ಚಿಕ್ಕಬಳ್ಳಾಪುರ: ಚಿಮುಲ್ ಹಾಲು ಉತ್ಪಾದಕರಿಗೆ ಸಂತಸದ ಸುದ್ದಿ ನೀಡಿದ್ದು ಮೇ 31ರತನಕ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ರೂ. 50 ಪೈಸೆ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ 36.40 ರೂ. ಲೀಟರ್‌ಗೆ ನೀಡಲಾಗುತ್ತಿತ್ತು. ಹೆಚ್ಚಳದಿಂದಾಗಿ 36.90 ಪೈಸೆ ರೈತರಿಗೆ ದೊರೆಯಲಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಒಕ್ಕೂಟದ ಅಧ್ಯಕ್ಷ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.
ನಗರ ಹೊರವಲಯ ಚಿಮುಲ್ ಆಡಳಿತ ಕಛೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈ ಕುರಿತು ಮಾತನಾಡಿದ ಅವರು ಚಿಮುಲ್ ಆಡಳಿತ ಮಂಡಳಿ ರೈತಪರವಾದ ಆಡಳಿತ ಮಂಡಳಿಯಾಗಿದೆ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ. 2026ರ ಜನವರಿ ಯಲ್ಲಿ ಪ್ರತಿ ಲೀಟರ್ ಮೇಲೆ 1 ರೂ ಹೆಚ್ಚಳ ಮಾಡಿತ್ತು. ನೂತನ ಆಡಳಿತ ಮಂಡಳಿಗೆ ಫೆ.ಚುನಾವಣೆ ನಡೆದು ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಲೀಟರ್ ಒಂದಕ್ಕೆ ರೂ.50 ಪೈಸೆ ಹೆಚ್ಚಳ ಮಾಡಲು ಆಡಳಿತ ಮಂಡಳಿಯ ಸಭೆಯಲ್ಲಿ ರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ.ಈ ದರವು ಮೇ-31ರ ತನಕ ಇರಲಿದೆ ಎಂದರು.
ಇದೇ ರೀತಿ, ಉಗಾದಿ ಹಬ್ಬದ ಕೊಡುಗೆಯಾಗಿ ಒಕ್ಕೂಟದ ಅಧಿಕಾರಿಗಳು, ನೌಕರ ವರ್ಗಕ್ಕೂ ಬೋಸನ್ ರೂಪದಲ್ಲಿ 75 ಸಾವಿರ ನೀಡಲು ತೀರ್ಮಾನ ಕೈಗೊಂಡಿದ್ದು, ಗುತ್ತಿಗೆ ನೌಕರ ರಿಗೂ ಅವರ ವೇತನದ ಮೇಲೆ ಶೇ 8.33ರಷ್ಟು ಬೋನಸ್ ನೀಡಲಾಗುತ್ತಿದೆ ಎಂದರು.
ಒಕ್ಕೂಟ ಪ್ರಸ್ತುತ ಲಾಭದಲ್ಲಿದ್ದು, ಇಲ್ಲಿ ಉತ್ಪಾದನೆ ಆಗುತ್ತಿರುವ ಹಾಲಿಗಿಂತ ಬೇಡಿಕೆ ಹೆಚ್ಚಿದೆ. ನಂದಿನಿ ಉತ್ಪನ್ನಗಳಿಗೆ ಗ್ರಾಹಕರು, ರೈತರಿಂದಲೂ ಬೇಡಿಕೆ ಹೆಚ್ಚಿದ್ದು ಇಲ್ಲಿ ರುವ ಲಾಭವನ್ನು ರೈತರು ಮತ್ತು ನೌಕರ ವರ್ಗಕ್ಕೆ ನೀಡುವುದು ನ್ಯಾಯಬದ್ಧವಾದ ತೀರ್ಮಾನ ವಾಗಿದೆ ಎಂದರು.
ಇದನ್ನೂ ಓದಿ: Chimul Election: ಚಿಮುಲ್ ಚುನಾವಣೆ: ಗುಡಿಬಂಡೆ ಕ್ಷೇತ್ರದಲ್ಲಿ ಹಣಾಹಣಿ, ಮತದಾರರಿಗೆ ಆಮಿಷದ ಸುರಿಮಳೆ
ರಾಜ್ಯದ 16 ಹಾಲು ಒಕ್ಕೂಟಗಳ ಪೈಕಿ ನಮ್ಮ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವೇ ರೈತರಿಗೆ ಅತಿ ಹೆಚ್ಚಿನ ದರ ನೀಡುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮದು ಜನಪರ ಒಕ್ಕೂಟ ವಾಗಿದ್ದು,ಪಾರದರ್ಶಕ ಆಡಳಿತದ ಮೂಲಕ ಹಾಲು ಉತ್ಪಾದಕ ಕುಟುಂಬಗಳ ವಿಶ್ವಾಸ ಉಳಿಸಿ ಕೊಳ್ಳಲಾಗುವುದು ಎಂದ ಅವರು ಕರ್ನಾಟಕದ ಗ್ರಾಹಕರು ನಂದಿನಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ ಉಳಿಸಬೇಕೆಂದು ಅವರು ಮನವಿ ಮಾಡಿದರು.
