ಚಿಕ್ಕಬಳ್ಳಾಪುರ: ಬಿಜೆಪಿ ಸಂಸ್ಥಾಪನಾ ದಿನವೆನ್ನುವುದು ರಾಷ್ಟ್ರಪ್ರೇಮದ ಪುನರುತ್ಥಾನದ ದಿನವಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್(MP Dr.K.Sudhakar) ಅಭಿಪ್ರಾಯಪಟ್ಟರು.
ನಗರದ ವಾಪಸಂದ್ರದಲ್ಲಿರುವ ನೂತನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ದಿನದಯಾಳ್ ಉಪಾಧ್ಯಾಯ ಮತ್ತು ಶ್ಯಾಮ್‌ಪ್ರಸಾದ್ ಮುಖರ್ಜಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ.ಕೆ.ಸುಧಾಕರ್ ಮಾತನಾಡಿ 46ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮಾಡುತ್ತಿದ್ದೇವೆ. ಯಾಕೆ ಮಾಡಬೇಕು ಎಂದರೆ ಇದು ರಾಷ್ಟ್ರಪ್ರೇಮದ ಪುನರುತ್ಥಾನದ ದಿನ. 1951ರಲ್ಲಿ ಜನಸಂಘ ಸ್ಥಾಪನೆ ಶ್ಯಾಮ್ ಪ್ರಕಾಶ್ ಮುಖರ್ಜಿ ಮಾಡಿದರು. ಕಾಂಗ್ರೆಸ್ ಜನವಿರೋಧಿ ತೀರ್ಮಾನ ವಿರುದ್ಧ ದೇಶ ಪ್ರೇಮ ಮತ್ತು ಸೇವಾ ಕಾರ್ಯಕ್ರಮಗಳ ಮೂಲಕ ಜನಸಂಘದ ಕಾರ್ಯಕ್ರಮ ಆರಂಭವಾಯಿತು. ಸಂಘಟನೆಯ ಮೂಲಕ ರಾಜಕೀಯ ಮಾಡಬೇಕು ಎಂದು ಶ್ಯಾಮಪ್ರಸಾದ್ ಮುಖರ್ಜಿ ತೀರ್ಮಾನ ಕೈಗೊಂಡಿದ್ದರು ಎಂದರು.
ಕತ್ತಲು ಕಳೆದು ಸೂರ್ಯ ಉದಯವಾಗಲೇಬೇಕು!!!
1980ರಲ್ಲಿ ಬಿಜೆಪಿ ಹುಟ್ಟಿದಾಗ ಅಟಲ್ ಬಿಹಾರಿ ವಾಜಪೇಯಿ ಅವರೇ ಮೊದಲ ಸ್ಥಾಪಕ ಅಧ್ಯಕ್ಷ. ಅದಕ್ಕೂ ಮೊದಲು ಲೋಕಸಭೆಯಲ್ಲಿ ಜನಸಂಘವು 2 ಸ್ಥಾನ ಇಟ್ಟುಕೊಂಡು ಏನು ಮಾಡಲು ಸಾಧ್ಯ ಎಂದು ಕಾಂಗ್ರೆಸ್‌ನವರು ಕುಚೋಧ್ಯ ಮಾಡಿದಾಗ ವಾಜಪೇಯಿ ಕೊಟ್ಟ ಉತ್ತರ ಇಂದು ಸತ್ಯವಾಗಿದೆ." ಕತ್ತಲು ಸರಿದು ಸೂರ್ಯೋದಯವಾಗುವಂತೆ, ದೇಶದಲ್ಲಿ ಕಮಲ ಅರಳುತ್ತದೆ " ಎಂದಿದ್ದರು. ಅದು ನಿಜವಾಗಿದೆ ಎಂದರು.
ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷ !!
