ಗುಡಿಬಂಡೆ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ದಲಿತ ಯುವಕ ಭೂಮಾನಂದ ಅವರ ಬರ್ಬರ ಹತ್ಯೆ ಪ್ರಕರಣವನ್ನು ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕ ಆಗ್ರಹಿಸಿದೆ.
ಈ ಸಂಬಂಧ ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.
ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಾಗರಾಜ್ ಮಾತನಾಡಿ ಭೂಮಾನಂದ ರವರು ಬಹುಜನ ಸಮಾಜದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಸಾಮಾಜಿಕ ನ್ಯಾಯ ಹಾಗೂ ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರು.
ಇದನ್ನೂ ಓದಿ: Gudibande News: ಕೆರೆ ತುಂಬಲಿ, ರೈತರ ಬದುಕು ಹಸಿರಾಗಲಿ: ಒಡ್ಡಮ್ಮದೇವಿಗೆ ವಿಶೇಷ ಕುಂಭಾಭಿಷೇಕ
ದಲಿತರಿಗೆ ದೇವಸ್ಥಾನ ಪ್ರವೇಶ ಸೇರಿದಂತೆ ವಿವಿಧ ಸಾಮಾಜಿಕ ವಿಚಾರಗಳಲ್ಲಿ ಧ್ವನಿ ಎತ್ತುತ್ತಿದ್ದರು. ಇಂತಹ ಸಂದರ್ಭದಲ್ಲಿ ಅವರನ್ನು ಮಾರಕ ಆಯುಧಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಖಂಡನೀಯವಾಗಿದ್ದು, ಪ್ರಕರಣದ ಹಿಂದಿರುವ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳ ಬೇಕು. ಅಲ್ಲದೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಅಗತ್ಯ ಭದ್ರತೆ ಒದಗಿಸಬೇಕು. ರಾಜ್ಯದಲ್ಲಿ ದಲಿತರು ಹಾಗೂ ಶೋಷಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುಡಿಬಂಡೆ ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.