#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯ್ಕೆಗೆ ತಾತ್ಕಾಲಿಕ ತಡೆ; ಸಂಸದ ಸುಧಾಕರ್ ವಿರುದ್ಧ ಸಂದೀಪ್ ರೆಡ್ಡಿ ಕೆಂಡಾಮಂಡಲ

ಸಂದೀಪ್ ಬಿ. ರೆಡ್ಡಿ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಇವರ ಆಯ್ಕೆಗೆ ಸಂಸದ ಡಾ.ಕೆ. ಸುಧಾಕರ್ ವಿರೋಧಿಸಿದ್ದರು. ಹೀಗಾಗಿ ಹೈಕಮಾಂಡ್ ಮೂಲಕ ತಡೆ ತಂದಿದ್ದಾರೆ ಎಂದು ಸಂಸದರ ವಿರುದ್ಧ ಬಿಜೆಪಿ ಮುಖಂಡ ಸಂದೀಪ್ ಬಿ. ರೆಡ್ಡಿ ಗರಂ ಆಗಿದ್ದಾರೆ.

ಸಂಸದ ಸುಧಾಕರ್ ವಿರುದ್ಧ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಕೆಂಡಾಮಂಡಲ

Profile Prabhakara R Feb 11, 2025 9:59 PM

ಚಿಕ್ಕಬಳ್ಳಾಪುರ: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಾತ್ಕಾಲಿಕ ತಡೆ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಆಗಲು ಮುಖ್ಯ ಕಾರಣವೇ ಸಂಸದ ಡಾ.ಕೆ.ಸುಧಾಕರ್ (Dr K Sudhakar) ಅವರ ದ್ವೇಷದ ರಾಜಕಾರಣ. ಈತ ಬಿಜೆಪಿಗೆ ಹಿಡಿದ ಶನಿ. ಇತರರ ಬೆಳವಣಿಗೆಯನ್ನು ಸಹಿಸಲಾಗದ ಮನಸ್ಥಿತಿ ಹೊಂದಿರುವ ಸಂಸದ ಸುಧಾಕರ್ ಮೊದಲು ಮಾನವನಾಗುವುದನ್ನು ಕಲಿ ಎಂದು ಬಿಜೆಪಿ ಮುಖಂಡ ಸಂದೀಪ್ ಬಿ. ರೆಡ್ಡಿ (Sandeep B reddy) ಕಿಡಿಕಾರಿದರು.

ನಗರದ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಸದ ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ನನ್ನ ಅಧ್ಯಕ್ಷ ಸ್ಥಾನಕ್ಕೆ ತಡೆ ತಂದಿರುವುದರಲ್ಲಿ ಡಾ.ಕೆ.ಸುಧಾಕರ್ ಅವರ ಪಾತ್ರ ಇದೆ ಎಂಬುದು ಜಗಜ್ಜಾಹೀರಾಗಿದೆ. ಈತನಷ್ಟು ದ್ವೇಷಸಾಧಿಸುವ, ಇನ್ನೊಬ್ಬರ ಬೆಳವಣಿಗೆ ಸಹಿಸದ ರಾಜಕಾರಣಿ ಬೇರೊಬ್ಬರಿಲು ಸಾಧ್ಯವಿಲ್ಲ. ಇಲ್ಲಿಯವರೆಗೂ ಈತ ನೀಡಿರುವ ಎಲ್ಲಾ ತೊಂದರೆಗಳನ್ನೂ ಸಹಿಸುತ್ತಾ ಬಂದಿರುವೆ. ಆದರೆ ಸಹನೆಯ ಕಾಲ ಮುಗಿದಿದೆ. ನಾನಾ ನೀನಾ ನೋಡಿಯೇ ಬಿಡೋಣ? ನನ್ನ ಹೋರಾಟ ಪಕ್ಷದ ವಿರುದ್ಧ ಅಲ್ಲ, ಬದಲಿಗೆ ಸಂಸದ ಸುಧಾಕರ್ ವಿರುದ್ಧ ಮಾತ್ರ ಎಂದು ಗುಡುಗಿದರು.

