ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MP Dr. K. Sudhakar on Budget: ಕರ್ನಾಟಕದ ವಿನಾಶದ ನೀಲನಕ್ಷೆಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ, ಬಯಲುಸೀಮೆಗೆ ಶೂನ್ಯ ಕೊಡುಗೆ: ಸಂಸದ ಡಾ.ಕೆ.ಸುಧಾಕರ್‌

ಕಳೆದ ಬಿಜೆಪಿ ಸರ್ಕಾರದಲ್ಲಿ ಅವಧಿಯಲ್ಲಿ ಹೈ ಟೆಕ್‌ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆ ನೀಡಲಾಗಿತ್ತು. ಆದರೆ ಈಗಿನ ಬಜೆಟ್‌ನಲ್ಲಿ ಅಂತಹ ಮಾರುಕಟ್ಟೆ ರೂಪಿಸುವ ಯಾವುದೇ ಯೋಜನೆ ಅಥವಾ ಅನುದಾನ ನೀಡುವ ಕ್ರಮ ವಹಿಸಿಲ್ಲ. ಹೂ ಕೃಷಿಗೆ ಅಂತಾ ರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಸೂಕ್ತ ಯೋಜನೆಯನ್ನು ನೀಡಿದ್ದರೆ ಬಯಲು ಸೀಮೆಗೆ ಒಳಿತಾಗುತ್ತಿತ್ತು

ಕರ್ನಾಟಕದ ವಿನಾಶದ ನೀಲನಕ್ಷೆಯ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ

-

Ashok Nayak
Ashok Nayak Mar 6, 2026 5:59 PM

ಎತ್ತಿನಹೊಳೆ ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲ, ಎಚ್‌ಎನ್‌ ವ್ಯಾಲಿ ತೃತೀಯ ಹಂತದ ಸಂಸ್ಕರಣೆ ಬಗ್ಗೆ ಮಾತಿಲ್ಲ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)ಅವರು ದಾಖಲೆಯ ಕಳಪೆ ಬಜೆಟ್‌ ಮಂಡಿಸಿದ್ದು, ಬಯಲುಸೀಮೆಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್‌(MP Dr.K.Sudhakar) ಹೇಳಿದ್ದಾರೆ. 

ಕಾಂಗ್ರೆಸ್‌ ಸರ್ಕಾರದ ಬಜೆಟ್‌ ಕುರಿತು ಪ್ರತಿಕ್ರಿಯಿಸಿದ ಅವರು, ದಾಖಲೆಯ 17ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರ ಲಿಲ್ಲ. 

ಈ ಬಜೆಟ್‌ನಲ್ಲಿ "ಅಭಿವೃದ್ಧಿ" ಎಂಬ ಪದದ ಅರ್ಥವನ್ನೇ ಕಾಂಗ್ರೆಸ್ ಸರ್ಕಾರ ಮರೆತಂತಿದೆ. ಕಾಂಗ್ರೆಸ್ ಸರ್ಕಾರದ 2026-27ರ ಬಜೆಟ್ ಕನ್ನಡಿಗರಿಗೆ ಸಾಲದ ಸುಳಿ ಮತ್ತು ತೆರಿಗೆಯ ಹೊರೆಯನ್ನಷ್ಟೇ ನೀಡಿದೆ. 

ಈ ಸರ್ಕಾರ ಕರ್ನಾಟಕವನ್ನು ಕಲ್ಯಾಣ ರಾಜ್ಯದ ಬದಲು 'ಸಾಲಗಾರ ರಾಜ್ಯ'ವನ್ನಾಗಿ ಪರಿವರ್ತಿಸಿದೆ. ಅಂಕಿ-ಅಂಶಗಳೇ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಕನ್ನಡಿ ಹಿಡಿದಿದೆ ಎಂದು ದೂರಿದರು. 

ಇದನ್ನೂ ಓದಿ: Karnataka Budget 2026: ಅಮರ್ಥ್ಯಸೇನ್‌ ಅಶಯ ಬಿಂಬಿಸಿದ ರಾಜ್ಯ ಬಜೆಟ್‌; 11 ಜಿ ಮಾದರಿ ಎಂದರೇನು?

ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಅಭಿವೃದ್ಧಿಯ ಉದ್ದೇಶ ಈ ಬಜೆಟ್‌ನಲ್ಲಿಲ್ಲ. ಚಿಕ್ಕಬಳ್ಳಾಪುರ ಹೂ ಹಾಗೂ ತರಕಾರಿ ಬೆಳೆಗೆ ಜನಪ್ರಿಯ ವಾಗಿದೆ. 

ಕಳೆದ ಬಿಜೆಪಿ ಸರ್ಕಾರದಲ್ಲಿ ಅವಧಿಯಲ್ಲಿ ಹೈ ಟೆಕ್‌ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆ ನೀಡಲಾಗಿತ್ತು. ಆದರೆ ಈಗಿನ ಬಜೆಟ್‌ನಲ್ಲಿ ಅಂತಹ ಮಾರುಕಟ್ಟೆ ರೂಪಿಸುವ ಯಾವುದೇ ಯೋಜನೆ ಅಥವಾ ಅನುದಾನ ನೀಡುವ ಕ್ರಮ ವಹಿಸಿಲ್ಲ. ಹೂ ಕೃಷಿಗೆ ಅಂತಾ ರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಸೂಕ್ತ ಯೋಜನೆಯನ್ನು ನೀಡಿದ್ದರೆ ಬಯಲು ಸೀಮೆಗೆ ಒಳಿತಾಗುತ್ತಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಎತ್ತಿನಹೊಳೆ ಯೋಜನೆಯಡಿ 2 ನೇ ಹಂತದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಬಗ್ಗೆ ಹೇಳಲಾಗಿದೆ. ಜೊತೆಗೆ ಕೊರಟಗೆರೆ ತಾಲೂಕಿನ ಸಮೀಪ ಸಮತೋಲನ ಜಲಾಶಯ ನಿರ್ಮಿಸುವ ಬಗ್ಗೆ ತಿಳಿಸಲಾಗಿದೆ. 



ಆದರೆ ಚಿಕ್ಕಬಳ್ಳಾಪುರ ಭಾಗಕ್ಕೆ ಯಾವಾಗ ನೀರು ಬರಲಿದೆ ಎಂಬ ಸಮಗ್ರ ಚಿತ್ರಣವನ್ನು ನೀಡಿಲ್ಲ. ಇಲ್ಲಿನ ರೈತರು ಬಹಳ ವರ್ಷಗಳಿಂದ ನೀರಾವರಿಗಾಗಿ ಕಾಯುತ್ತಿದ್ದರೂ ಅದು ಕಾಂಗ್ರೆಸ್‌ ಸರ್ಕಾರದ ಗಮನಕ್ಕೆ ಇನ್ನೂ ಬಂದಿಲ್ಲ ಎಂಬುದು ಚಿಂತೆಗೀಡುಮಾಡುವ ಸಂಗತಿ ಎಂದು ಅವರು ಟೀಕಿಸಿದ್ದಾರೆ. 

ಎಚ್‌ಎನ್‌ ವ್ಯಾಲಿ ಹಾಗೂ ಕೆಸಿ ವ್ಯಾಲಿ ಯೋಜನೆಗಳಲ್ಲಿ ತೃತೀಯ ಹಂತದ ಸಂಸ್ಕರಣೆ ತರಲು ನಾನು ಆಗ್ರಹ ಮಾಡುತ್ತಲೇ ಇದ್ದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ವನ್ನು ಕೈಗೊಳ್ಳುವುದು ಅನಿವಾರ್ಯ. 

ಆದರೆ ಈ ಬಗ್ಗೆ ಯಾವುದೇ ಚಿಂತನೆಯನ್ನು ಸರ್ಕಾರ ನಡೆಸಿಲ್ಲ. ಇದರಿಂದಾಗಿ ಈ ಭಾಗದ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಅವರು ದೂರಿದ್ದಾರೆ. 

ಅದಕ್ಷ ಹಣಕಾಸು

ಕಾಂಗ್ರೆಸ್ ಸರ್ಕಾರದ ಹಣಕಾಸು ನಿರ್ವಹಣೆ ಎಷ್ಟು ಅದಕ್ಷವಾಗಿದೆ ಎಂದರೆ, ರಾಜ್ಯದ ಒಟ್ಟು ರಾಜಸ್ವ ಆದಾಯದ (Revenue Receipts) ಬರೋಬ್ಬರಿ 88-90% ರಷ್ಟು ಹಣ ಕೇವಲ ಸಂಬಳ, ಪೆನ್ಷನ್ ಮತ್ತು ಸಾಲದ ಬಡ್ಡಿ ಪಾವತಿಸಲು ವ್ಯಯವಾಗುತ್ತಿದೆ. 

