ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr K Sudhakar: ನಾನು ಸೋತಿಲ್ಲ, ಚಿಕ್ಕಬಳ್ಳಾಪುರದ ಅಭಿವೃದ್ಧಿ ಸೋತಿದೆ, ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿಯಾಗುವವರೆಗೂ ನಾನು ವಿರಮಿಸಲ್ಲ: ಸಂಸದ ಡಾ.ಕೆ.ಸುಧಾಕರ್‌

ವರ್ಷಕ್ಕೆ ಒಬ್ಬರು ಇಲ್ಲಿ ನಾಲ್ಕೈದು ಬಾರಿ ಬೋರ್‌ವೆಲ್‌ ಕೊರೆಸುತ್ತಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಅನೇಕರು ಬೋರ್‌ವೆಲ್‌ ಕೊರೆಸಿಲ್ಲ. ನಮ್ಮ ರೈತರು ಹೂ, ಹಣ್ಣು, ತರಕಾರಿಗಳನ್ನು ಬಂಗಾರದಂತೆ ಬೆಳೆದು ಇಡೀ ರಾಜ್ಯಕ್ಕೆ ಪೂರೈಕೆ ಮಾಡುತ್ತಿದ್ದಾರೆ. ರೈತರನ್ನು ಯಾಮಾರಿಸಿ ಜಮೀನು ಕೊಳ್ಳೆ ಹೊಡೆಯುವ ಕೆಲಸ ಮಾಡಿಲ್ಲ ಎಂದರು.

ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿಯಾಗುವವರೆಗೂ ನಾನು ವಿರಮಿಸಲ್ಲ

-

Profile
Ashok Nayak Nov 1, 2026 8:35 PM

ಚಿಕ್ಕಬಳ್ಳಾಪುರ: ನಾನು ಶಾಸಕನಾಗಿದ್ದಾಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಮಗುವಿ ನಂತೆ ನೋಡಿಕೊಂಡಿದ್ದೆ. ಆದರೆ ಈಗ ಈ ಕ್ಷೇತ್ರ ಅಭಿವೃದ್ಧಿ ವಂಚಿತವಾಗಿರುವುದನ್ನು ನೋಡಿ ಮನಸ್ಸಿಗೆ ತೀವ್ರ ಬೇಸರ ಉಂಟಾಗಿದೆ. ನಾನು ಸೋತಿಲ್ಲ, ಬದಲಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ ಸೋತಿದೆ ಎಂದು ಸಂಸದ ಡಾ.ಕೆ.ಸುಧಾಕರ್‌(Dr K Sudhakar) ಹೇಳಿದರು.

ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದ ಭಾಗವಾಗಿ ಸೊಲಾಲಪ್ಪನ ದಿನ್ನೆಯಲ್ಲಿ ನಡೆದ, 5,000 ವಿದ್ಯಾರ್ಥಿಗಳಿಗೆ ಜ್ಞಾನಸುಧಾ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಾನು ಚಿಕ್ಕಬಳ್ಳಾಪುರಕ್ಕಾಗಿ ಭವಿಷ್ಯದ ಕನಸು ಕಂಡಿದ್ದೇನೆ. ನಮ್ಮ ಜಿಲ್ಲೆ ಸಂಪೂರ್ಣವಾಗಿ ಅಭಿವೃದ್ಧಿಯಾಗುವವರೆಗೂ ನಾನು ವಿರಮಿಸುವುದಿಲ್ಲ. ಟೀಕೆಗಳು ಸಾಯುತ್ತವೆ, ಆದರೆ ಅಭಿವೃದ್ಧಿ ಯ ಸಾಕ್ಷಿಗುಡ್ಡೆಗಳು ಚಿರಾಯುವಾಗಿ ಉಳಿಯಲಿದೆ. ನನ್ನನ್ನು ಟೀಕೆ ಮಾಡುವವರು ಬಹಳ ಕಡೆ ಉದ್ಭವವಾಗಿದ್ದಾರೆ. ರೈತರನ್ನು ಯಾಮಾರಿಸಿ ನಾನೆಂದೂ ಬದುಕಿಲ್ಲ. ರೈತರು ಇಂದು ಸಂತೋಷವಾಗಿದ್ದಾರೆ ಎಂದರೆ, ನಾನು ಮಾಡಿದ ನೀರಾವರಿಯ ಕೆಲಸಗಳೇ ಕಾರಣ.

ಇದನ್ನೂ ಓದಿ: MP Dr K Sudhakar: ಒಂದೇ ದಿನ, ಒಂದೇ ಕ್ಷೇತ್ರದಲ್ಲಿ ಎರಡು ಬೃಹತ್ ಕಾರ್ಯಕ್ರಮ: ಜನರ ಒಲವು ಯಾರತ್ತ?