ಪ್ರಪಂಚದ ದೊಡ್ಡ ರಾಜಕೀಯ ಪಕ್ಷ ಯಾವುದು ಎಂದರೆ ಬಿಜೆಪಿಯೇ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಪುಸ್ತಕದಲ್ಲಿ ಬರೆದುಕೊಂಡು ಸದಸ್ಯರ ಸಂಖ್ಯೆಯನ್ನು ಹೇಳುತ್ತಿದ್ದರು. ಬಿಜೆಪಿ ಆನ್ʼಲೈನ್ ಮೂಲಕ 14 ಕೋಟಿ ಸದಸ್ಯರನ್ನು ಹೊಂದಿರುವ ಏಕೈಕ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಇದು ಸುಖಾಸುಮ್ಮನೆ ಆದದ್ದಲ್ಲ. ವಾಜಪೇಯಿ ಒಮ್ಮೆ ಕೇವಲ 13 ದಿನಗಳ ಪ್ರಧಾನಿ ಆಗಿದ್ದರು. ನಂತರ 13 ತಿಂಗಳು, 1999 ಪೂರ್ಣಾವಧಿ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು. ಕಳೆದ 13 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು 3ನೇ ಅವಧಿಗೆ ಮೋದಿ ಪ್ರಧಾನಿಯಾಗಿರುವುದು ಪಕ್ಷದ ಸಾಧನೆ ಅಲ್ಲವೆ? ಎಂದರು.
ತುರ್ತು ಪರಿಸ್ಥಿತಿ??
ಕಾಂಗ್ರೆಸ್ ಹೇರಿದ ತುರ್ತು ಪರಿಸ್ಥಿತಿಯೇ ಬಿಜೆಪಿ ಪಕ್ಷಕ್ಕೆ ವರವಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿ ಎಲ್ಲಾ ರೀತಿಯ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲಾಗಿತ್ತು. ಇದನ್ನು ವಿರೋಧಿಸಿ. ಕೆಲ ಪತ್ರಿಕೆಗಳು ಪ್ರತಿಭಟನಾ ರೂಪದಲ್ಲಿ ಮುಖಪುಟವನ್ನು ಖಾಲಿ ಖಾಲಿ ಪ್ರಕಟ ಮಾಡಿದವು. ಇಂತಹ ಸಂದರ್ಭದಲ್ಲಿ ಎದೆಗುಂದದೆ ಧೈರ್ಯ ಸಾಹಸದಿಂದ ಪಕ್ಷ ಕಟ್ಟಿದ ನಿಷ್ಟಾವಂತರಿಗೆ ತಲೆಬಾಗಿ ನಮಿಸುತ್ತೇನೆ ಎಂದರು.
ಅಡ್ವಾಣಿ ಸ್ಮರಣೆ!!!
ವಾಜಪೇಯಿ ಪ್ರಧಾನಿ ಆಗಿದ್ದಾಗ ಬಂದ ಗ್ರಾಮಸಡಕ್ ಯೋಜನೆ, ಪೋಕ್ರಾನ್ ಅಣು ಬಾಂಬ್ ಪ್ರಯೋಗ ವಾಜಪೇಯಿ ಪೊಕ್ರಾನ್ ಪ್ರಯೋಗದಂತಹ ಐತಿಹಾಸಿಕ ತೀರ್ಮಾನ ಭಾರತ ವಿಶ್ವಗುರುವಾಗಲು ನೆರವಾಗಿದೆ.ನದಿಜೋಡಣೆ ವಾಜಪೇಯಿ ಬಗ್ಗೆ ಕನಸು ಕಂಡಿದ್ದರು. ಇವರಂತೆ ಲಾಲ್‌ಕೃಷ್ಣ ಅಡ್ವಾಣಿ ಅವರ ಕರ ಸೇವೆ, ಬಾಬ್ರಿ ಮಸೀದಿ ಧ್ವಂಸ ರಾಮಮಂದಿರ ನಿರ್ಮಾಣಕ್ಕೆ ಕಾರಣವಾದರು. ಮೂಲೆ ಮೂಲೆಗೆ ಬಿಜೆಪಿ ತಲುಪುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಸ್ಮರಣೆಯೂ ಅಗತ್ಯ ಎಂದು ಹೇಳಿದರು.
ದೇಶಕ್ಕೆ ಮೋದಿ ಆಧಾರ ??
