MP Dr. K. Sudhakar: ತೃತೀಯ ಹಂತದ ಸಂಸ್ಕರಣೆ ಯೋಜನೆ ತರಬೇಕು: ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ
ಎಚ್.ಎನ್ ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ 2 ಹಂತ ಗಳಲ್ಲಿ ನೀರು ಸಂಸ್ಕರಣೆಯಾಗಿ ಬರುತ್ತಿದೆ. ಆದರೆ ಇತ್ತೀಚೆಗೆ ಈ ನೀರು ಸರಿಯಾಗಿ ಸಂಸ್ಕರಣೆ ಯಾಗುತ್ತಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸರ್ಕಾರ ಕಟ್ಟು ನಿಟ್ಟಾದ ಸೂಚನೆ ನೀಡಬೇಕಿದೆ.
ಎಚ್.ಎನ್ ವ್ಯಾಲಿ ಹಾಗೂ ಕೆ.ಸಿ ವ್ಯಾಲಿ ಎಸ್‌ಟಿಪಿಗಳ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಲು ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪಾದಯಾತ್ರೆ ನಡೆಸಿ ಹೋರಾಟ ಮಾಡುತ್ತೇವೆ ಎಂದು ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು. -
ಚಿಕ್ಕಬಳ್ಳಾಪುರ: ಎಚ್.ಎನ್ ವ್ಯಾಲಿ ಹಾಗೂ ಕೆ.ಸಿ ವ್ಯಾಲಿ ಎಸ್‌ಟಿಪಿ(H.N. Valley and K.C. Valley STP)ಗಳ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಲು ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪಾದ ಯಾತ್ರೆ ನಡೆಸಿ ಹೋರಾಟ ಮಾಡುತ್ತೇವೆ ಎಂದು ಸಂಸದ ಡಾ.ಕೆ.ಸುಧಾಕರ್(MP Dr. K. Sudhakar) ಎಚ್ಚರಿಕೆ ನೀಡಿದರು.
ಎಚ್.ಎನ್ ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ, ಕೋಲಾರ ಭಾಗಕ್ಕೆ 2 ಹಂತಗಳಲ್ಲಿ ನೀರು ಸಂಸ್ಕರಣೆಯಾಗಿ ಬರುತ್ತಿದೆ. ಆದರೆ ಇತ್ತೀಚೆಗೆ ಈ ನೀರು ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ ಎಂಬ ದೂರು ಬಂದಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸರ್ಕಾರ ಕಟ್ಟುನಿಟ್ಟಾದ ಸೂಚನೆ ನೀಡಬೇಕಿದೆ.
ಸಿಂಗಾಪುರದಲ್ಲಿ ಕೊಳಚೆ ನೀರನ್ನು ಕುಡಿಯುವ ಮಟ್ಟಕ್ಕೆ ಶುದ್ಧೀಕರಣ ಮಾಡಲಾಗುತ್ತಿದೆ. ತೃತೀಯ ಹಂತದ ಸಂಸ್ಕರಣೆ ನಂತರ ಇನ್ನಷ್ಟು ಫಿಲ್ಟರ್ ಮಾಡಿ ಕುಡಿಯುವ ನೀರಿಗೆ ಬಳಸಲಾಗುತ್ತಿದೆ. ಆ ನೀರು ಹರಿಯುವ ನದಿಯಷ್ಟು ಶುದ್ಧವಾಗಿದೆ. ನಮೀಬಿಯಾದಲ್ಲೂ ಇದೇ ರೀತಿ ಬಳಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಶುದ್ಧ ಮಾಡುವ ಅವಕಾಶ ಸರ್ಕಾರಕ್ಕಿದೆ. ಆ ಬದ್ಧತೆ ಹಾಗೂ ಜವಾಬ್ದಾರಿ ಸರ್ಕಾರಕ್ಕೆ ಇರಬೇಕು ಎಂದರು.