ಈತನಂತೆ ನಾನೂ ಕೂಡ ಹಲವು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನನ್ನ ಕಾರ್ಯವೈಖರಿಯನ್ನು ಪರಿಗಣಿಸಿ ಪಕ್ಷವು ನನಗೆ ಅಧ್ಯಕ್ಷ ಸ್ಥಾನ ನೀಡಿದೆ.ಯಾರನ್ನೋ ಓಲೈಸಿ ನಾನು ಅಧ್ಯಕ್ಷನಾಗಿಲ್ಲ.ಅಷ್ಟಕ್ಕೂ ಅಧ್ಯಕ್ಷನಾದ ಮೇಲೆಯೇ ಮೊದಲ ಬಾರಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದೇನೆ.ಇವರಂತೆ ನಾನು ಕಂಡಕಂಡವರಿಗೆ ಹಣ ನೀಡಿ ಅಧ್ಯಕ್ಷಸ್ಥಾನ ಪಡೆದಿಲ್ಲ ಎಂದು ಕಿಡಿ ಕಾರಿದರು.

ಡಾ.ಕೆ.ಸುಧಾಕರ್‌ಗೆ ಮೈಯೆಲ್ಲಾ ವಿಷವಿದೆ. ಮೊದಲಿಂದಲೂ ಬುದ್ದಿವಂತ ಹುಡುಗರ ಬೆಳೆವಣಿಗೆ ಸಹಿಸೋದೆ ಇಲ್ಲಾ. ರಾಜಕೀಯ ಗಂಧವೇ ಗೊತ್ತಿಲ್ಲದ ಒಬ್ಬ ಹುಡುಗನ ಮುಂದೆ ನೂರಾರು ಕೋಟಿ ಖರ್ಚು ಮಾಡಿಯೂ ಎಂಎಲ್‌ಎ ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಬುದ್ದಿ ಬರಲಿಲ್ಲ.ಈತ ಆರೋಗ್ಯ ಸಚಿವನಾಗಿದ್ದ ವೇಳೆ ಸಂಭವಿಸಿದ ಕೋವಿಡ್ ಸಾಂಕ್ರಾಮಿಕದ ವೇಳೆ ಹೆಣಗಳ ಮೇಲೆ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಮೈಕ್ರೋ ಪೈನಾನ್ಸ್ ಮೂಲಕ ದೋಚಿದ್ದಾರೆ. ಈ ಬಗ್ಗೆ ನನ್ನಬಳಿ ದಾಖಲೆಯಿದೆ. ಅವರ ವಿರುದ್ಧ ಈಗ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಡಿ ಕುನ್ಹಾ ಏನಾದರೂ ನನ್ನ ಕರೆದರೆ ಈತನ ಎಲ್ಲ ಜಾತಕವನ್ನೂ ಬಿಚ್ಚಿಡುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ |BJP Karnataka: ಕರ್ನಾಟಕದ 23 ಜಿಲ್ಲೆಗಳಿಗೆ ಬಿಜೆಪಿ ನೂತನ ಅಧ್ಯಕ್ಷರ ನೇಮಕ