ವರ್ಷಕ್ಕೆ ಒಬ್ಬರು ಇಲ್ಲಿ ನಾಲ್ಕೈದು ಬಾರಿ ಬೋರ್‌ವೆಲ್‌ ಕೊರೆಸುತ್ತಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಅನೇಕರು ಬೋರ್‌ವೆಲ್‌ ಕೊರೆಸಿಲ್ಲ. ನಮ್ಮ ರೈತರು ಹೂ, ಹಣ್ಣು, ತರಕಾರಿಗಳನ್ನು ಬಂಗಾರದಂತೆ ಬೆಳೆದು ಇಡೀ ರಾಜ್ಯಕ್ಕೆ ಪೂರೈಕೆ ಮಾಡುತ್ತಿದ್ದಾರೆ. ರೈತರನ್ನು ಯಾಮಾರಿಸಿ ಜಮೀನು ಕೊಳ್ಳೆ ಹೊಡೆಯುವ ಕೆಲಸ ಮಾಡಿಲ್ಲ ಎಂದರು.

ನಾನು ಶಾಸಕನಾಗಿದ್ದಾಗ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರಿಗೆ 2,500 ಎಕರೆ ಜಮೀನು ಮಂಜೂರು ಮಾಡಿಸಿದ್ದೇನೆ. ನಾನು ಫಲಾನುಭವಿಗಳು ಯಾವ ಜಾತಿಗೆ ಸೇರಿದ್ದಾರೆ ಎಂದು ತಿಳಿಯಲು ಮುಂದಾಗುವುದಿಲ್ಲ. ಚೀಟಿ ಕೊಟ್ಟರೆ ಸಾಲ ವಿತರಣೆಯಾಗುವ ಸ್ಥಿತಿ ಹಿಂದೆ ಇತ್ತು. ಪಿಎಲ್‌ಡಿ ಬ್ಯಾಂಕ್‌, ಕೋಮುಲ್‌, ಮೊದಲಾದ ಸಹಕಾರಿ ಸಂಸ್ಥೆಗಳಲ್ಲಿ ಜನಸ್ನೇಹಿ ಆಡಳಿತ, ಅಭಿವೃದ್ಧಿಪರ ಆಡಳಿತ ನೀಡಲಾಗಿದೆ. ಒಂದೇ ಕ್ಷೇತ್ರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳು ನಿರ್ಮಾಣವಾಗಿದೆ. ನಾನು ಮನವಿ ಮಾಡಿದ ಬಳಿಕ ಸದ್ಗುರು ಶ್ರೀ ಜಗ್ಗಿ ವಾಸುದೇವ್‌ ಅವರ ನೇತೃತ್ವದಲ್ಲಿ ಎರಡನೇ ಆದಿಯೋಗಿ ಧಾರ್ಮಿಕ ಕೇಂದ್ರ ನಿರ್ಮಾಣವಾಗಿದೆ ಎಂದರು.

1cbpm6sudhakra Dr K S

ನಾನು ಮಾಡಿದ ಹತ್ತು ವರ್ಷಗಳ ಪ್ರಗತಿ ಕಾರ್ಯಗಳಿಂದಾಗಿ ಆವಲಗುರ್ಕಿ, ಗೊಲ್ಲಹಳ್ಳಿ ಪಂಚಾ ಯಿತಿ ವ್ಯಾಪ್ತಿಯಲ್ಲಿ ಒಂದು ಎಕರೆ ಜಾಗಕ್ಕೆ 8 ಕೋಟಿ ರೂ. ಮೌಲ್ಯ ಬಂದಿದೆ. ನಂದಿ ಭಾಗದಲ್ಲಿ 10 ಲಕ್ಷ ರೂ. ಎಕರೆ ಭೂಮಿ ಸಿಗುತ್ತಿತ್ತು. ಈಗ 10 ಕೋಟಿ ರೂ. ನೀಡಿದರೂ ಸಿಗುವುದಿಲ್ಲ. ನಾನು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಮಗುವಿನಂತೆ ಸಲಹಿದ್ದೆ. ಆದರೆ ಈಗ ಕ್ಷೇತ್ರ ಅಭಿವೃದ್ಧಿ ಯಿಂದ ವಂಚಿತವಾಗುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಚಿಕ್ಕಬಳ್ಳಾಪುರ ಉತ್ಸವ ನಡೆದಾಗ, ಫಲಪುಷ್ಪ ಗಿರಿಧಾಮನಾಡು ಎಂಬ ಹೆಸರು ನೀಡಲಾಗಿತ್ತು. ನಾಲ್ಕು ಕಡೆ ಹೆಬ್ಬಾಗಿಲು ನಿರ್ಮಿಸಬೇಕೆಂದು ಹೇಳಿದರೆ, ಮಾಡುವಂತಹ ಬದ್ಧತೆ ಯಾರಿಗೂ ಇಲ್ಲ. ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಣವಿದ್ದರೂ ಮಾಡುತ್ತಿಲ್ಲ. ಫಲ, ಪುಷ್ಪ ಹಾಗೂ ಗಿರಿಗಳ ಸಾಲುಗಳ ಅಭಿವೃದ್ಧಿಯನ್ನು ಕಡೆಗಣಿಸಿರುವ ಸರ್ಕಾರ, ಆಡಳಿತವನ್ನು ಹಾಳು ಮಾಡಿದೆ ಎಂದರು.

