ಚಿಕ್ಕಬಳ್ಳಾಪುರ: ಜಿಲ್ಲಾಡಳಿತವು ಮಾಹಿತಿ ಹಕ್ಕನ್ನು ಮೊಟಕುಗೊಳಿಸಿದೆಯಲ್ಲದೆ ಯಾವುದೇ ಅರ್ಜಿಗೂ ಉತ್ತರ ನೀಡದೆ ಕಾಲಹರಣ ಮಾಡುತ್ತಾ ನಮ್ಮ ಉದ್ದೇಶವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ ಜಿಲ್ಲಾ ಡಳಿತ ಭವನದ ಎದುರು ಸೋಮವಾರದಿಂದ ಅಮರಣಾಂತ ಉಪವಾಸ ಕುಳಿತಿದ್ದಾರೆ.
ನಗರ ಹೊರವಲಯ ಜಿಲ್ಲಾಡಳಿತ ಭವನದ ಮೊದಲಮಹಡಿಯ ಬಲ ಪಡಸಾಲೆಯಲ್ಲಿ ಅಮರಣಾಂತ ಉಪವಾಸದ ಕರಪತ್ರಗಳನ್ನು ನಾಗರೀಕರಿಗೆ ಹಂಚುವ ಮೂಲಕ ಸೋಮವಾರ ಸಂವಿಧಾನದ ಪೀಠಿಕೆ, ಗಂಗಮ್ಮ ಪೋಟೋ, ಉಪವಾಸ ಸತ್ಯಾಗ್ರಹದ ಬ್ಯಾನರ್‌ಗೆ ಹೂವಿನ ಹಾರ ಹಾಕಿ ಚಾಪೆಯ ಮೇಲೆ ಏಕಾಂಗಿಯಾಗಿ ಅಮರಣಾಂತ ಉಪವಾಸ ಕುಳಿತು ಸಾರ್ವಜನಿಕರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಈ ವೇಳೆ ಇವರನ್ನು ಭೇಟಿ ಮಾಡಿದ ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ದುಸ್ತರವಾಗಿದೆ. ಸರಕಾರ ನೀಡಿರುವ ನಾಗರೀಕರ ಹಕ್ಕುಗಳನ್ನು ಬಳಸಿಕೊಂಡು ಆರ್.ಟಿ.ಐ.ನಲ್ಲಿ 2024ರಲ್ಲಿ ಸಲ್ಲಿಸಿರುವ ಅರ್ಜಿಗಳಿಗೆ ಈವರೆಗೂ ಉತ್ತರ ದೊರಕಿರುವುದಿಲ್ಲ. ಹೀಗಾಗಿ ಅಮರಣಾಂತ ಉಪವಾಸ ಕೈಗೊಂಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.
ವಂಚನೆ ನಿಲ್ಲಲಿ!!
ಜಿಲ್ಲಾಡಳಿತದ ಸರಕಾರಿ ಅಧಿಕಾರಿಗಳು ನಾಗರೀಕರಿಗೆ ಕೊಡಬೇಕಾದ ಮೂಲಹಕ್ಕುಗಳನ್ನು ವಂಚಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂವಿಧಾನಬದ್ಧವಾಗಿ ನಡೆಯುತ್ತಿಲ್ಲ. ಆರ್‌ಟಿಐ ಮೂಲಕ 20 ವರ್ಷಗಳಿಂದ ಬಂದಿರುವ ಸಿ.ಎಂ.ರಿಲೀಫ್ ಫಂಡ್ ಮಾಹಿತಿ ಕೇಳಿದ್ದೇನೆ. ಡಿ.ಕೆ.ರವಿ ಸಾವಿನ ಮಾಹಿತಿ ಕೇಳಲಾಗಿದೆ ಅದಕ್ಕೂ ಮಾಹಿತಿ ಕೊಟ್ಟಿಲ್ಲ, ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ 11 ಮಂದಿ ಸಾವಿನ ಮಾಹಿತಿ ಕೊಡುತ್ತಿಲ್ಲ. ಎಂನರೇಗಾ, ಜಲಜೀವನ್ ಯೋಜನೆ ಬಗ್ಗೆ ಮಾಹಿತಿ ಕೇಳಿದರೂ ಕೊಡುತ್ತಿಲ್ಲ. ಕೆ.ಸಿ ವ್ಯಾಲಿ, ಹೆಚ್.ಎನ್. ವ್ಯಾಲಿ ಯೋಜನಾ ಮಾಹಿತಿ, ಎತ್ತಿನಹೊಳೆ ಯೋಜನಾ ಮಾಹಿತಿ ಕೇಳಿದರೂ ಕೊಟ್ಟಿಲ್ಲ.ಒಂದು ಅರ್ಜಿಗೆ ನೂರು ಹಿಂಬರಹ ನೀಡುತ್ತಾರೆ ಎಂದು ದೂರಿದರು.
