Chikkaballapur News: ಆಗಸ್ಟ್ 17ರವರೆಗೆ ಮನೆ-ಮನೆ ಭೇಟಿ ಮುಂದುವರಿಕೆ; ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಜಿ. ಪ್ರಭು
ಮತದಾರರು ನೀಡಿರುವ ಗಣತಿ ನಮೂನೆಗಳಲ್ಲಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಿದ್ದು, ಈವರೆಗೆ ನಮೂನೆ ಸಲ್ಲಿಸಿರುವ ಎಲ್ಲ ಮತದಾರರ ಮಾಹಿತಿ ಯನ್ನು ಗಣಕೀಕರಣ ಮಾಡುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ
-
ಚಿಕ್ಕಬಳ್ಳಾಪುರ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-2026) ಕಾರ್ಯ ಜಿಲ್ಲೆಯಾದ್ಯಂತ ಸುಗಮವಾಗಿ ನಡೆಯುತ್ತಿದ್ದು, ಇದುವರೆಗೆ 1,069,504 ಗಣತಿ ನಮೂನೆಗಳನ್ನು ಮತದಾರರಿಗೆ ಶೇ.100ರಷ್ಟು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.
ನಗರ ಹೊರವಲಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿ ಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 1,069,504 ಮತದಾರರಿದ್ದು, ಅವರಲ್ಲಿ 9,52,145 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಒಟ್ಟಾರೆ ಶೇ.89.03ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲ್ಲೂಕುವಾರು ಡಿಜಿಟಲೀಕರಣದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಶೇ.91.70 ಪ್ರಗತಿ ಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ಗೌರಿಬಿದನೂರು (91.02%), ಬಾಗೇಪಲ್ಲಿ (91.05%), ಶಿಡ್ಲಘಟ್ಟ (88.24%) ಹಾಗೂ ಚಿಂತಾಮಣಿ (83.69%) ಕ್ಷೇತ್ರಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಇದನ್ನೂ ಓದಿ: Chikkaballapur News: ಆಗಸ್ಟ್ 15ಕ್ಕೆ ಭವ್ಯ ಸಿದ್ಧತೆ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಕಟ್ಟುನಿಟ್ಟಿನ ಸೂಚನೆ
ಮತದಾರರು ನೀಡಿರುವ ಗಣತಿ ನಮೂನೆಗಳಲ್ಲಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಿದ್ದು, ಈವರೆಗೆ ನಮೂನೆ ಸಲ್ಲಿಸಿರುವ ಎಲ್ಲ ಮತದಾರರ ಮಾಹಿತಿಯನ್ನು ಗಣಕೀಕರಣ ಮಾಡುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಎಸ್‌ಐಆರ್ ಪರಿಶೀಲನೆಯಲ್ಲಿ ಇದುವರೆಗೆ 1,17,359 ಪ್ರಕರಣಗಳು ಎಎಸ್‌ಡಿಡಿಒ (ಮರಣ, ಶಾಶ್ವತ ಸ್ಥಳಾಂತರ, ದ್ವಿ ನೋಂದಣಿ, ಗೈರು ಹಾಜರಿ ಮತ್ತಿತರ) ವಿಭಾಗದಲ್ಲಿ ಗುರುತಿಸಲಾಗಿದೆ. ಇದರಲ್ಲಿ 28,357 ಮರಣ, 72,625 ಶಾಶ್ವತ ಸ್ಥಳಾಂತರ, 9169 ಈಗಾಗಲೇ ನೋಂದಣಿ, 7167 ಗೈರು ಹಾಜರಿ ಹಾಗೂ 41 ಇತರೆ ಪ್ರಕರಣಗಳಿವೆ. 32005 ಮತದಾರರ ವಿಳಾಸ ಮ್ಯಾಪಿಂಗ್ ಬಾಕಿ ಇದ್ದು, ಅದನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಎಸ್‌ಐಆರ್ ಸಾಧನೆಯ ಹಿಂದೆ ರಾಜಕೀಯ ಪಕ್ಷಗಳ ಸಹಕಾರವೂ ತೃಪ್ತಿಕರವಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್‌ನ 1290, ಬಿಜೆಪಿ 1180, ಜೆಡಿಎಸ್ 778, ಸಿಪಿಐ(ಎಂ) 130 ಸೇರಿದಂತೆ ಒಟ್ಟು 3378 ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ) ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಎಸ್‌ಐಆರ್ ಪರಿಷ್ಕೃತ ವೇಳಾಪಟ್ಟಿಯಂತೆ ಆಗಸ್ಟ್ 17ರವರೆಗೆ ಮನೆ-ಮನೆ ಭೇಟಿ, ಆಗಸ್ಟ್ 17ರಿಂದ ಸೆಪ್ಟೆಂಬರ್ 1ರವರೆಗೆ ಕರಡು ಪಟ್ಟಿ ಪ್ರಕಟ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 15ರವರೆಗೆ ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು, ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.
ದಿನಾಂಕ 29ರಿಂದ 2ನೇ ಸುತ್ತಿನ ಎಎಸ್‌ಡಿಡಿಒಗಳನ್ನು ಮರುಪರಿಶೀಲನೆ ಕಾರ್ಯವನ್ನು ಹಮ್ಮಿ ಕೊಂಡಿದ್ದು ಈಗಾಗಲೇ ಮಾನ್ಯತೆ ಪಡೆದ ಪಕ್ಷದಿಂದ ನೇಮಕ ಮಾಡಲಾದ ಬಿಎಲ್‌ಎ-2ಗಳಿಗೆ ಎಎಸ್‌ಡಿಡಿಒ ಪಟ್ಟಿಯನ್ನು ಸಂಬಂಧಪಟ್ಟ ಬಿಎಲ್‌ಒಗಳ ಮುಖಾಂತರ ನೀಡಲಾಗಿರುತ್ತದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಇಆರ್‌ಒ ಹಂತದಲ್ಲಿ ವಿಧಾನಸಭಾ ಕ್ಷೇತ್ರದ ಮಾಹಿತಿ ಯನ್ನು ವಿತರಿಸಲು ಕ್ರಮವಹಿಸಲಾಗುವುದು ಎಂದರು.
ಮುಖ್ಯ ಅಂಶಗಳು
ಜಿಲ್ಲೆಯ ಒಟ್ಟು ಮತದಾರರು: 1,069,504
ಗಣತಿ ನಮೂನೆ ವಿತರಣೆ: 100%
ಡಿಜಿಟಲೀಕರಣ: 9,52,145 (89.03%)
ಎಎಸ್‌ಡಿಡಿಒ ಪ್ರಕರಣಗಳು: 1,17,359
ಬಾಕಿ ವಿಳಾಸ ಮ್ಯಾಪಿಂಗ್: 32005
ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್ 19, 2026
ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕ ರೂ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ. ಜಿಲ್ಲೆಯ ಮತದಾರರ ಪಟ್ಟಿಯನ್ನು ಸಂಪೂರ್ಣ, ನಿಖರ ಹಾಗೂ ದೋಷರಹಿತವಾಗಿಸಲು ಸಾರ್ವಜನಿಕರು ಜಿಲ್ಲಾಡಳಿತ ದೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಈ ವೇಳೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಎಂ ಆರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.