ಚಿಕ್ಕಬಳ್ಳಾಪುರ : ಕೋವಿಡ್ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳೊಂದಿಗೆ ಈ ವರ್ಷವೂ ಸಂಸದ ಡಾ.ಕೆ.ಸುಧಾಕರ್(MP Dr K Sudhakar) ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಮಕ್ಕಳಿಗೆ ಧೈರ್ಯ ನೀಡಿ ಶುಭ ಹಾರೈಸಿದರು.
ಕೋವಿಡ್ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಒಂಬತ್ತು ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಸೇರಿದಂತೆ ಸಂಪೂರ್ಣ ಆರ್ಥಿಕ ವೆಚ್ಚವನ್ನು ಸಂಸದ ಡಾ.ಕೆ.ಸುಧಾಕರ್ ಭರಿಸುತ್ತಿದ್ದಾರೆ. ದೀಪಾವಳಿಯ ದಿನವಾದ ಸೋಮವಾರದಂದು ಮಕ್ಕಳೊಂದಿಗೆ ಅವರು ಸಮಯ ಕಳೆದು ಭೋಜನ ಮಾಡಿದರು.
ನಂತರ ಮಾತನಾಡಿದ ಅವರು, ಈ ಮಕ್ಕಳ ಬದುಕು ರೂಪಿಸಲು ಸಂಪೂರ್ಣ ವೆಚ್ಚವನ್ನು ಭರಿಸ ಲಾಗುತ್ತಿದೆ. ಅವರ ಬ್ಯಾಂಕ್ ಖಾತೆಗಳಲ್ಲಿ 1 ಲಕ್ಷ ರೂ. ಠೇವಣಿ ಇರಿಸಿದ್ದು, ಶಿಕ್ಷಣ ಮುಗಿಸಿದ ಬಳಿಕ ಅವರಿಗೆ ಹಣ ಸಿಗಲಿದೆ.
ಒಂಬತ್ತು ಮಕ್ಕಳಲ್ಲಿ ಇಬ್ಬರು ಅಲ್ಪಸಂಖ್ಯಾತರು, ಮೂವರು ದಲಿತರು, ಇಬ್ಬರು ಹಿಂದುಳಿದ ವರ್ಗದವರಿದ್ದಾರೆ. ಹೆಚ್ಚಿನವರು ಹೆಣ್ಣುಮಕ್ಕಳಾಗಿದ್ದಾರೆ. ಈ ಮಕ್ಕಳಿಗೆ ತಂದೆ ತಾಯಿ ಇಲ್ಲ, ಹಬ್ಬ ಮಾಡಲು ಆಗುವುದಿಲ್ಲ ಎಂದು ಅನ್ನಿಸಬಾರದು. ಅದಕ್ಕಾಗಿ ಅವರ ಜೊತೆ ಊಟ ಮಾಡಿ, ಉಡುಪುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಒಬ್ಬ ಹೆಣ್ಣುಮಗಳು ವಕೀಲ ವೃತ್ತಿಗಾಗಿ ಅಭ್ಯಾಸ ಮಾಡುತ್ತಿದ್ದಾರೆ. ಮತ್ತೊಬ್ಬಳು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಾರೆ. ಇಬ್ಬರು ವಸತಿ ಶಾಲೆಯಲ್ಲಿ ಓದುತ್ತಿದ್ದಾರೆ. ಅವರೆಲ್ಲರಿಗೂ ಉನ್ನತ ಶಿಕ್ಷಣ ಕೊಡಿಸಿ ಎಲ್ಲ ಬಗೆಯ ಸಹಕಾರ ನೀಡಲಾಗುವುದು, ಇದು ಬಹಳ ನೆಮ್ಮದಿ ನೀಡುವ ಪವಿತ್ರವಾದ ಕಾರ್ಯ ಎಂದರು.
![]()
ಸಂಸದ ಡಾ.ಕೆ.ಸುಧಾಕರ್ ಅವರು ಸ್ವಂತ ತಂಗಿಯಂತೆ ನಮ್ಮನ್ನು ನೋಡಿಕೊಳ್ಳುತ್ತಾರೆ. ದೀಪಾವಳಿಯಂದು ಆಹ್ವಾನ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸುವಂತೆ ಮಾಡುತ್ತಾರೆ. ಇದು ನನಗೆ ಬಹಳ ಸಂತಸ ತಂದಿದೆ.
ಸ್ನೇಹ, ವಿದ್ಯಾರ್ಥಿನಿ
![]()
ಸಂಸದ ಡಾ.ಕೆ.ಸುಧಾಕರ್ ಅವರು ಮಕ್ಕಳ ಹಾಗೆ ನಮ್ಮನ್ನು ನೋಡಿಕೊಳ್ಳುತ್ತಾರೆ. ಪ್ರತಿ ದೀಪಾವಳಿಯಂದು ಮನೆಗೆ ಕರೆದು ಒಟ್ಟಿಗೆ ಊಟ ಮಾಡಿ ಬಟ್ಟೆಗಳನ್ನು ಉಡುಗೊರೆ ನೀಡಿ ಸಂಭ್ರಮ ಹಂಚಿಕೊಳ್ಳುತ್ತಾರೆ.
-ಮಂಗಳ, ವಿದ್ಯಾರ್ಥಿನಿ