ಸೋತಿದ್ದು ನಾನಲ್ಲ, ಚಿಕ್ಕಬಳ್ಳಾಪುರದ ಅಭಿವೃದ್ಧಿ, ರೈತರನ್ನು ಯಾಮಾರಿಸಿಲ್ಲ

ಕೆಲವರು ನನ್ನನ್ನು ಸೋಲಿಸುವ ಆಟವಾಡಲು ಮುಂದೆ ಬಂದರು. ಆದರೆ ಇದರಿಂದಾಗಿ ಈಗ ಚಿಕ್ಕಬಳ್ಳಾಪುರದ ಅಭಿವೃದ್ಧಿ ಸೋತಿದೆ. ಆದರೆ ಈ ಆಟಗಳು ಇನ್ನು ನಡೆಯುವುದಿಲ್ಲ. ಕೋವಿಡ್‌ ಸಮಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 5,000 ರೂ. ನೀಡಲಾಗಿತ್ತು. ಆದರೆ ರೈತರಿಗೆ ಯಾಮಾರಿಸಿ ರಿಯಲ್‌ ಎಸ್ಟೇಟ್‌ ಮಾಡಿಲ್ಲ. ನನ್ನ ಅಪ್ಪ ನನ್ನನ್ನು ರೈತರ ಕಣ್ಣೀರು ಒರೆಸುವ ಕಳುಹಿಸಿದಾರೆಯೇ ಹೊರತು, ರೈತರ ಹೊಟ್ಟೆ ಮೇಲೆ ಹೊಡೆಯಲು ಕಳುಹಿಸಿಲ್ಲ. ಕೆಲವರು ನಾಲಿಗೆ ಬಿಗಿಹಿಡಿದು ಮಾತಾಡಬೇಕು. ನಾನು ಸುಮ್ಮನಿದ್ದಷ್ಟೂ ಇಂಥವರು ನಾಲಿಗೆಯನ್ನು ಹರಿಬಿಡುತ್ತಾರೆ. ಹೀಗೆ ಟೀಕೆ ಮಾಡುವವರ ಬದಿಯಲ್ಲಿ ಇರುವವರು ಡಿಸೆಂಬರ್‌ ನಂತರ ಕಳಚಿಕೊಂಡು ದೂರ ಹೋಗುತ್ತಾರೆ. ಯಾರೂ ಇವರೊಂದಿಗೆ ಇರುವುದಿಲ್ಲ ಎಂದರು.

ಕೋವಿಡ್‌ ಸಮಯದಲ್ಲಿ 75,000 ಕುಟುಂಬಗಳಿಗೆ ದಿನಸಿ ಕಿಟ್‌ ನೀಡಿದ್ದರೂ ಅದರ ಬಗ್ಗೆ ಪ್ರಚಾರ ಮಾಡಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ಕೆಲಸ ಮಾಡಿದ್ದೇನೆ. ಇಂತಹ ಸಂಗತಿಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡುವಂತಹ ಕೆಲಸ ಮಾಡಿಲ್ಲ. ನಾನು 2023 ರಲ್ಲಿ ಶಾಸಕನಾಗಿದ್ದರೆ, ನಿವೇಶನ ಪಡೆದ 22,000 ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದೆ ಎಂದರು.

ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ

5,000 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಅವರ ತಂದೆ ತಾಯಂದಿರು ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದಾರೆ. ಇದು ಕೇವಲ 5,000 ರೂ. ಮೊತ್ತದ ವಿಚಾರವಲ್ಲ. ಇದರಲ್ಲಿ ಹತ್ತು ಸಾವಿರ ಜನ ಕನಸುಗಳಿವೆ. ತಾಯಂದಿರ ಪ್ರಾರ್ಥನೆ, ತಂದೆಯ ತ್ಯಾಗವಿದೆ. ಈಗ ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಜಾಲತಾಣಗಳಿವೆ. ಆದರೆ ವಿದ್ಯಾರ್ಥಿಗಳು ರೀಲ್ಸ್‌ ನೋಡಿ ವೈರಲ್‌ ಮಾಡುವುದು ಮುಖ್ಯವಲ್ಲ. ವಿದ್ಯಾರ್ಥಿಗಳು ವೈರಲ್‌ ಆಗುವುದನ್ನು ನಾನು ಬಯಸುವುದಿಲ್ಲ. ಆದರೆ ಸಮಾಜಕ್ಕೆ ಏನಾದರೂ ಮಾಡಬೇಕೆಂದು ಬಯಸುತ್ತೇನೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಆರ್ಥಿಕ ಸ್ಥಿತಿ ತೊಡಕಾಗಬಾರದು. ದೊಡ್ಡ ಕನಸನ್ನು ಕಂಡು ಅದಕ್ಕಾಗಿ ಶ್ರಮಿಸಬೇಕು. ಈ ರಾಜ್ಯೋತ್ಸವದ ಮೂಲಕ 10,000 ವಿದ್ಯಾರ್ಥಿಗಳ ಕನಸು ನನಸಾಗಲು ಪ್ರೇರಣೆ ದೊರೆಯಬೇಕು ಎಂದರು.