ಸುಧಾಕರ್ ಭ್ರಷ್ಟಾಚಾರ ಮಾಡಬೇಡ, ನಿನ್ನ ಹೆತ್ತವರಿಗೆ ಗೌರವ ತರುವ ಕೆಲಸ ಮಾಡು ಎಂದು ಅನೇಕಬಾರಿ ಮೆಸೇಜ್ ಮಾಡಿದ್ದೇನೆ. ಚಿಕ್ಕಬಳ್ಳಾಪುರ ಎಂದರೆ ನನಗೆ ಪ್ರಾಣ. ದ್ವೇಷ ರಾಜಕಾರಣ ಮಾಡುವುದಿಲ್ಲ ನಾನು. ನನಗೂ ಹೆಂಡತಿ ಮಕ್ಕಳಿದ್ದಾರೆ ಕಣಪ್ಪಾ, ನೀನೊಬ್ಬನೇನಾ ಬದುಕಬೇಕಿರೋದು, ನಿಂದೊಬ್ಬಂದೇನಾ ಪ್ರಪಂಚ, ಹೊಟ್ಟೆಹುರಿಗೂ ಒಂದು ಮಿತಿ ಇಲ್ಲವೇ? ಎಂದು ಗರಂ ಆದರು.

ಕ್ಷೇತ್ರದಲ್ಲಿ ಯಾರಾದರೂ ಬೆಳೆದರೆ ಸಾಕು ಅವರ ವಿರುದ್ಧ ಅಟ್ರಾಸಿಟಿ ಕೇಸು ಹಾಕಿಸುವುದು. ಮೇಲೇಳದಂತೆ ತುಳಿಯುವುದು ನಿನಗಿರುವ ಚಾಳಿ. ನಿನಗೆ ಬೇಕಾದನ್ನು ನೀನು ಮಾಡಿಕೋ, ಪ್ರಕೃತಿ ವಿರುದ್ಧ ಹೋಗಬೇಡ, ಎಷ್ಟು ದಿನ ಈ ಪಾಪದ ಹೊರೆ ಹೊರುತ್ತೀಯಾ ಸುಧಾಕರ? ಮನುಷ್ಯನಾಗಿ ಬದುಕಪ್ಪ, ನಾಲ್ಕು ದಿನಗಳ ಜೀವನ ಇದು, ನಿನಗೆ ಬೇಕಾದನ್ನು ಮಾಡಿಕೊ, ಬೇರೆಯವರಿಗೆ ಯಾಕೆ ತೊಂದರೆ ಕೊಡುತ್ತೀಯಾ? ಎಲ್ಲದಕ್ಕೂ ಮಿತಿ ಇದೆ ಎಂದು ಆಕ್ರೋಶದಿಂದ ನುಡಿದರು.

2019ರಲ್ಲಿ ಹೋಬಳಿ ಉಸ್ತುವಾರಿ ಕೊಟ್ಟಾಗ ನನ್ನ ತನು, ಮನ, ಧನಗಳನ್ನ ಅರ್ಪಿಸಿ ಕೆಲಸ ಮಾಡಿದ್ದೇನೆ. ಇಡೀ ಹೋಬಳಿಯಲ್ಲಿ ಅಧಿಕ ಮತ ಪಡೆಯಲು ನನ್ನದೂ ಸಹ ಪಾಲಿದೆ. 2023ರಲ್ಲಿ ನೀವು ನನಗೆ ಕೊಡಬಾರದ ಕಷ್ಟ ಕೊಟ್ಟರೂ ಸಹ ನಿಮ್ಮ ವಿರುದ್ಧ ಕೆಲಸ ಮಾಡಿಲ್ಲ. ಆದರೆ, ಇನ್ಮುಂದೆ ನೈತಿಕವಾಗಿ ನಿನ್ನ ವಿರುದ್ಧ ಕೆಲಸ ಮಾಡುತ್ತೇನೆ ಸುಧಾಕರ್ ಶಪಥ ಮಾಡಿದರು.

