ಚಿಕ್ಕಬಳ್ಳಾಪುರ: ಫೆ.23ರಂದು ನಗರ ಹೊರವಲಯದಲ್ಲಿ ನಡೆಯುವ ಬೃಹತ್ ಕಾರ್ಯ ಕ್ರಮದಲ್ಲಿ ನರೇಗಾ ಬಚಾವ್ ಸಂಗ್ರಾಮ್ ಆಂದೋಲನಕ್ಕೆ ಚಿಕ್ಕಬಳ್ಳಾಪುರದಿಂದ ಚಾಲನೆ ನೀಡಲಾಗುತ್ತಿದ್ದು ಆ ಮೂಲಕ ಮಹಾತ್ಮಾ ಗಾಂಧಿಗೆ ಗೌರವ ಸಲ್ಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Chief Minister Siddaramaiah, Deputy Chief Minister D.K. Shivakumar, Karnataka in-charge Surjewala, National Congress President Mallikarjun Kharge) ಆಗಮಿಸುವರು ಎಂದು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್(MLA Pradeep Eshwar Iyer) ತಿಳಿಸಿದರು.
ನಗರ ಹೊರವಲಯ ರೀಟ್ರೀಟ್ ಖಾಸಗಿ ರೆಸಾರ್ಟ್ನಲ್ಲಿ ಮಂಗಳವಾರ ಸಿ.ಎಂ.ಆಗಮನದ ಹಿನ್ನೆಲೆಯಲ್ಲಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನೆ ಸಮಾರಂಭದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
50 ರಿಂದ 1 ಲಕ್ಷ ಮಂದಿಯನ್ನು ಸೇರಿಸಿ ಚಿಕ್ಕಬಳ್ಳಾಪುರದಲ್ಲಿಯೇ ಈ ಕಾರ್ಯಕ್ರಮ ಮಾಡಿಸುವುದು ನನ್ನ ಕನಸಾಗಿತ್ತು. ಕೇಂದ್ರ ಸರಕಾರ ಗ್ರಾಮ ಭಾರತದ ಸ್ವಾವಲಂಬನೆಗೆ ಆಸರೆಯಾಗಿದ್ದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸಿ ಹೊಸದಾಗಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿ ಮಾಡುವ ಮೂಲಕ ಮಹಾತ್ಮಾ ಗಾಂಧೀಜಿಗೆ ಹೆಸರಿಗೆ ದ್ರೋಹವೆಸಗಿದೆ.
ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಕೇಂದ್ರದ ಹುನ್ನಾರವನ್ನು ಬಯಲುಗೊಳಿಸುವ ಕಾರ್ಯಕ್ರಮ ವನ್ನು ಚಿಕ್ಕಬಳ್ಳಾಪುರದಲ್ಲಿ ಮಾಡುತ್ತಿರುವ ಹಿನ್ನೆಲೆ ಇಂದು ಕಾರ್ಯಕರ್ತರು ಮುಖಂಡರ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ 500 ಮಂದಿ ಭಾಗಿಯಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಜನಪರ ಯೋಜನೆಗಳಿಗೆ ನಮ್ಮ ಸರಕಾರ ಇಟ್ಟಿದ್ದ ಹೆಸರು ಗಳನ್ನು ಮೋದಿ ಸರಕಾರ ಬದಲಾವಣೆ ಮಾಡಿದೆ.ಯುಪಿಎ ಸರಕಾರದ ಮೊದಲ ಅವಧಿ 2005ರಲ್ಲಿ ರಾಷ್ಟ್ರದಲ್ಲಿದ್ದ ನಿರುದ್ಯೋಗ ಸಮಸ್ಯೆ ನಿವಾರಿಸಲು ದೂರ ದೃಷ್ಟಿ ಯಿಂದ ನರೇಗಾ ಯೋಜನೆ ಜಾರಿಗೆ ತಂದಿತ್ತು.ಈ ಕಾನೂನಿನಡಿ ವರ್ಷಕ್ಕೆ 100 ದಿನಗಳ ಉದ್ಯೋಗ ಕ್ಕೆ ಅವಕಾಶವಿದ್ದು ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆಯಿತ್ತು. ಯೋಜನೆಗೆ ಶೇ.20 ಕೇಂದ್ರ ನೀಡುತ್ತಿತ್ತು. ಆದರೆ ಈಗ 100 ದಿನಗಳ ಬದಲಿಗೆ 125 ದಿನ ಎಂದು ಹೇಳಲಾಗುತ್ತಿರುವುದು ಕೇವಲ ಕಣ್ಣೊರೆಸುವ ತಂತ್ರ. ಉದ್ಯೋಗ ನೀಡುವ ವ್ಯವಸ್ಥೆ ಯಿಂದ ಕೇಂದ್ರ ತಪ್ಪಿಸಿಕೊಳ್ಳುತ್ತಿದೆ, ಈ ಸತ್ಯವನ್ನು ಜನತೆಗೆ ತಿಳಿಸಬೇಕಿದೆ. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಭಿನ್ನಮತ ಸುಳ್ಳು..!!