ನಾನು ರೈತ ಕುಟುಂಬದಿಂದ ಬಂದಿದ್ದು, ಬಡ ವಿದ್ಯಾರ್ಥಿಗಳ ಕಷ್ಟವನ್ನು ಅರಿತಿದ್ದೇನೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲಾಗುತ್ತಿದೆ ಎಂದರು.  

ಕನ್ನಡ ಭಾಷೆಗೆ ಗಡಿ ಹಾಕಿಲ್ಲ

ಕೋಲಾರ ಸೇರಿದಂತೆ ಚಿಕ್ಕಬಳ್ಳಾಪುರ ಎಂದರೆ, ಚಿನ್ನ ಹಾಗೂ ತರಕಾರಿ ನೀಡುತ್ತಿರುವ ಜಿಲ್ಲೆಗಳು. ಬೆವರು ಸುರಿಸಿ ಶ್ರಮಿಸುವ ರೈತರು ನಮ್ಮ ಜಿಲ್ಲೆಗಳಲ್ಲಿದ್ದಾರೆ. ಹಾಲು ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದ್ದೇವೆ. ರೇಷ್ಮೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಗಡಿನಾಡು ಚಿಕ್ಕಬಳ್ಳಾಪುರದ ಜನರು ಕನ್ನಡದ ಜೊತೆಗೆ ತೆಲುಗು ಮಾತಾಡುತ್ತಾರೆ. ಆದರೆ ಕೆಲವರಿಗೆ ಸರಿಯಾಗಿ ಕನ್ನಡ ಗೊತ್ತಿಲ್ಲ. ಕರ್ನಾಟಕದ ಗಡಿಭಾಗ ಚಿಕ್ಕಬಳ್ಳಾಪುರ ಆಗಿರಬಹುದು, ಆದರೆ ಕನ್ನಡಕ್ಕೆ ಎಂದೂ ನಮ್ಮ ಜನರು ಗಡಿಯನ್ನು ಹಾಕಿಲ್ಲ ಎಂದರು.

ಕನ್ನಡ ಎಂದರೆ ಆಡುವ ಭಾಷೆಯೂ ಹೌದು, ಬದುಕುವ ಭಾಷೆಯೂ ಹೌದು. ತಾಯಿ ಭುವನೇ ಶ್ವರಿಯ ಆಶೀರ್ವಾದ ಪಡೆದಿರುವ ನಮ್ಮ ನಾಡಿಗೆ ಅನೇಕ ರಾಜ್ಯಗಳಿಂದ, ದೇಶಗಳಿಂದ ಜನರು ಬಂದು ನೆಲೆಸಿದ್ದಾರೆ. ವಸುದೈವ ಕುಟುಂಬಕಂ ಎಂಬ ಸಂದೇಶದಂತೆ ನಾವು ನಡೆದುಕೊಳ್ಳುತ್ತಿದ್ದೇವೆ ಎಂದರು.

ಮಾಜಿ ಮುಖ್ಯಮಂತ್ರಿಯೂ ಆದ ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ, ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್‌, ಮುಖಂಡರು ಉಪಸ್ಥಿತರಿದ್ದರು.

ಬೈಕ್‌ ರ‍್ಯಾಲಿ

ಇದಕ್ಕೂ ಮುನ್ನ ಮರುಳಸಿದ್ದೇಶ್ವರ ದೇವಾಲಯದಿಂದ ಸೊಲಾಲಪ್ಪನ ದಿನ್ನೆವರೆಗೆ ಬೈಕ್‌ ರ‍್ಯಾಲಿ ನಡೆಯಿತು. ಸಾವಿರಾರು ಯುವಜನರು ರ‍್ಯಾಲಿಯಲ್ಲಿ ಪಾಲ್ಗೊಂಡು ಕನ್ನಡದ ಕಂಪನ್ನು ಹರಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಹಾಡುಗಳ ಮೂಲಕ ಜನರ ಮನ ರಂಜಿಸಿದರು. ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.