ರೈತರೂ ತಮ್ಮ ಸಭೆ ಸಮಾರಂಭಗಳಿಗೆ ನಂದಿನಿ ಉತ್ಪನ್ನಗಳನ್ನೇ ಬಳಸಲು ಮನಸ್ಸು ಮಾಡಬೇಕು. ನಿಮ್ಮೆಲ್ಲರ ಸಹಕಾರ ಪ್ರೀತಿ ಇದ್ದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಚಿಮುಲ್‌ನಲ್ಲಿ ಹಾಲು ಮತ್ತು ಮೊಸರು ಪ್ಯಾಕಿಂಗ್ ಘಟಕ ಇಲ್ಲದಿರುವುದರಿಂದ ಕೋಲಾರ-ಬೆಂಗಳೂರು ಡೇರಿಗಳಿಂದ ಸಾಚೆಟ್ ಮಾಡಿಸಿ ಸರಬರಾಜು ಮಾಡಿಕೊಳ್ಳು ತ್ತಿರುವುದರಿಂದ ಪ್ರತಿ ತಿಂಗಳು 2.5 ಕೋಟಿ ವೆಚ್ಚವಾಗುತ್ತಿದೆ. ರಾಜ್ಯ ಸರ್ಕಾರ ಲೋಕಲ್ ಸೆಲ್ ಘಟಕ ಸ್ಥಾಪನೆಗಾಗಿ 9.15 ಎಕರೆ ಜಮೀನು ಮುಂಜೂರು ಮಾಡಿದೆ. ಆ ಘಟಕ ನಿರ್ಮಾಣಕ್ಕೆ 30 ಕೋಟಿ ವೆಚ್ಚದ ಡಿಪಿಆರ್‌ಕೂಡ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಲೋಕಲ್ ಸೆಲ್ ಪ್ಯಾಕಿಂಗ್ ಘಟಕ ತಯಾರಾದರೆ ನಮಗೆ ಪ್ರತಿ ತಿಂಗಳು ತಿಂಗಳಿಗೆ ಸುಮಾರು 1.5 ಕೋಟಿ ರೂ. ಉಳಿತಾಯವಾಗಲಿದೆ ಎಂದು ವಿವರಿಸಿದರು.
ಹಸಿ ಮೇವು ಬೆಳೆಸುವ ರೈತರಿಗೆ ಪ್ರತಿ ಎಕರೆಗೆ 3500 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರಸ್ತುತ ಸರಾಸರಿ ದಿನಕ್ಕೆ 4.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಮಾರುಕಟ್ಟೆ ಸಮಸ್ಯೆ ಇಲ್ಲವಾಗಿದೆ. ಇಲ್ಲಿ ಹೊಸ ಸಾಚೆಟ್ ಘಟಕ ಸ್ಥಾಪಿಸುವ ಸಂಬಂಧ ಇತರೆ ಒಕ್ಕೂಟಗಳಿಗೆ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಗುವುದು. ಆ ಮೂಲಕ ಆಧುನಿಕ ತಂತ್ರಜ್ಞಾನ ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಒಕ್ಕೂಟದಲ್ಲಿ ಶೇ.85 ರಷ್ಟು ಗುಣಮಟ್ಟವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಚೇಳೂರಿನಲ್ಲಿ ಶಿಬಿರ ಕಚೇರಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ರಾಸುಗಳಿಗೆ ಲಸಿಕೆ ನೀಡುವ ಕಾರ್ಯ ಕ್ರಮವೂ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈಗ ನಮ್ಮ ಜಿಲ್ಲೆಯಲ್ಲಿ ಒಟ್ಟು 996 ಹಾಲು ಉತ್ಪಾದಕರ ಸಹಕಾರ ಸಂಘಗಳು ಕೆಲಸ ಮಾಡುತ್ತಿದು ಅವುಗಳ ಪೈಕಿ 125 ಮಹಿಳಾ ಸಂಘಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಎಲ್ಲಾ ಸಂಘಗಳು ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿದ್ದು, ಐದಾರು ಸಂಘಗಳು ನಷ್ಟದಲ್ಲಿ ನಡೆಯುತ್ತಿರಬಹುದು. ಚಿಮುಲ್‌ನಿಂದ ಕಾಶ್ಮೀರ, ಪಶ್ಛಿಮ ಬಂಗಾಳ, ಗೋವಾ ಹಾಗೂ ಸೇನಾ ಮತ್ತು ರಕ್ಷಣಾ ಇಲಾಖೆಗೆ ನಮ್ಮ ಹಾಲು ಸರಬರಾಜಾಗುತ್ತಿದೆ ಎಂದು ಹೇಳಿದರು.