ಈ 13 ವರ್ಷಗಳಲ್ಲಿ ಮೋದಿ ಅವರ ಕೊಡುಗೆ ದೇಶಕ್ಕಿದೆ. ಮತ್ತೊಮ್ಮೆ ಅವರೇ ಬರಲಿ ಎಂದು ಜನತೆ ಹಾರೈಸುತ್ತಾರೆ. ಇದಕ್ಕೆ ವಿರುದ್ಧವಾದ ಅಲೆ ರಾಜ್ಯದಲ್ಲಿದ್ದು ಯಾವಾಗ 2 ವರ್ಷ ಕಳೆಯುವುದೋ ಎಂದು ಜನ ಕಾಯುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲ ನನ್ನ ವಿಶ್ವಾಸದಲ್ಲಿರುವ ಶಾಸಕ ಸಚಿವರೇ ನಮ್ಮ ಸರ್ಕಾರ ಬರಲ್ಲ ಎಂದು ಹೇಳುತ್ತಾರೆ. ಮೋದಿ ಅವರು ಪ್ರಧಾನಿ ಆಗುವಾಗ ಯುಪಿಎ ಅಧಿಕಾರದಲ್ಲಿತ್ತು. ಜನ ಬದಲಾವಣೆ ಬಯಸಿ 2014ರ ಲ್ಲಿ 284 ಸ್ಥಾನ ನೀಡುವ ಮೂಲಕ ಎನ್‌ಡಿಎ ಸ್ವಂತ ಶಕ್ತಿ ಮೇಲೆ ಸರ್ಕಾರ ರಚಿಸು ವಂತಾ ಯಿತು. 3ನೇ ಅವಧಿಗೆ ಚಾಯ್ ವಾಲಾ ಅವರ ಮಗ ನರೇಂದ್ರ ಮೋದಿ ಪ್ರಧಾನಿ ಆಗಿ ದೇಶದ ಆಧಾರ ಸ್ಥಂಭವಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೂ ದೊಡ್ಡ ಹುದ್ದೆ ಅಲಂಕರಿಸಲು ಅವಕಾಶ ಕಲ್ಪಿಸಿದ್ದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
2047ಕ್ಕೆ ವಿಕಸಿತ ಭಾರತ!!
ರಾಜಕಾರಣ ಎಂಬುದು ಜನಸೇವೆಯ ಮಾಧ್ಯಮ ಅಷ್ಟೇ. 2047ಕ್ಕೆ ವಿಕಸಿತ ಭಾರತ ಆಗಬೇಕು. ಅಭಿವೃದ್ದಿ ಹೊಂದಿದ ದೇಶ ಆಗಬೇಕು ಎಂಬ ಸಂಕಲ್ಪ ಇದೆ. ಸಂಘಟಿತ ಹೋರಾಟದಿಂದ ಮಾತ್ರ ಇದು ಸಾಧ್ಯ. ಸಬ್ ಕಾ ಸಾತ್ ಸಬ್ ಕಾ ವಿಶ್ವಾಸ್ ಸಬ್ ಕಾ ವಿಕಾಸದ ಹಾದಿಯಲ್ಲಿ ದೇಶ ಸಾಗಿದೆ. ಜನಸಂಘದ ಆಶಯವಾಗಿದ್ದ ಕಾಶ್ಮೀರದ ವಿಶೇಷ ಸ್ಥಾನ ಮಾನದ 370ನೇ ವಿಧಿಯನ್ನು ಅಮಿತ್ ಶಾ ಮೋದಿ ನೇತೃತ್ವದಲ್ಲಿ ತೆಗೆಯಲಾಯಿತು. ಅಲ್ಪ ಸಂಖ್ಯಾತರಿಗೆ ತ್ರಿವಳಿ ತಲಾಖ್‌ಗೆ ಮುಕ್ತಿ ನೀಡಲಾಯಿತು. ಈಗ ಮಹಿಳಾ ಮೀಸಲಾತಿ ತರುತ್ತೀದ್ದೇವೆ.ಇದು ಬಿಜೆಪಿ ವಿಷನ್ ಎಂದರು.
ಲಘುವಾಗಿ ಕಾಣದು??
ಜಿಲ್ಲೆಯಲ್ಲಿ ಸಂಘಟನೆ ಕಡಿಮೆ ಇರಬಹುದು. ಸಂಘಟನೆ ಮಾಡುವ ಮೂಲಕ ಶಕ್ತಿ ತುಂಬೋಣ. ಪಕ್ಷ ಯಾರನ್ನೂ ಲಘುವಾಗಿ ಕಾಣದು ಎಂದ ಅವರು ಇದೇ ವೇಳೆ ನೂತನ ಕಛೇರಿ ಮಾಡಿದ ಜಿಲ್ಲಾಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಜನಸಂಘದ ಕೊಡುಗೆ !!