ಅಂದರೆ, ನಾವು ಗಳಿಸುವ ಪ್ರತಿ 100 ರೂಪಾಯಿಯಲ್ಲಿ 88 ರೂಪಾಯಿ ಕಳೆದ ಕಾಲದ ವೆಚ್ಚಗಳಿಗೇ ಸರಿಯಾಗುತ್ತಿದೆ. ಇನ್ನು ರಾಜ್ಯದ ಪ್ರಗತಿಗೆ ಹೊಸ ಯೋಜನೆಗಳನ್ನು ಜಾರಿಗೆ ತರಲು ನಿಮ್ಮ ಬಳಿ ಹಣವೆಲ್ಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ. 

ಇದಕ್ಕಿಂತ ಹೆಚ್ಚು ಚಿಂತಾಜನಕ ವಿಷಯವೆಂದರೆ, ಈ ವರ್ಷ ಕಾಂಗ್ರೆಸ್ ಸರ್ಕಾರ ಸುಮಾರು ₹1.32 ಲಕ್ಷ ಕೋಟಿಯಷ್ಟು ಸಾಲ ಮಾಡುತ್ತಿದೆ. ಆದರೆ ಆ ಸಾಲದ ಹಣದಲ್ಲಿ ಸರ್ಕಾರ ಮಾಡುತ್ತಿರುವ ಬಂಡವಾಳ ವೆಚ್ಚ ಕೇವಲ ₹72,000 ಕೋಟಿ ಮಾತ್ರ. 

ಅಂದರೆ, ಮಾಡಿದ ಸಾಲದ ಬಹುದೊಡ್ಡ ಭಾಗವನ್ನು ಆಸ್ತಿ ಸೃಜನೆಗೆ ಬಳಸುವ ಬದಲು, ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೆ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳ ಅಸಮರ್ಪಕ ನಿರ್ವಹಣೆಗೆ ಸುರಿಯುತ್ತಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯ 5 ವರ್ಷಗಳಲ್ಲಿ ಮಾಡಿದ ಒಟ್ಟು ಸಾಲ ₹1,16,512 ಕೋಟಿ ಆಗಿತ್ತು. ಆದರೆ ಈ ಎರಡನೇ ಅವಧಿಯ ಕೇವಲ 3 ವರ್ಷಗಳಲ್ಲಿಯೇ ಕರ್ನಾಟಕವನ್ನು ₹4 ಲಕ್ಷ ಕೋಟಿಗೂ ಹೆಚ್ಚು ಸಾಲದ ಕೂಪಕ್ಕೆ ದೂಡಿದ್ದಾರೆ. ರಾಜ್ಯದ ಒಟ್ಟು ಸಾಲ ಈಗ ₹8 ಲಕ್ಷ ಕೋಟಿ ಗಡಿ ದಾಟಿದೆ. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜಸ್ವ ಮಿಗತೆ ಹೊಂದಿದ್ದ ಕರ್ನಾಟಕ, ಇಂದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಕೃಪೆಯಿಂದ ₹22,957 ಕೋಟಿ ರಾಜಸ್ವ ಕೊರತೆ ಯನ್ನು ಎದುರಿಸುತ್ತಿದೆ. ವಿತ್ತೀಯ ಕೊರತೆ 1 ಲಕ್ಷ ಕೋಟಿ ಆಸುಪಾಸಿಗೆ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ನನ್ನ ಪ್ರಕಾರ ಇದು ಬಜೆಟ್ ಅಲ್ಲ, ಇದು ಕರ್ನಾಟಕದ ವಿನಾಶದ ನೀಲನಕ್ಷೆ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುವುದನ್ನೇ ಕಸುಬು ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಮೊದಲು ತನ್ನ ಈ ಎಡಬಿಡಂಗಿ ಆರ್ಥಿಕ ನೀತಿಗಳಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಕ್ಕೆ ಮೊದಲು ಉತ್ತರ ನೀಡಲಿ. ಸಾಲವನ್ನೇ ಸಾಧನೆ ಎಂದು ನಂಬಿರುವ ಈ ಅಭಿವೃದ್ಧಿ ಶೂನ್ಯ ಜನವಿರೋಧಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.