ಕಿರುಕಳ ತಪ್ಪಿಸಿಕೊಳ್ಳಲು ರಾಜಕೀಯ

ನಿನ್ನ ಕಿರುಕುಳ ತಡೆಯಲಾಗದೆ ಆಸರೆಗಾಗಿಯೇ ನಾನು ರಾಜಕೀಯಕ್ಕೆ ಬಂದೆ. ಇವತ್ತು ನಿನ್ನ ಬಲೆ ನೀನೆ ಹೆಣೆದುಕೊಂಡಿದ್ದೀಯಾ. ನೀನು ಮಾಡಿರುವ ಅನಾಚಾರಗಳ ವಿರುದ್ಧ ಕೆಲಸ ಮಾಡುತ್ತೇನೆ. ಪಕ್ಷದ ವಿರುದ್ಧ ಎಂದಿಗೂ ಕೆಲಸ ಮಾಡುವುದಿಲ್ಲ. ನೀನು ಮಾಡಿರುವ ಅನಾಚಾರ ನನಗೆ ಗೊತ್ತಿದೆ ಎಂದು ಹೇಳಿದ್ದೇನೆ. ಹಾಗಿದ್ದರೂ ನೀನು ನನಗೆ ಅಡ್ಡಿಪಡಿಸುತ್ತಿದ್ದೀಯಾ. ಇಲ್ಲಿಂದ ಮುಂದೆ ಪ್ರತಿಯೊಂದು ಅನಾಚಾರಗಳನ್ನು ಬಯಲಿಗೆಳೆಯುತ್ತೇನೆ. ನಿನ್ನ ಅನಾಚಾರಗಳ ಕುರಿತು ನ್ಯಾಯಧೀಶ ಮೈಕಲ್ ಡಿ ಕುನ್ಹಾ ಅವರಿಗೆ ದಾಖಲೆ ಸಮೇತ ಮಾಹಿತಿ ಕೊಡುತ್ತೇನೆ ಎಂದು ಎಚ್ಚರಿಸಿದರು.

ಹೆಣದ ಮೇಲೆ ಹಣ

ಕೋವಿಡ್ ಲಾಕ್ ಡೌನ್ ವೇಳೆ ಹೆಣಗಳು ಬಿದ್ದು ಸಾಯುತ್ತಿದ್ದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಚೆನ್ನೈ ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಕಳಿಸಿ ಕ್ಯಾಷ್ ಮಾಡಿಕೊಂಡಿರುವ ಮೂಲ ದಾಖಲೆಗಳು ನನ್ನ ಬಳಿ ಇವೆ. ನ್ಯಾಯಮೂರ್ತಿಗಳಾದ ಮೈಕಲ್ ಡಿ ಕುನ್ಹಾ ಅವರನ್ನು ಭೇಟಿ ಮಾಡಿ ಅಕ್ರಮದ ದಾಖಲೆಗಳನ್ನು ಕೊಡುತ್ತೇನೆ. ನೀನು ಮಾಡಿರುವ ಅನಾಚಾರಗಳ ಕುರಿತು ಸಾಕ್ಷಿ ಸಮೇತ ದಾಖಲೆ ಕೊಡಲು ನಾನು ಸಿದ್ಧ. ಇನ್ಮೇಲೆ ಇನ್ನೊಂದು ಅಧ್ಯಾಯ ಶುರು. ನಿನ್ನ ಗ್ರಹಾಚಾರ ಶುರು ಆಯಿತು. ನೀನಾ ನಾನ ನೋಡೋಣ ಎಂದು ಸವಾಲೆಸೆದರು.