ಹಾಲಿನ ದರವನ್ನು 50 ಪೈಸೆ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಒಕ್ಕೂಟಕ್ಕೆ ಸುಮಾರು 65 ಲಕ್ಷ ರೂ. ಹೆಚ್ಚುವರಿ ಹೊರೆ ಒಕ್ಕೂಟಕ್ಕೆ ಬೀಳಲಿದೆ. ರೈತರ ಹಿತದೃಷ್ಟಿ ಯಿಂದ ಇದನ್ನು ಲೆಕ್ಕ ಹಾಕಲಾಗದು ಎಂದ ಅವರು ಒಕ್ಕೂಟದ ಮೂಲಸೌಕರ್ಯ ಅಭಿವೃದ್ಧಿಗಾಗಿ ಈಗಾಗಲೇ 70 ಕೋಟಿ ನಿಧಿಯನ್ನು ಮೀಸಲಿಟ್ಟಿದ್ದರೂ, ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನ ನೀಡುವಂತೆ ಕೋರ ಲಾಗಿದೆ ಎಂದು ತಿಳಿಸಿದರು.
ಹಿರಿಯ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ ರಾಜ್ಯದ 16 ಹಾಲು ಒಕ್ಕೂಟಗಳ ಪೈಕಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ನೂತನ ಒಕ್ಕೂಟವಾಗಿದ್ದು, ಇದನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮೇ ಹಾಗೂ ಜೂನ್ ತಿಂಗಳವರೆಗೆ ಹಾಲು ಸಂಗ್ರಹ ಮತ್ತು ಮಾರಾಟದ ವ್ಯವಸ್ಥೆಯನ್ನು ಸಮರ್ಪಕವಾಗಿ ಮುಂದುವರೆಸಲು ಬೆಲೆ ಹೆಚ್ಚಳ ಮಾಡಲಾಗಿದೆ. ಚಿಮುಲ್‌ಗೆ ಮಾರುಕಟ್ಟೆ ಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಉತ್ಪಾದನೆ ಮತ್ತು ಮಾರಾಟದ ನಡುವೆ ಸಮನ್ವಯತೆ ಸಾಧಿಸುವುದು ಅಗತ್ಯ ಎಂದು ತಿಳಿಸಿದರು.
ಹಾಲಿನ ಪಾಕೆಟ್ ಉತ್ಪಾದನೆ ಯೂನಿಟ್ ಸ್ಥಾಪಿಸಲು 9.14 ಕುಂಟೆ ಜಾಗವನ್ನು ಸಿದ್ದರಾಮಯ್ಯ ಸರ್ಕಾರ ನೀಡಿದೆ. ಹೊಸ ಒಕ್ಕೂಟಗಳಿಗೆ ಕೋ-ಪ್ಯಾಕಿಂಗ್ ವ್ಯವಸ್ಥೆ ನಡೆಸಲು ಸುಮಾರು 30 ಕೋಟಿ ರೂ. ವೆಚ್ಚವಾಗುತ್ತದೆ. ಇದನ್ನು ಸರಕಾರವೇ ನೀಡಲಿ ಎಂದು ಮನವಿ ಮಾಡಿದರು.
ಚಾಮರಾಜನಗರ ಹಾಲು ಒಕ್ಕೂಟಕ್ಕೆ 30 ಕೋಟಿ ರೂ. ಹಾಗೂ ಹಾವೇರಿ ಹಾಲು ಒಕ್ಕೂಟಕ್ಕೆ 50 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿದ ಅವರು, ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೂ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಕನಿಷ್ಠ 20 ಕೋಟಿ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಚಿಮುಲ್ ನಿರ್ದೇಶಕರಾದ ಕಾಂತರಾಜು, ದಿನೇಶ್. ಕೆ.ಎನ್.ಕೃಷ್ಣಾ ರೆಡ್ಡಿ, ಆದಿನಾರಾಯಣರೆಡ್ಡಿ, ಕೆ.ಎನ್.ಆವಲಪ್ಪ, ಸುಧಾ, ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಸಿ.ಶ್ರೀನಿವಾಸಗೌಡ, ಚಿಮುಲ್ ಸಿಬ್ಬಂದಿ ವರ್ಗದವರು ಇದ್ದರು.