ಇದನ್ನೂ ಓದಿ: HN Valley: ಹೆಚ್.ಎನ್.ವ್ಯಾಲಿ ಶುದ್ಧೀಕರಣಕ್ಕೆ ಆಗ್ರಹಿಸಿ ಸಚಿವರಿಗೆ ಕೊಳಚೆ ನೀರು ಕಳಿಸಿ ಆಕ್ರೋಶ ವ್ಯಕ್ತಪಡಿಸಿದ ಹರೀಶ್‌ರೆಡ್ಡಿ
ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಮಾಡಲಿದೆ. ಆದರೆ ಇದಕ್ಕಾಗಿ ಬಂದ್ ಮಾಡುವುದು ನಿಜವಾದ ಪರಿಹಾರವಾಗುವುದಿಲ್ಲ. ಈ ಸಮಯದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಕೆಲಸ ಮಾಡುತ್ತಿದ್ದಾರೆ. ಬಂದ್ ಮಾಡಿ ದರೆ ಇವರೆಲ್ಲರಿಗೂ ಸಮಸ್ಯೆ ಹೆಚ್ಚಾಗುತ್ತದೆ. ಜನರಿಗೆ ಕಷ್ಟ ಕೊಡದೆ, ಯಾರಿಗೂ ನಷ್ಟ ಉಂಟುಮಾಡದೆ ಹೋರಾಟ ಮಾಡಬೇಕಿದೆ. ಬಂದ್ ಮಾಡಲು ಬಿಜೆಪಿ ಅಥವಾ ನಾನು ಬೆಂಬಲ ಕೊಡುವುದಿಲ್ಲ. ಬಯಲುಸೀಮೆಯ ಮೂರು ಜಿಲ್ಲೆಗಳಲ್ಲಿ ನಾನು ಪಾದ ಯಾತ್ರೆ ಮಾಡಿ, ಹಳ್ಳಿಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕೆಲಸ ಮಾಡುತ್ತೇನೆ. ಪಕ್ಷದ ಕಾರ್ಯ ಕರ್ತರೊಂದಿಗೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ರಾಜಕೀಯದ ಹುಚ್ಚು, ಅಭಿವೃದ್ಧಿ ಹಾಳು
ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜನರ ಬದುಕಿನ ಮೇಲೆ ದುಷ್ಪರಿ ಣಾಮ ಬೀರುತ್ತಿದೆ. ಜನರು ಬಹುಮತ ನೀಡಿದ್ದರೂ ರಾಜಕೀಯ ಅಸ್ಥಿರತೆಯಿಂದ ಆಡಳಿತ ಹಾಳಾಗಿದೆ. ಒಂದು ಬಣದ ಶಾಸಕರು ಒಂದು ಸಲ ಲಾಬಿ ಮಾಡಿದರೆ, ಮತ್ತೊಂದು ಬಣದ ಶಾಸಕರು ಮತ್ತೊಂದು ಸಲ ಲಾಬಿ ಮಾಡುತ್ತಾರೆ. ಈ ನಡುವೆ ಕುದುರೆ ವ್ಯಾಪಾರ ಕೂಡ ನಡೆಯುತ್ತಿದೆ. ಜನರು ಇಷ್ಟೆಲ್ಲ ಅಧಿಕಾರ ನೀಡಿದ್ದರೂ ಕಾಂಗ್ರೆಸ್ ಶಾಸಕರು ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ಸರ್ಕಾರ ಅನುದಾನವಿಲ್ಲದೆ ಕೇಂದ್ರ ಸರ್ಕಾರದ ಮೇಲೆ ಆರೋಪಗಳನ್ನು ಮಾಡುತ್ತಿದೆ. ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ರೈಲ್ವೆ ಕ್ಷೇತ್ರದಲ್ಲಿ ಹತ್ತು ಪಟ್ಟು ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿದೆ.
ಹೆಣ್ಣುಮಕ್ಕಳ ಸರ್ವಿಕಲ್ ಕ್ಯಾನ್ಸರ್ ಲಸಿಕೆಗೆ ಸುಮಾರು 6000 ರೂ. ಖರ್ಚಾಗುತ್ತದೆ. ಆ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಇಂತಹ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ಜೊತೆಗೆ ಹೆಚ್ಚು ಅನುದಾನ, ತೆರಿಗೆ ಹಂಚಿಕೆಯನ್ನು ಕರ್ನಾಟಕಕ್ಕೆ ನೀಡಲಾಗಿದೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದೊಂದಿಗೆ ಸಹಕಾರದಿಂದ ಸಾಗಬೇಕಿತ್ತು. ಆದರೆ ರಾಜಕೀಯದ ಹುಚ್ಚಿ ಗಾಗಿ ಅಭಿವೃದ್ಧಿಯನ್ನು ಹಾಳು ಮಾಡಿದ್ದಾರೆ ಎಂದು ದೂರಿದರು.
2013ರಲ್ಲಿ ನಾನು ಮೊದಲ ಬಾರಿಗೆ ಶಾಸಕನಾದಾಗ ಅಂತರ್ಜಲ ಮಟ್ಟ 1000 ದಿಂದ 1500 ಅಡಿಗೆ ಕುಸಿದಿತ್ತು. ರೈತರು ಪಂಪ್ ತಂದು ಅಳವಡಿಸುವ ಸಮಯಕ್ಕೆ ನೀರು ಬತ್ತಿ ಹೋಗಿರು ತ್ತಿತ್ತು. ನೀರಾವರಿಯ ಸಮಸ್ಯೆಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಹಿರಿಯ ಅಧಿಕಾರಿಯೊಬ್ಬರು ಎರಡು ಹಂತಗಳಲ್ಲಿ ನೀರು ಶುದ್ಧೀಕರಿಸಿ ನೀಡಬಹುದೆಂದು ಸಲಹೆ ನೀಡಿದ್ದರು.
