ಬಾಗೇಪಲ್ಲಿ: ಪಟ್ಟಣದ ಬಿಜಿಎಸ್ ಶಾಲೆಯ ಆವರಣದಲ್ಲಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.
ಶಾರದಾಂಬೆ ಭಾವಚಿತ್ರಕ್ಕೆ ಆದಿಚುಂಚನಗಿರಿ ಮಹಾಪೀಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳ ನಾಥ ಸ್ವಾಮೀಜಿ, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಪೂಜೆ ಸಲ್ಲಿಸಿ,ಅಕ್ಷರದ ಜ್ಞಾನ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಪೀಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ , ಬಹಳಷ್ಟು ಜನ ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಶೃಂಗೇರಿ, ಉಡುಪಿ, ಧರ್ಮಸ್ಥಳ ಹೀಗೆ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗಿ ದೇವರ ಸನ್ನಿಧಿಯಲ್ಲಿ ಅಕ್ಷರ ತಿದ್ದಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ. ಆದರೆ,ಬಿ.ಜಿ.ಎಸ್ ಸಂಸ್ಥೆ ಸ್ಥಳಿಯವಾಗಿಯೇ ಹಳೆಯ ಗುರುಕುಲ ಪದ್ಧತಿ ನೆನಪಿಸುವಂತೆ,ಶಾಲೆಯ ಆವರಣದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಪರಿಪಾಠ ಬೆಳೆಸಿಕೊಂಡಿದ್ದೇವೆ ಎಂದರು.
ವಿದ್ಯಾರ್ಥಿಗಳು ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗದೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ರಾಷ್ಟ್ರಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Chinthamani News:ಹಾದಿಗೆರೆ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಮಹತ್ವದ ಸಂಸ್ಕಾರಗಳಲ್ಲಿ ಒಂದಾದ ಅಕ್ಷರಾಭ್ಯಾಸ ಮಗುವಿನ ಜೀವನದಲ್ಲಿ ಜ್ಞಾನಾರ್ಜನೆ ಪಯಣಕ್ಕೆ ಶುಭಾರಂಭದ ಸಂಕೇತವಾಗಿದೆ. ಮಗು ತನ್ನ ಜೀವನದ ಮೊಟ್ಟಮೊದಲ ಅಕ್ಷರ ಬರೆಯುವ ಪವಿತ್ರ ಕ್ಷಣ ಮಹತ್ವದ್ದಾಗಿದೆ. ಶಿಕ್ಷಣದ ಜೊತೆಗೆ ಭಾರತೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾದ ಪೋಷಕರು ಅವರ ಕೈಗೆ ಮೊಬೈಲ್ ಕೊಡುವ ಮೂಲಕ ದಾರಿ ತಪ್ಪಲು ಕಾರಣರಾಗುತ್ತಿದ್ದಾರೆ. ಲಕ್ಷ ಶುಲ್ಕ ಕೊಟ್ಟು ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸಿದರೆ ಸಾಲದು. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಜವಾಬ್ದಾರಿ ಹೊತ್ತಿರುವ ಪೋಷಕರು, ಮಕ್ಕಳ ಕೈಗೆ ಪುಸ್ತಕ ನೀಡಿ ಅವರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು' ಎಂದು ಕಿವಿಮಾತು ಹೇಳಿದರು.
ಮಕ್ಕಳ ಪೋಷಕರು ಶಾಲೆಯ ಆವರಣದಲ್ಲಿ ಎಲೆ ಅಡಿಕೆ, ಅಕ್ಕಿ, ಬೆಲ್ಲ, ಬಾಳೆಹಣ್ಣು ತಂದು ಪೂಜೆ ಸಲ್ಲಿಸಿದ ನಂತರ, ತಮ್ಮ ಮಕ್ಕಳಿಗೆ ಅಕ್ಷತೆಯ ಮೇಲೆ ಓಂಕಾರವನ್ನು ಬರೆಯಿಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು. ಮಕ್ಕಳ ಪೋಷಕರು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದರು.
ಶೈಕ್ಷಣಿಕ ಬದುಕಿಗೆ ಮೊದಲ ಹೆಜ್ಜೆ ಇಡುತ್ತಿರುವ ಮುದ್ದು ಪುಟಾಣಿಗಳನ್ನು ತಂದೆ-ತಾಯಿಯ ಮಡಿಲಿನಲ್ಲಿ ಕೂರಿಸಿ, ಅಕ್ಷರ ಬರೆಸುವ ಮೂಲಕ ತಾಯಿ ಶಾರದಾ ಮಾತೆಯ ಆಶೀರ್ವಾದ ಬೇಡಿ ಮಕ್ಕಳನ್ನು ಹರಸಲಾಯಿತು.
ಬಿ.ಜಿ.ಎಸ್ ಶಾಲೆಯ ಪ್ರಾಂಶುಪಾಲರಾದ ಮುನಿರಾಜು ಮಾತನಾಡಿ, ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಅನನ್ಯ ಹಾಗೂ ಅಜರಾಮರ. ಶಿಕ್ಷಣ ಕಲಿಯಲು ಹೊಸದಾಗಿ ಬಂದಿರುವ ಪುಟಾಣಿ ಮಕ್ಕಳಿಗೆ ಅಕ್ಷರಭ್ಯಾಸ ಹಮ್ಮಿಕೊಂಡಿದ್ದು, ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಗಳನ್ನು ಕಲಿಸಿ ದೇಶದ ಸುಸಂಸ್ಕೃತ ಪ್ರಜೆಗಳನ್ನಾಗಿ ನಿರ್ಮಿಸುತ್ತೇವೆ. ಅಕ್ಷರಭ್ಯಾಸವು ಜ್ಞಾನದ ಅಧಿದೇವತೆಯಾದ ಸರಸ್ವತಿ ದೇವಿಯ ಆಶೀರ್ವಾದದೊಂದಿಗೆ ಮಗು ಅಕ್ಷರ ಲೋಕಕ್ಕೆ ಕಾಲಿಡುವ ಶುಭ ಗಳಿಗೆ. ಅಕ್ಷರಗಳ ಜಗತ್ತಿಗೆ ಹೆಜ್ಜೆ ಇಡುತ್ತಿರುವ ನಿಮ್ಮ ಪುಟ್ಟ ಕಂದನಿಗೆ ಜ್ಞಾನ, ಬುದ್ಧಿ ಮತ್ತು ಯಶಸ್ಸು ಲಭಿಸಲಿ ಎಂದರು.
ಈ ಸಂದರ್ಭದಲ್ಲಿ ಬಿ.ಜಿ.ಎಸ್.ಶಾಲೆಯ ಶಿಕ್ಷಕ, ಶಿಕ್ಷಕಿಯರು ಹಾಗೂ ಪೋಷಕರು ಹಾಜರಿದ್ದರು.