ಎಫ್‌ಐಆರ್ ಆಗಲಿ???
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ 7 ಪಿಟೀಷನ್ ಕೊಟ್ಟಿದ್ದರೂ ಎಫ್‌ಐಆರ್ ಮಾಡುತ್ತಿಲ್ಲ, ತನಿಖೆ ಕೈಗೊಳ್ಳುತ್ತಿಲ್ಲ,ಇಲ್ಲವೆ ಚಾರ್ಜ್ಶೀಟ್ ಹಾಕುತ್ತಿಲ್ಲ. ಏ.10ರಂದು ಚಿಂತಾಮಣಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇಳೆ 75 ಬೇಡಿಕೆ ಗಳನ್ನು ಮುಂದಿಡಲಾಗಿತ್ತು. ಆದರೂ ಕ್ರಮವಹಿಸಿಲ್ಲ. ಇವೆಲ್ಲವನ್ನೂ ಜಿಲ್ಲಾಧಿಕಾರಿಗಳಿಗೂ ಕೊಡಲಾಗಿದೆ. ಹೀಗಾಗಿ ಇವೆಲ್ಲವುಗಳನ್ನು ಪರಿಹರಿಸಲು, ನಾನು ಕೇಳಿರುವ ಎಲ್ಲಾ ಅರ್ಜಿಗಳಿಗೆ ಮಾಹಿತಿ ಕೊಡುವವರೆಗೆ ಅಮರಣಾಂತ ಉಪವಾಸ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಜೀವಕ್ಕೆ ಜಿಲ್ಲಾಡಳಿತ ಹೊಣೆ ??
ಜಿಲ್ಲಾಡಳಿಕ್ಕೆ ಮೇ 11ರಂದು ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಬಗ್ಗೆ ಟಪಾಲಿನಲ್ಲಿ ಅನುಮತಿ ಕೋರಿ ನೀಡಿರುವ ಮನವಿ ಪತ್ರದೊಂದಿಗೆ ಕರಪತ್ರವನ್ನೂ ನೀಡಿ ಮನವಿ ಮಾಡಲಾಗಿದೆ. ಬೆಳಗಿ ನಿಂದ ಸಂಜೆ 5ರತನಕ ಇಲ್ಲಿಯೇ ಕುಳಿತಿದ್ದೇನೆ.ಯಾವೊಬ್ಬ ಅಧಿಕಾರಿಯೂ ಕೂಡ ನಿನ್ನ ಸಮಸ್ಯೆ ಏನೆಂದು ಕೇಳಲು ಬಂದಿಲ್ಲ. ಆದರೆ ಮಾಧ್ಯಮದವರು ಬಂದ ಕೂಡಲೇ ಸೆಕ್ಯೂರಿಟಿ ಮುಖ್ಯಸ್ಥರು ಬಂದು ನೀವು ಉಪವಾಸ ಮಾಡಲು ಅನುಮತಿ ಪಡೆದಿದ್ದೀರಾ? ಆಪತ್ರ ನೀಡಿ, ಇಲ್ಲವೇ ಇಲ್ಲಿಂದ ಹೊರಡಿ ಎಂಬAತೆ ಒತ್ತಾಯಪಡಿಸಿ ತೊಂದರೆ ಕೊಡುತ್ತಿದ್ದಾರೆ. ನಾನು ಶಾಂತವಾಗಿ ಈ ನೆಲದ ಕಾನೂನುಗಳಿಗೆ ಬೆಲೆ ನೀಡಿ ಉಪವಾಸ ಮಾಡುತ್ತಿದ್ದರೆ ಇವರು ವಿನಾಕಾರಣ ತೊಂದರೆ ಕೊಡುತ್ತಿರುವುದು ಸರಿಯಲ್ಲ. ನನಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವ ಮಾತೇಯಿಲ್ಲ, ಸಮಾಜ ಸುಧಾರಣೆಗಾಗಿ ಕೈಗೊಂಡ ಅಮರಣಾಂತ ಉಪವಾಸದಲ್ಲಿ ಆಕಸ್ಮಾತ್ ಜೀವಹಾನಿ ಯಾದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ತಿಳಿಸಿದರು.