ಚಿಕ್ಕಬಳ್ಳಾಪುರ : ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ನಿಶ್ಚಿತಗುರಿ ಸಾಧಿಸಲು ಸುಖವನ್ನು ತ್ಯಜಿಸಿ ಶ್ರಮಿಸಬೇಕು.ಯಾರೂ ಕೂಡ ರಾತ್ರೋ ರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಮಯ ಕೂಡಿಬರಬೇಕು ಎಂದು ಕನ್ನಡ ಚಲನಚಿತ್ರ ನಟ, ನಿರ್ದೇಶಕ ಡಾಲಿ ಧನಂಜಯ್(Daali Dhananjay) ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರ ಹೊರವಲಯದ ನಾಗಾರ್ಜುನ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಐಕ್ಯ - 2026 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಷ್ಯ ಜೀವನದ ಪ್ರತಿಯೊಂದು ಹಂತವೂ ಬಹುಮುಖ್ಯ. ಅದರಲ್ಲೂ ವಿದ್ಯಾರ್ಥಿ ಜೀವನ ಜೀವನದ ಅತೀ ಮುಖ್ಯ ಘಟ್ಟ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ಜೀವನವನ್ನು ಹೆಚ್ಚು ಅನುಭವಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Daali Dhananjaya: ಗಂಡು ಮಗುವಿನ ತಂದೆಯಾದ ನಟ ಡಾಲಿ ಧನಂಜಯ್; ಮಗುವಿನ ಕ್ಯೂಟ್ ಫೋಟೋ ಕಂಡು ಫ್ಯಾನ್ಸ್ ಸಂತಸ
ನಾವು ಅಂದುಕೊಂಡಂತೆ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಎಂದಿಗೂ ಧೃತಿ ಗೆಡಬೇಡಿ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸೋಲನ್ನು ಅನುಭವಿಸಬೇಕು. ಸೋಲಿನ ಅನುಭವವಾದಾಗಲೇ ಗೆಲುವಿನ ದಾರಿ ತಿಳಿಯುತ್ತದೆ. ಆದ್ದರಿಂದ, ಸೋತು ಗೆಲ್ಲೋಣ ಎಂದು ತಮ್ಮ ಜೀವನದ ಅನುಭವ ಹಂಚಿಕೊಂಡರು.
ಹೆಣ್ಣುಮಕ್ಕಳನ್ನು ಗೌರವಿಸಿ : ನಾವೆಲ್ಲರೂ ಹೆಣ್ಣುಮಕ್ಕಳನ್ನು ಸದಾ ಗೌರವಿಸಬೇಕು. ಯಾಕೆಂದರೆ, ತಾಯಿಯಾಗಿ, ತಂಗಿಯಾಗಿ, ಸ್ನೇಹಿತೆಯಾಗಿ, ಮಡದಿಯಾಗಿ ನಮ್ಮನ್ನು ಸದಾ ಕಾಯುವವರು ಒಬ್ಬ ಸ್ತ್ರೀ ಮಾತ್ರ. ಒಂದು ಸಂಸ್ಥೆಯನ್ನು ಒಬ್ಬ ಸ್ತ್ರೀ ನಡೆಸುತ್ತಿದ್ದಾರೆಂದರೆ, ಆ ಸಂಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದರ್ಥ ಎಂದು ಹೇಳಿದರು.
ಜೆನ್‌ಜಿಗಾಗಿಯೇ ಮದರ್ ಪ್ರಾಮಿಸ್ ಸಿನಿಮಾ: ಇದೀಗ ಜೆನ್ ಜಿ ಜನರೇಶನ್ ಬಂದಿದೆ. ನಿಮಗಾಗಿಯೇ ಮದರ್ ಪ್ರಾಮಿಸ್ ಎಂಬ ಹೊಚ್ಚಹೊಸ ಸಿನಿಮಾ ಮಾಡಿದ್ದೇವೆ. ಕುಟುಂಬಸ್ಥ ರೆಲ್ಲರೂ ಕುಳಿತು ವೀಕ್ಷಿಸುವ, ನಕ್ಕು ನಲಿಯುವ ಸಿನಿಮಾ ಎಲ್ಲರೂ ನೋಡಿ ಆನಂದಿಸಿ ಮತ್ತು ರಂಗಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಕನ್ನಡ ಸಿನಿಮಾಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಇದೇ ವೇಳೆ ಎನ್.ಜಿ.ಐ ನಿರ್ದೇಶಕ ಡಾ.ಎಸ್.ಜಿ.ಗೋಪಾಲಕೃಷ್ಣ, ಕಾಲೇಜು ಪ್ರಾಂಶುಪಾಲ ಡಾ.ಜಿ.ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಎರಡನೇ ದಿನದಂದು ಕ್ಲಾಸಿಕಲ್ ಸೋಲೋ, ವೆಸ್ಟರ್ನ್ ಸೋಲೋ, ಫ್ಯಾಷನ್ ವಾಕ್, ಡಿಜೆ ನೈಟ್ ಮೂಲಕ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಡಿಜೆ ನೈಟ್: ಕೊನೆಗೆ ನಡೆದ ಡಿಜೆ ನೈಟ್ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.
ಫ್ಯಾಷನ್ ವಾಕ್ ಗೆ ಮನಸೋತ ವಿದ್ಯಾರ್ಥಿಗಳು: ಎರಡನೇ ದಿನ ಆಯೋಜಿಸಿದ್ದ ಫ್ಯಾಷನ್ ವಾಕ್ ವಿದ್ಯಾರ್ಥಿಗಳ ಮನಸೂರೆಗೊಳಿಸಿತು. ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನ ಸೆಳೆದ ಐಪಿಎಲ್ ಆಕ್ಷನ್ ವಾರ್: ಮ್ಯಾನೇಜ್ ಮೆಂಟ್ ವಿಭಾಗ ಆಯೋಜಿಸಿದ್ದ ಐಪಿಎಲ್ ಆಕ್ಷನ್ ವಾರ್ ಹೆಚ್ಚು ಯುವಜನರ ಗಮನ ಸೆಳೆಯಿತು. ರಾಜ್ಯದ ವಿವಿಧ ಕಾಲೇಜುಗಳ 60 ತಂಡ ಗಳು ಭಾಗವಹಿಸಿದ್ದವು. ಈ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಪಡೆದವು.
ಸಮಾರೋಪ ಸಮಾರಂಭದಲ್ಲಿ ನಟ ವಿನಯ್‌ರಾಜ್ ಕುಮಾರ್, ನಟಿ ಮೇಘನಾ ಶೆಟ್ಟಿ ಹಾಜರಿದ್ದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ನಾಗಾರ್ಜುನ ಎಜುಕೇಶನ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾನು ಚೈತನ್ಯ ವರ್ಮಾ, ಎನ್.ಸಿ.ಎಂ.ಎಸ್ ಪ್ರಾಂಶುಪಾಲರಾದ ಆನಂದಮ್ಮ, ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಲತಾ, ಆಡಳಿತ ಮಂಡಳಿ ವಿಭಾಗದ ಕಿಶನ್, ಶಿಬು, ಮಂಜುನಾಥ್ ಬಚ್ಚೇಗೌಡ ಹಾಗೂ ಇತರೆ ಗಣ್ಯರು ಹಾಜರಿದ್ದರು.