ಅದಕ್ಕಾಗಿ ಎಚ್‌ಎನ್ ವ್ಯಾಲಿ ಹಾಗೂ ಕೆಸಿ ವ್ಯಾಲಿ ಯೋಜನೆಯಿಂದ ನೀರು ತರುವ ಕ್ರಮ ಜಾರಿ ಮಾಡಲಾಯಿತು. ಚಿಕ್ಕಬಳ್ಳಾಪುರಕ್ಕೆ ಕಾವೇರಿಯಿಂದ ಅಥವಾ ಕೃಷ್ಣ ಅಥವಾ ಯಾವುದೇ ನದಿಯಿಂದ ನೀರು ದೊರೆಯುವುದಿಲ್ಲ. ಬಯಲುಸೀಮೆಗೆ ಯಾವುದೇ ನದಿ ಮೂಲಗಳಿಲ್ಲ. ಈ ಬಗ್ಗೆ ನಾನು ಅನೇಕ ಬಾರಿ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ್ದೆ ಎಂದರು.
ಯಾವುದೇ ಸರ್ಕಾರಗಳು ಈ ಭಾಗದ ಜನರಿಗೆ ಶಾಶ್ವತ ನೀರಾವರಿ ನೀಡುವ ಕೆಲಸ ಮಾಡಲಿಲ್ಲ. 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಚರ್ಚಿಸಿದಾಗ ಎಚ್‌ಎನ್‌ವ್ಯಾಲಿ, ಕೆಸಿ ವ್ಯಾಲಿ ಜಾರಿಗೆ ಸಹಕಾರ ನೀಡಿದ್ದರು. ಅದರಿಂದಾಗಿ 60 ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಯಿತು. ಅದರಿಂದಾಗಿ 200-300 ಅಡಿಗೆ ಅಂತರ್ಜಲ ದೊರೆಯುತ್ತಿದೆ. ಆಗ ಕೇವಲ ಕೆರೆಗಳಿಗೆ ನೀರು ತುಂಬಿಸುವುದು ಮಾತ್ರ ಉದ್ದೇಶವಾಗಿತ್ತು. ಇದು ಕುಡಿಯಲು ಯೋಗ್ಯವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು ಎಂದರು.
ಎತ್ತಿನಹೊಳೆ ಯೋಜನೆ
ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ತರುತ್ತೇವೆ ಎಂದು ಹೇಳಲಾಗಿತ್ತು. 2014 ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್‌ನಿಂದ ಮಾಡಲಾಗಿತ್ತು. 12 ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ರೂಪಿಸಲಾಗಿತ್ತು. ಬಸವರಾಜ ಬೊಮ್ಮಾಯಿ ಯವರು ನೀರಾವರಿ ತಜ್ಞರಾಗಿ ಇದಕ್ಕೆ ಒತ್ತು ನೀಡಿದ್ದರು. ಮೊದಲಿಗೆ 8000 ಕೋಟಿ ರೂ. ಇದ್ದ ಯೋಜನೆಯ ಮೊತ್ತ ಈಗ 30 ಸಾವಿರ ಕೋಟಿ ರೂ.ಗೆ ತಲುಪಿದೆ.
ಬಿಜೆಪಿಯ ಬಳಿಕ ಕಾಂಗ್ರೆಸ್ ಸರ್ಕಾರ ಬಂದರೂ ಕಾಮಗಾರಿ ಮುಗಿದಿಲ್ಲ. ಕಾಂಗ್ರೆಸ್‌ಗೆ ನಿಜವಾದ ಬದ್ಧತೆ ಇದ್ದಿದ್ದರೆ ಕಾಮಗಾರಿ ಪೂರ್ಣಗೊಳ್ಳಲು ಇಷ್ಟು ವರ್ಷಗಳು ಬೇಕಾಗಿರ ಲಿಲ್ಲ. 70-80 ಲಕ್ಷ ಜನರು ಯೋಜನೆಯ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಈ ಭಾಗದ ರೈತರು ತರಕಾರಿ, ಹೂ, ಹಣ್ಣು, ರೇಷ್ಮೆ ಬೆಳೆಯುತ್ತಾರೆ. ಇತ್ತೀಚೆಗೆ 6 ದಶಲಕ್ಷ ಟನ್ ಗುಲಾಬಿ ಹೂ ಚಿಕ್ಕಬಳ್ಳಾಪುರದಿಂದ ರಫ್ತಾಗಿದೆ ಎಂದರು.
ಎತ್ತಿನಹೊಳೆಯಿಂದ ನೀರು ಬಂದಿದ್ದರೆ ಎಚ್‌ಎನ್ ವ್ಯಾಲಿ, ಕೆಸಿ ವ್ಯಾಲಿಯ ನೀರನ್ನು ಯಾರೂ ಬಳಸುತ್ತಿರಲಿಲ್ಲ. ಕೋವಿಡ್ ಇದ್ದಾಗಲೂ ಬಿಜೆಪಿ ಈ ಯೋಜನೆಗೆ ಹೆಚ್ಚು ಅನುದಾನ ನೀಡಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ 3000 ಕೋಟಿ ರೂ. ನೀಡಲಾಗಿತ್ತು. ಆದರೆ ಬಳಿಕ ಸರಿಯಾದ ಅನುದಾನ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಅತಿ ಶೀಘ್ರದಲ್ಲಿ ಕಾಮಗಾರಿ ಮುಗಿಸಿ ರೈತರ ಋಣ ತೀರಿಸಬೇಕು ಎಂದು ಆಗ್ರಹಿಸಿದರು.