ಘನಕಾರ್ಯದ ಮಾಹಿತಿ ನೀಡು

ಇಷ್ಟು ದಿನಗಳ ಕಾಲ ಬುದ್ಧಿ ಹೇಳಿದ್ದೇವೆ ಕೇಳಿಲ್ಲ. ಹಾಗಾಗಿ ನಾವು ಇದನ್ನು ಮುಂದೆ ತೆಗೆದುಕೊಂಡು ಹೋಗುತ್ತಿದ್ದೇನೆ. ಒಬ್ಬ ಮಂತ್ರಿಯಾಗಿ ಈ ರೀತಿ ಮಾಡಲು ನಾಚಿಕೆಯಾಗಬೇಕು. ಇವತ್ತು ಸಾಗರೋಪಾದಿಯಲ್ಲಿ ನನಗೆ ಜನರಿಂದ ಸಂದೇಶಗಳು ಬರುತ್ತಿವೆ. ನಿನ್ನ ಘನಕಾರ್ಯ ಮೆಚ್ಚಿ ಎಷ್ಟು ಜನ ಮೆಸೇಜ್ ಮಾಡಿದ್ದಾರೆ ತಿಳಿಸುವೆಯಾ?ಇನ್ನಾದರೂ ಮನುಷ್ಯನಾಗು, ನನ್ನ ಹಣ ಬೆವರು ಹರಿಸಿ ದುಡಿದ ಹಣವನ್ನು ನಾನು ಜನರಿಗೆ ಖರ್ಚು ಮಾಡುತ್ತೇನೆ. ನಿನ್ನ ಹಂಗಲ್ಲಿ ಯಾರೂ ಇಲ್ಲ, ನೀನ್ಯಾವನು ಅದನ್ನು ಪ್ರಶ್ನೆ ಮಾಡಲು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಸುಧಾಕರ್ ಅವರು ಭ್ರಷ್ಟರು, ಇಂತಹ ಕೆಲಸ ಮಾಡಬೇಡಿ, ತಿದ್ದಿಕೊಳ್ಳಿ ಎಂದು ಹೇಳಿದ್ದೇವೆ, ಅವರು ಸೋತಮೇಲೆ ಮಂಕಾಗಿದ್ದರು, ಆದ ಕಾರಣ ನಾವೆಲ್ಲರೂ ಹೋಗಿ ಬುದ್ದಿ ಹೇಳಿದ್ದೆವು. ಇನ್ಮುಂದೆ ಈ ರೀತಿ ಆಗುವುದಿಲ್ಲ ಎಂದು ಹೇಳಿದ್ದರು. ಆ ಕಾರಣಕ್ಕಾಗಿ ಅವರ ಪರ ಕೆಲಸ ಮಾಡಿದ್ದೇವೆ. ಸಂಸದ ಆದ ಮೇಲೆ ಎಲ್ಲಾ ತಿರುಗಾ ಮರುಗ ಆಗಿದೆ ಎಂದು ಹೇಳಿದರು.

ನಿಷ್ಠಾವಂತ ಕಾರ್ಯಕರ್ತ

ನಾನು ಪಕ್ಷದ ಕಟ್ಟಾ ಕಾರ್ಯಕರ್ತ. ಪಕ್ಷ ಯಾವ ಸ್ಥಾನವನ್ನೂ ಕೊಟ್ಟರು ತಲೆ ಬಗ್ಗಿಸಿ ನಿಭಾಯಿಸುವೆ. ಆದ್ರೆ ಸುಧಾಕರ್ ಇರೋವರೆಗೂ ಇಲ್ಲಿ ಪಕ್ಷ ಬೆಳೆಯೊಲ್ಲ ವ್ಯಕ್ತಿಯ ಪ್ರತಿಷ್ಠೆಗೆ ಎಲ್ಲವೂ ಬಲಿಯಾಗುತ್ತಿವೆ. ಪಕ್ಷ ಅಂದ್ರೆ ಇವರ ಆಸ್ತಿನಾ? ಬೇರೆ ಯಾರು ಬೆಳೆಯಬಾರದಾ ಎಂದು ಏಕವಚನದಲ್ಲೆ ಏರುದ್ವನಿಯಲ್ಲಿ ಸುಧಾಕರ್‌ಗೆ ಟಾಂಗ್ ನೀಡಿದ ಅವರು, ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ ಅಧ್ಯಕ್ಷ ಸ್ಥಾನ ತಡೆಯಾಗಿ ಹಿಡಿದಿರುವುದಕ್ಕೆ ಪಕ್ಕವನ್ನು ಯಾವತ್ತೂ ದೂರೊದಿಲ್ಲ. ನನಗೆ ಸ್ಥಾನ ಮುಖ್ಯವಲ್ಲ ಪಕ್ಷ ಮುಖ್ಯ. ಪಕ್ಷಕ್ಕಾಗಿ ಏನೇ ತ್ಯಾಗ ಮಾಡಲು ಸಿದ್ದನಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದರು.