ಕಾಂಗ್ರೆಸ್ ಪಕ್ಷದಲ್ಲಿ ಯಾವ ಕಾರಣಕ್ಕೂ ಬಿರುಕು ಮೂಡಿಲ್ಲ. ನನಗಿರುವ ಮಾಹಿತಿಯಂತೆ ಸಿ.ಎಂ ಮತ್ತು ಡಿಸಿಎಂ ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಇಬ್ಬರ ಮಧ್ಯೆ ಬಿರುಕಿದೆ ಎಂಬುದು ಹರಿದಾಡುತ್ತಿರುವ ಮಾಧ್ಯಮಗಳ ಸೃಷ್ಟಿ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಬೇಕು ಎಂಬ ವಿಚಾರದಲ್ಲಿ ಎಲ್ಲರೂ ಕೂಡಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್ ತೆಗೆದು ಕೊಳ್ಳುವ ತೀರ್ಮಾನಕ್ಕೆ ನಾವೆಲ್ಲಾ ಬದ್ಧವಾಗಿದ್ದೇವೆ.
ಶಾಸಕರ ವಿದೇಶ ಪ್ರವಾಸ ಪೂರ್ವನಿರ್ಧರಿತ ಕಾರ್ಯಕ್ರಮವಾಗಿದೆ. ಇದು ಒಂದು ಇಲಾಖೆ ಯ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಯಾರು ಬೇಕಾದರೂ ಪ್ರವಾಸಕ್ಕೆ ಹೋಗಬಹುದಿತ್ತು. ನನಗೆ ಆಸಕ್ತಿಯಿಲ್ಲ,ನಾನು ಹೋಗಿಲ್ಲ.ಯಾರು ಹೋಗ್ತೀವಿ ಎಂದರೂ ಕಳಿಸಿಕೊಡುವ ವ್ಯವಸ್ಥೆ ನಮ್ಮ ಸರಕಾರದಲ್ಲಿದೆ ಎನ್ನುವ ಮೂಲಕ ಪ್ರವಾಸಕ್ಕೆ ಅಂಟಿರುವ ರಾಜಕೀಯ ಲೇಪನವನ್ನು ಶಾಸಕ ಪ್ರದೀಪ್ ಈಶ್ವರ್ ತೊಡೆದು ಹಾಕಿದರು.
ಸುಬ್ಬಾರೆಡ್ಡಿ ಜತೆ ಪಕ್ಷ ಜತೆಗಿದೆ!!
