ಗೌರಿಬಿದನೂರು: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಹಿಳಾ ನಿರ್ದೇಶಕಿ ಹಾಗೂ ಹಿಂದುಳಿದ ವರ್ಗದ ಕುರುಬ ಸಮುದಾಯದ ಸುಧಾ ಅವರನ್ನು ಸೋಲಿಸಲೇಬೇಕೆಂದು ಎಲ್ಲಾ ರೀತಿಯ ಷಡ್ಯಂತರಗಳನ್ನು ನಡೆಸಿದರೂ ಕೂಡ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಮತದಾರರು ಸುಧಾ ಅವರನ್ನೂ ಸೇರಿ ನಮ್ಮ ಬಣದ ಎಲ್ಲಾ ಹನ್ನೆರಡು ಮಂದಿ ಅಭ್ಯರ್ಥಿಗಳನ್ನೂ ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸುವ ಮೂಲಕ ನಮ್ಮ ರಾಜಕೀಯ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ(MLA K.H.Puttaswamy Gowda)ರು ತಿಳಿಸಿದರು.
ಅಲಕಾಪುರ ಸಮೀಪದ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಹನ್ನೆರಡು ಮಂದಿ ನಿರ್ದೇಶಕರ ಆಯ್ಕೆ ಗಾಗಿ ನಡೆದ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲಾ ಪಕ್ಷದ ಮುಖಂಡರುಗಳು ಒಂದಾಗಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಮಹಿಳಾ ನಿರ್ದೇಶಕಿಯನ್ನು ಸೋಲಿಸಿ ನನಗೆ ಮುಖ ಭಂಗ ಮಾಡಬೇಕೆಂಬ ಉದ್ದೇಶ ಹೊಂದಿದ್ದರು.
ಇದನ್ನೂ ಓದಿ: MLA Puttaswamy Gowda: ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಮೂಲಾಗ್ರ ಬದಲಾವಣೆಗೆ ಬದ್ಧ: ಶಾಸಕ ಪುಟ್ಟಸ್ವಾಮಿಗೌಡ
ಅವರ ಹುನ್ನಾರಗಳಿಗೆ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಸ್ವಾಭಿಮಾನಿ ಮತದಾರರು ಸೊಪ್ಪು ಹಾಕದೆ ನಮ್ಮ ಬಣದ ತಂಡವನ್ನು ಆಯ್ಕೆ ಮಾಡಿ, ಸುಧಾ ಅವರನ್ನು ಮುಂದಿನ ಐದು ವರ್ಷಗಳ ಕಾಲ ಚಿಮೂಲ್ ನಿರ್ದೇಶಕಿ ಯಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಮತದಾರ ರಿಗೆ ಕೃತಜ್ಞತೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಚಿಮೂಲ್ ನಿರ್ದೇಶಕ ಜೆ.ಕಾಂತರಾಜು ಕಳೆದ ಚಿಮೂಲ್ ಚುನಾವಣೆಯಲ್ಲಿ ನನ್ನ ವಿರುದ್ದ ಒಬ್ಬ ಕುರುಬ ಸಮುದಾಯದ ಅಭ್ಯರ್ಥಿಯನ್ನು ನಿಲ್ಲಿಸಿ, ಒಳಗೊಳಗೆ ಮತ್ತೊಬ್ಬ ಅಭ್ಯರ್ಥಿಗೆ ಕೆಲಸ ಮಾಡಿ, ಬಲಿಪಶು ಮಾಡಿ ಅನ್ಯಾಯವೆಸಗಿದ್ದು ಜಗಜಾಹೀರಾಗಿದೆ ಎಂದರು.
ಡಿಸಿಪಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ ನಗರಸಭೆ ಮಾಜಿ ಸದಸ್ಯ ಜಿಕೆ. ಸತೀಶ್, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರರೆಡ್ಡಿ, ಪಿಎಲ್ಟಿ ಬ್ಯಾಂಕ್ ಅಧ್ಯಕ್ಷ ವಿಜಯರಾಘವ, ಮುಖಂಡರಾದ ಬೊಮ್ಮಣ್ಣ, ಅಬ್ದುಲ್ಲಾ, ಲಕ್ಷ್ಮಣ್ ರಾವ್ .ಭಕ್ತರಹಳ್ಳಿ ಚಂದ್ರಣ್ಣ ಇದ್ದರು.