ಈ ಸುದ್ದಿಯನ್ನೂ ಓದಿ | BJP Dominance: ದೇಶದ 15 ರಾಜ್ಯಗಳಲ್ಲಿ ಕೇಸರಿ ಪಡೆಯ ಆಧಿಪತ್ಯ: 4 ದಶಕಗಳ ನಂತರ ಇತಿಹಾಸ ಬರೆದ ಬಿಜೆಪಿ!

ಕಳೆದ ಸಂಸದರ ಚುನಾವಣೆಯಲ್ಲಿ ನಾನು ಯಲಹಂಕ ಅಲೋಕ್ ವಿಶ್ವನಾತ್‌ಗೆ ಟಿಕೇಟ್ ಕೇಳಿದ್ದು ನಿಜ ಆದ್ರೆ ಅಂತಿಮವಾಗಿ ಸುಧಾಕರ್‌ಗೆ ಟಿಕೆಟ್ ನೀಡಿದಾಗ ನಾವು ಪ್ರಮಾಣಿಕವಾಗಿ ಅವರಿಗೆ ಕೆಲಸ ಮಾಡಿದ್ದೇವೆ. ಏನಾದ್ರೂ ಆತನಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಮನಸ್ಸಿಲ್ಲ ಆತ ಕಾಂಗ್ರೇಸ್ ಪಕ್ಷದಲ್ಲಿದ್ದಾಗಲೂ ಇದೆ ಮನಸ್ಥಿತಿಯಲ್ಲಿ ಬೆಳೆದುಕೊಂಡು ಬಂದಿದ್ದಾರೆಂದು ಯದ್ವಾತದ್ವಾ ತರಾಟೆಗೆ ತಗೆದುಕೊಂಡರು. ಪ್ರಧಾನಿ ಮೋದಿಯವರಿಗೆ ಈ ಸುದ್ದಿಗೋಷ್ಟಿ ವಿಚಾರ ಮುಟ್ಟಬೇಕು. ಅವರೂ ಈ ಸುಧಾಕರನ ಅವತಾರವನ್ನು ಕೇಳಿಸಿಕೊಳ್ಳಲಿ ಎಂದು ಕೆಲವೊಂದು ಮಾಹಿತಿಯನ್ನು ಹಿಂದಿಯಲ್ಲಿ ಮಾತನಾಡಿದರು.

ಈ ವೇಳೆ ಸಂದೀಪರೆಡ್ಡಿ ಬಂಬಲಿಗರು ಸುಹಾಸ್, ರಘು, ಹರೀಶ್, ಶ್ರೀಕಾಂತ್, ಶಶಿ, ಶ್ರಿನಾಥ್ ಇತರರು ಇದ್ದರು.

ಸಂದೀಪ್‌ರೆಡ್ಡಿ ವಿರುದ್ಧ ಸುಧಾಕರ್ ಬೆಂಬಲಿಗರ ಆಕ್ರೋಶ

BJP Leaders

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ಅವರು ಆಡಿದ ಮಾತುಗಳನ್ನು ಸಂಸದ ಡಾ.ಕೆ.ಸುಧಾಕರ್ ಅವರ ಬೆಂಬಲಿಗರು ಖಂಡಿಸಿದ್ದಾರೆ. ಸಂಸದರ ನಗರದ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಸದ ಸುಧಾಕರ್ ಬೆಂಬಲಿಗರು, ರಾಜಕೀಯವಾಗಿ ಬೆಳೆಯಬೇಕಿರುವ ನಾಯಕ ಇಂತಹ ಮಾತುಗಳಿಂದ ಬೆಳೆಯಲು ಸಾಧ್ಯವಿಲ್ಲವೆಂಬ ಎಚ್ಚರಿಕೆ ರವಾನಿಸಿದರು.

ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ನಾಯಕ ಅಂತ ನಮಗೆ ನಾವೇ ಹೇಳಿಕೊಂಡರೆ ಆಗಲ್ಲ, ಅದನ್ನು ಜನ ಹೇಳಬೇಕು. ಸಂದೀಪ್‌ರೆಡ್ಡಿ ಅಧ್ಯಕ್ಷನಾದ ಮೇಲೆ 2 ಬಾರಿ ಸಂಸದರ ಮನೆ ಮುಂದೆ ಕಾದಿದ್ದರು. ಸುಧಾಕರ್ ಅವರು ತೋರಿಕೆಗಾಗಿ ರಾಜಕಾರಣ ಮಾಡುತ್ತಿಲ್ಲ, ಸಂದೀಪ್‌ರೆಡ್ಡಿ ಅವರು ವಾಸ್ತವಾಂಶ ಅರಿತು ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಮಾವು ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನವನ್ನು ಏಕಪಕ್ಷೀಯ ನಿರ್ಧಾರದಿಂದ ಘೋಷಿಸಲಾಗಿತ್ತು. ಹಾಗಾಗಿ ಸಂಸದರು ದೆಹಲಿ ಮಟ್ಟದಲ್ಲಿ ವರಿಷ್ಠರನ್ನು ಭೇಟಿ ಮಾಡಿ, ಬದಲಾಯಿಸಿದ್ದಾರೆ. ಮಂಚೇನಹಳ್ಳಿ ಸೇರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ 28 ಗ್ರಾಮ ಪಂಚಾಯಿತಿಗಳಲ್ಲಿ ಶೇ.90ರಷ್ಟು ಬಿಜೆಪಿ ಬೆಂಬಲಿಗರು ಅಧ್ಯಕ್ಷರಾಗಿದ್ದಾರೆ. ಇದಕ್ಕೆಲ್ಲ ಸಂಸದ ಡಾ.ಕೆ.ಸುಧಾಕರ್ ಅವರೇ ಕಾರಣರಾಗಿದ್ದಾರೆ. ಸುಧಾಕರ್ ಅವರ ಬಗ್ಗೆ ಸಂದೀಪ್‌ರೆಡ್ಡಿ ಅವರು ಕೇವಲವಾಗಿ ಮಾತನಾಡಿರುವುದು ಖಂಡನೀಯ ಎಂದರು.

ಕೆವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಮಾತನಾಡಿ, ಸಂದೀಪ್‌ರೆಡ್ಡಿ ಅವರು ಏಕ ವಚನ ಬಳಕೆಯನ್ನು ಖಂಡಿಸಿದರು. ಅಲ್ಲದೆ 2018ರಲ್ಲಿ ಕೇವಲ 5ಸಾವಿರ ಇದ್ದ ಬಿಜೆಪಿ ಮತಗಳನ್ನು 92 ಸಾವಿರಕ್ಕೆ ಏರಿಸುವಲ್ಲಿ ಪ್ರಧಾನಿ ಮೋದಿಯವರೊಂದಿಗೆ ಸಂಸದ ಡಾ.ಕೆ.ಸುಧಾಕರ್‌ರ ಖ್ಯಾತಿ ಸೇರಿದೆ. ನೆನ್ನೆಯವರೆಗೂ ಸುಧಾಕರ್ ಅವರನ್ನು ಅಣ್ಣ ಎನ್ನುತ್ತಿದ್ದ ಸಂದೀಪ್‌ರೆಡ್ಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಡೆಯಾದ ಕೂಡಲೇ ಈ ರೀತಿ ಏಕವಚನದಲ್ಲಿ ಮಾತನಾಡಬಾರದು ಎಂದರು.

