕೋಲಾಟ, ಭಜನೆ, ಹರಿಕಥೆ, ಬುರುಕಥೆ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರದರ್ಶನಗಳು ನಡೆದವು. ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಇಂದು ಗುರುಪೂಜೆ
ಬುಧವಾರ (ಜು.29) ಗುರುಪೂರ್ಣಿಮೆಯ ಅಂಗವಾಗಿ ಬೆಳಿಗ್ಗೆ ನಾದಸ್ವರ ಸೇವೆ, ಪಂಚರತ್ನ ಕೀರ್ತನೆಗಳ ಗಾಯನ, ಸದ್ಗುರು ತಾತಯ್ಯನವರ ಗುರುಪೂಜೆ, ವಿಶೇಷ ಅಭಿಷೇಕ, ರಾಜೋಪಚಾರ, ಷೋಡಶೋಪಚಾರ ಹಾಗೂ ಅಷ್ಟಾವಧಾನ ಸೇವೆಗಳು ನಡೆಯಲಿವೆ. ಧರ್ಮಾಧಿಕಾರಿ ಡಾ. ಎಂ.ಆರ್. ಜಯರಾಮ್ ಅವರಿಂದ ಗುರುಚಿಂತನಾ ಸಂದೇಶ ಕಾರ್ಯಕ್ರಮವೂ ನಡೆಯಲಿದೆ.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ಮಲ್ಲಾರ ಮಾಸಪತ್ರಿಕೆಯ ಸಂಪಾದಕ ಡಾ.ಬಾಬು ಕೃಷ್ಣಮೂರ್ತಿ ಅವರಿಗೆ "ನಾರೇಯಣ ಪ್ರಶಸ್ತಿ" ಪ್ರದಾನ ಮಾಡಲಾಗುತ್ತದೆ.
ಮಧ್ಯಾಹ್ನ ಹಾಗೂ ಸಂಜೆ ನಡೆಯುವ ಕಾರ್ಯಕ್ರಮಗಳಲ್ಲಿ ದೇಶದ ವಿವಿಧ ರಾಜ್ಯಗಳ ಖ್ಯಾತ ಗಾಯಕರು, ವಾದಕರು ಮತ್ತು ನೃತ್ಯ ಕಲಾವಿದರು ಭಾಗವಹಿಸಿ ಸಂಗೀತೋತ್ಸವಕ್ಕೆ ಮೆರುಗು ನೀಡಲಿದ್ದಾರೆ.