ರಾಜ್ಯ ಉಸ್ತುವಾರಿ ಬ್ಯಾಟರಂಗೇಗೌಡ ಮಾತನಾಡಿ ಬಿಜೆಪಿ ಪಕ್ಷಕ್ಕೆ ಇಂದು ಸುದಿನ. 46 ವರ್ಷಗಳ ಹಿಂದೆ ಇದೇ ದಿನ ಪಕ್ಷ ಸ್ಥಾಪನೆ ಆಗುತ್ತದೆ. ನೆಹರು ಸರಕಾರ ತೆಗೆದುಕೊಳ್ಳುತ್ತಿದ್ದ ಹಿಂದೂ ವಿರೋಧಿ, ದೇಶವಿರೋಧಿ ನಿರ್ಧಾರಗಳು ದೇಶಪ್ರೇಮಿಗಳ ನೋವಿಗೆ ಕಾರಣ ವಾಗಿರುತ್ತವೆ. ಮುಖ್ಯವಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನದ ಬಗ್ಗೆ ಶಾಮಪ್ರಕಾಶ ಮುಖರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ತೊರೆಯುತ್ತಾರೆ. ಜನಸಂಘ ಸ್ಥಾಪಿಸು ತ್ತಾರೆ ಎಂದರು.
46 ವಸಂತಗಳ ಸಂಭ್ರಮ!!
ದೇಶಕ್ಕೆ ಒಂದೇ ಸಂವಿಧಾನ, ಒಂದೇ ಬಾವುಟ, ಒಬ್ಬರೇ ಪ್ರಧಾನಿಗೆ ಒತ್ತಾಯಿಸುತ್ತಾರೆ. ಇದೇ ಹೋರಾಟದಲ್ಲಿ ಮುಖರ್ಜಿ ಕಾಶ್ಮೀರಿ ಜೈಲಿನಲ್ಲಿ ಮರಣ ಹೊಂದುತ್ತಾರೆ. ಅಂದು ಜನಸಂಘದ ಚಿನ್ಹೆಯಾದ ದೀಪದ ಗುರ್ತಿನಲ್ಲಿ 2 ಸ್ಥಾನ ಗೆಲ್ಲುತ್ತಾರೆ. ಅದರಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಕೂಡ ಒಬ್ಬರು. ಅಂದಿನಿಂದ ಈತನಕ ಹಿರಿಯರ ಮಾರ್ಗದರ್ಶನ ದಲ್ಲಿ ಪಕ್ಷ ಹೆಮ್ಮರವಾಗಿ ಬೆಳೆದಿದೆ. 1980ರಲ್ಲಿ ಭಾಜಪ ಹೆಸರಿನಲ್ಲಿ ಹೊಸಹುಟ್ಟು ಪಡೆದು ಇಂದಿಗೆ 46 ವಸಂತಗಳನ್ನು ಪೂರೈಸಿ ಏನಾಗಿದೆ ಎಂಬುದು ಇತಿಹಾಸದ ವಿಷಯವಾಗಿದೆ ಎಂದರು.
ದೇಶ ಮೊದಲು!!
ಬಿಜೆಪಿ ಪಕ್ಷವು ಕೇವಲ ಅಧಿಕಾರಕ್ಕಾಗಿ ಹುಟ್ಟಲಿಲ್ಲ. ದೇಶದ ಅಖಂಡತೆ ಐಕ್ಯತೆಗಾಗಿ ಹೋರಾಡುತ್ತಿರುವ ಪಕ್ಷವಾಗಿದೆ. ಜನಪರ ಆಡಳಿತ, ಪಾರದರ್ಶಕ ನಾಯಕತ್ವವನ್ನು ಈ 13 ವರ್ಷಗಳಲ್ಲಿ ದೇಶವಾಸಿಗಳಿಗೆ ನೀಡಿದೆ. ಕಾಂಗ್ರೆಸ್ ಆರ್.ಎಸ್.ಎಸ್.ವಿರೋಧಿಸಲು ಪ್ರಮುಖ ಕಾರಣ ಬಿಜೆಪಿಯನ್ನು ಸೈದ್ಧಾಂತಿಕವಾಗಿ ಬೆಳೆಸಿದ ರೀತಿಯೇ ಆಗಿದೆ.
ಸಿದ್ದಾಂತವೇ ಜೀವಾಳ??