ಬಿಜೆಪಿಗೆ ಸುಧಾಕರ್ ಅವರ ಕೊಡುಗೆ ಅಪಾರವಾಗಿದ್ದು, ಶಾಸಕರಾಗಿ, ಸಚಿವರಾಗಿ ಅವರು ಸಲ್ಲಿಸಿದ ಸೇವೆ ಕ್ಷೇತ್ರದ ಜನರು ಮರೆಯುವಂತಿಲ್ಲ. ಅಲ್ಲದೆ ಸಂಸದರಾಗಿ ಅವರು ಸಾರ್ವಜನಿಕ ಸೇವೆಯಲ್ಲಿದ್ದು, ಅಂತಹ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಸಂಯಮದಿಂದ ಇರಬೇಕು. ಆದರೆ ಸಂದೀಪ್‌ರೆಡ್ಡಿ ಅವರು ಆಡಿರುವ ಮಾತುಗಳು ಸಮಂಜಸವಾಗಿಲ್ಲ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ರಾಜಕೀಯದಲ್ಲಿರುವ ಯಾವುದೇ ನಾಯಕನಿಗೆ ತಾಳ್ಮೆ ಮುಖ್ಯ ಆದರೆ ಸಂದೀಪ್‌ರೆಡ್ಡಿಯವರು ಇಂದು ಆಡಿರುವ ಮಾತು ಗಮನಿಸಿದರೆ ಅವರಲ್ಲಿ ತಾಳ್ಮೆ ಇಲ್ಲ ಎಂಬುದು ಅರಿವಾಗುತ್ತದೆ. ವಿರೋಧ ಪಕ್ಷದವರನ್ನು ಟೀಕಿಸಬೇಕಾದರೂ ಗೌರವಯುತ ಪದಗಳನ್ನು ಬಳಸಲಾಗುತ್ತದೆ. ಆದರೆ ಸ್ವಪಕ್ಷದ ಸಂಸದರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕು. ಆ ಕೆಲಸವನ್ನು ಸಂದೀಪ್‌ರೆಡ್ಡಿ ಅವರು ಮಾಡಿಲ್ಲ ಎಂದರು.

ದೇಶದಲ್ಲಿ ಕೇವಲ ಎರಡು ಸ್ಥಾನ ಹೊಂದಿದ್ದ ಬಿಜೆಪಿ ಇಂದು ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆದು ನಿಂತಿದೆ. ಬಿಜೆಪಿ ಶಿಸ್ತಿನ ಪಕ್ಷ, ಈ ಪಕ್ಷದಲ್ಲಿರುವ ನಾಯಕರಾಗಲೀ, ಕಾರ್ಯಕರ್ತರಾಗಲೀ ಶಿಸ್ತಿನಿಂದ ಮಾತನಾಡಬೇಕು, ಶಿಸ್ತಿನಿಂದ ವರ್ತಿಸಬೇಕು, ಸ್ವಪಕ್ಷದ ನಾಯಕರನ್ನೇ ನಿಂದಿಸುವುದು ಶಿಸ್ತು ಉಲ್ಲಂಘನೆಯಾಗಲಿದೆ. ಇನ್ನು ಸಂದೀಪ್‌ರೆಡ್ಡಿ ಅವರು ಒಬ್ಬರೇ ಬಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವರ್ತನೆ ರಾಜಕೀಯದಲ್ಲಿ ಒಳ್ಳೆಯದಲ್ಲ ತಮ್ಮ ಸಹಚರರೊಂದಿಗೆ ಮಾತನಾಡಬೇಕಿತ್ತು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಗಜೇಂದ್ರ, ಎಸ್‌ಆರ್‌ಎಸ್ ದೇವರಾಜ್, ಜಯಕುಮಾರ್, ಯತೀಶ್, ಸ್ವಾತಿ ಮಂಜುನಾಥ್ ಇದ್ದರು.