ಹಿರಿಯ ಶಾಸಕ ಸುಬ್ಬಾರೆಡ್ಡಿ ಅವರು ತುಂಬಾ ಒಳ್ಳೆಯವರು.ಯಾವ ಕಾರಣಕ್ಕೆ ಅವರ ಮೇಲೆ ಈ ಆರೋಪ ಬಂದಿದೆಯೋ ಗೊತ್ತಿಲ್ಲ. ಯಾವುದೋ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲೇ ಬೇಕಿತ್ತು. ಅದು ಸ್ವಲ್ಪ ವಿಳಂಭವಾಗಿದೆ ಅಷ್ಟೆ.ಏನೋ ಪಾಪ ಫೈಲ್ ಮಾಡುವಾಗ, ಅವರಿಗೆ ಅಡ್ವೈಸ್ ಮಾಡೋರು ಸರಿಯಾಗಿ ಮಾಡಿದಂತಿಲ್ಲ ಅಷ್ಟೆ.ಸುಬ್ಬಾರೆಡ್ಡಿ ಸಾಹೇಬರದ್ದು ಇದರಲ್ಲಿ ಏನೂ ತಪ್ಪಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಸುಪ್ರಿಂ ಕೋರ್ಟಿನಲ್ಲಿ ಯಾದರೂ ಅವರಿಗೆ ಗೆಲುವು ಸಿಗಲಿದೆ. ಶಾಸಕರಾಗಿ ಮುಂದುವರೆಯಲಿದ್ದಾರೆ.ಪಕ್ಷ ಮತ್ತು ನಾವೆಲ್ಲಾ ಅವರ ಜತೆಗಿರಲಿದ್ದೇವೆ ಎಂದು ಪ್ರದೀಪ್ ಈಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಚಿನ್ಹೆಯಡಿ ನಡುವೆ ಚುನಾವಣೆ ಗೆಲುವು ನನ್ನ ಗುರಿ??
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಚಿನ್ಹೆಯಡಿ ನಡೆಯುವ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನನ್ನ ಜವಾಬ್ದಾರಿಯಾಗಿದೆ. ನಗರಸಭೆ 31 ವಾರ್ಡು, ಜಿಲ್ಲಾ ಪಂಚಾಯಿತಿ-6, ತಾಲೂಕು ಪಂಚಾಯಿತಿ-13. ಮಂಚೇನಹಳ್ಳಿ-7 ಈ ಎಲ್ಲಾ ಚುನಾವಣೆ ಮಾಡುತ್ತೇನೆ. ಆ ಮೂಲಕ ಇದು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ನಮ್ಮೆಲ್ಲಾ ಮುಖಂಡರ ನೇತೃತ್ವದಲ್ಲಿ ತೋರಿಸುತ್ತೇನೆ. ಈ ಮಾತನ್ನು ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಪಕ್ಷದ ಚಿನ್ಹೆಯಿಲ್ಲದೆ ನಡೆಯುವ ಚುನಾವಣೆ ಫಲಿತಾಂಶಗಳಿಗೆ ನನಗೆ ಯಾವ ಸಂಬಂಧವೂ ಇಲ್ಲ ಎಂದರು.
*
ಚಿಕ್ಕಬಳ್ಳಾಪುರದಲ್ಲಿ ಫೆ.23ಕ್ಕೆ ನಡೆಯುವ ನರೇಗಾ ಬಚಾವ್ ಸಂಗ್ರಾಮ್ ಕಾರ್ಯಕ್ರಮದ ಮೂಲಕ ಬಿಜೆಪಿಯಿಂದ ಗೆದ್ದಿರುವ ನಾಲಾಯಕ್, ಅಸಮರ್ಥರು ಮುಟ್ಟಾಳ ಸಂಸದರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದ್ದರೂ ಕನಿಷ್ಠ ಬಾಯಿತೆರೆಯದ ಇಂತಹವರಿಗೆ ಚಿಕ್ಕಬಳ್ಳಾಪುರದಿಂದ ಧ್ವನಿ ಎತ್ತುವ ಮೂಲಕ ಬಡವರ ನೋವನ್ನು ಬಿಜೆಪಿ ಅವರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎನ್ನುವುದು ಪ್ರದೀಪ್ ಈಶ್ವರ ಮಾತು.