ಸಿದ್ಧಾಂತದ ಅಡಿಯಲ್ಲಿ ಬದುಕೋಣ. ರಾಜಕೀಯ ಮಾಡಲು ರಾಜಕಾರಣಕ್ಕೆ ಬರುವುದು ಬೇಡ. ದೇಶಕ್ಕಾಗಿ ರಾಜಕಾರಣಿ ಆಗೋಣ. ದೇಶ ಮೊದಲು ಎಂಬ ಪಕ್ಷದ ಸಿದ್ಧಾಂತ ಬಿಟ್ಟು ಯಾರೂ ಕೆಲಸ ಮಾಡಬಾರದು. ಜಿಲ್ಲೆಯ 1200 ಬೂತ್ ಪ್ರಮುಖರ ನೇಮಕ ಮಾಡಿದೆ. ಆ ಮೂಲಕ ಎಸ್.ಐ.ಆರ್ ಜಾರಿಗೆ ಶ್ರಮಿಸುತ್ತಿದೆ.ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕರ್ತರ ಪಕ್ಷ!!
ಸೀಕಲ್ ರಾಮಚಂದ್ರ ಗೌಡ ಮಾತನಾಡಿ, ಸಂಸ್ಥಾಪನಾ ದಿನಾಚರಣೆಯ ದಿನ ಸಂಸದರು ಹಾಗೂ 4 ಜಿಲ್ಲೆಗಳ ಪ್ರಭಾರಿ ಬ್ಯಾಟರಂಗೇಗೌಡರ ಉಪಸ್ಥಿತಿ ಸಂತೋಷ ತಂದಿದೆ.
46 ವರ್ಷಗಳ ಹಿಂದೆ ಅಸ್ಥಿತ್ವಕ್ಕಾಗಿ ಹೋರಾಟ ನಡೆಸಿದ್ದ ಬಿಜೆಪಿ ಇಂದು ಇಡೀ ದೇಶವನ್ನು ಕೆಸರಿಮಯ ಮಾಡಿ 12 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ನಿಂತಿರುವುದು ಹೆಮ್ಮೆಯ ವಿಚಾರ. ಬಿಜೆಪಿ ಪಕ್ಷವು ಯಾರೋ ಕೆಲ ಮುಖಂಡರು ಕಟ್ಟಿದ ಪಕ್ಷವಲ್ಲ, ಬದಲಿಗೆ ಪ್ರಾಮಾಣಿಕ ಕಾರ್ಯಕರ್ತರು ಕಟ್ಟಿದ ಪಕ್ಷ ಎಂದರು.
28ಕ್ಕೆ ಬಿಜೆಪಿ ಆಡಳಿತ!!
2028ಕ್ಕೆ ಇಡೀ ಜಿಲ್ಲೆ ಕೆಸರಿಮಯ ಆಗಬೇಕು ಎಂಬ ಸಂಕಲ್ಪವನ್ನು ಪಕ್ಷವು ನೀಡಿದೆ. ಈ ನಿಟ್ಟಿನಲ್ಲಿ ಬಲಿಷ್ಟ ಸಂಘಟನೆ ಮಾಡುವ ಮೂಲಕ 5 ಕ್ಕೆ 5 ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರಿರುವಂತೆ ಕಾರ್ಯಯೋಜನೆ ಮಾಡೋಣ. ನಮ್ಮ ಪಕ್ಷದ ಕಾರ್ಯಕರ್ತರು ಮನೆಯ ಮುಂದೆ ತಪ್ಪದೆ ಪಕ್ಷದ ಬಾವುಟ ಕಟ್ಟಬೇಕು. ಸಂಸದರ ಸಹಕಾರದಲ್ಲಿ 2028ರ ಹೊತ್ತಿಗೆ ಸ್ವಂತ ಕಟ್ಟಡ ಕಟ್ಟೋಣ, ಪಕ್ಷವನ್ನೂ ಅಧಿಕಾರಕ್ಕೆ ತರೋಣ ಎಂದು ಸಂಸ್ಥಾ ಪನಾ ದಿನಾಚರಣೆ ದಿವಸ ಸಂಕಲ್ಪ ಮಾಡಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಸಂಸದ ಡಾ.ಕೆ.ಸುಧಾಕರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪ್ರಭಾರಿ ಬ್ಯಾಟರಂಗೇಗೌಡ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡ ಕೃಷ್ಣಮೂರ್ತಿ ಮರಳುಕುಂಟೆ, ಮುಖಂಡರಾದ ಅರುಣ್ ಬಾಬು,ನಗರಸಭಾ ಅಧ್ಯಕ್ಷ ಗಜೇಂದ್ರ, ಸೂರ್ಯನಾರಾಯಣ ರೆಡ್ಡಿ, ವೇಣುಗೋಪಾಲ್, ಮುರಳೀಧರ್ ರಾವ್ ಮತ್ತಿತರರು ಇದ್ದರು.