ಚಿಕ್ಕಬಳ್ಳಾಪುರ: ಕನ್ನಡ ಬಾರದ ಅಯೋಗ್ಯನಿಗೆ ಶಿಕ್ಷಣ ಸಚಿವ ಸ್ಥಾನ ನೀಡಲಾಗಿದೆ. ಇನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರೇ ಉಸ್ತುವಾರಿ ಹೊತ್ತಿರುವ ಜಿಲ್ಲೆಯಲ್ಲಿ ಎಸ್‌ಎಸ್ ಎಲ್‌ಸಿ ಫಲಿತಾಂಶ ಪಾತಾಳಕ್ಕೆ ಇಳಿಯುತ್ತಿದೆ. ಇದಕ್ಕೆ ಕಾರಣರಾದವರ ತಲೆದಂಡವಾಗದೆ ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ರಾಮನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆ ವರ್ಷ ವರ್ಷಕ್ಕೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಬದಲು ಪ್ರತಿ ವರ್ಷದ ಫಲಿತಾಂಶ ಪಾತಾಳಕ್ಕೆ ಕುಸಿಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಕಳೆದ ವರ್ಷ ಫಲಿತಾಂಶದಲ್ಲಿ 18ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ೨೨ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ವರ್ಷಕ್ಕೆ ಕೊನೆಯ ಸ್ಥಾನ ಪಡೆಯಲು ಪೈಪೋಟಿ ನಡೆಸಿದಂತಿದೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: Chikkaballapur News: ಪರಿಶಿಷ್ಟಜಾತಿಯ ಜಾತಿ ಸಮೀಕ್ಷೆಯ ವೇಳೆ ಯಾವುದೇ ಗೊಂದಲವಿಲ್ಲದೆ ಮಾದಿಗ ಎಂದೇ ನಮೂದಿಸಿ
ಜಿಲ್ಲೆಯಲ್ಲಿ ಶಿಕ್ಷಕರ ವೈಫಲ್ಯ ಎದ್ದು ಕಾಣುತ್ತಿದೆ. ತಪ್ಪು ಮಾಡಿದ ಶಿಕ್ಷಕರಿಗೆ ಶಿಕ್ಷೆ ಇಲ್ಲ ಎಂಬ ವಾತಾವರಣ ಇರುವ ಕಾರಣ ಮಕ್ಕಳ ಭವಿಷ್ಯ ಹಾಳಾದರೂ, ಶೈಕ್ಷಣಿಕವಾಗಿ ಹಿನ್ನೆಡೆ ಸಾಧಿಸಿದರೂ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಹಾಗಾಗಿ ಮೊದಲು ಫಲಿತಾಂಶ ಕಡಿಮೆ ಬಂದಿರುವ ಶಾಲೆಗಳ ವಿಷಯವಾರು ಶಿಕ್ಷಕರಿಗೆ ಶಿಕ್ಷೆಯಾಗಬೇಕು, ತಪ್ಪು ಮಾಡಿದ ಶಿಕ್ಷಕರ ತಲೆದಂಡವಾಗದೆ ಜಿಲ್ಲೆಯ ಶೈಕ್ಷಣಿಕ ಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಗೌರಿಬಿದನೂರು ತಾಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನ ಪೆಡದಿದೆ. ಈ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ೧೨೬ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಶಾಲೆಯಲ್ಲಿ ಶಿಕ್ಷಕರ ವೇತನ ಸೇರಿದಂತೆ ಎಲ್ಲ ಖರ್ಚು ವೆಚ್ಚಗಳಿಗಾಗಿ ಸರ್ಕಾರ ವಾರ್ಷಿಕ ಎರಡು ಕೋಟಿ ರುಪಾಯಿ ಅನುದಾನ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಸುಮಾರು ೧ ಲಕ್ಷಕ್ಕೂ ಹೆಚ್ಚು ವೇತನ ಪಡೆಯೋ ಶಿಕ್ಷಕರಿಗೆ ನಿಯತ್ತು ಬೇಡವೇ, ಅವರು ತಿನ್ನೋ ಅನ್ನಕ್ಕೆ ನಿಯತ್ತು ಬೇಡವೇ, ಅವರ ಶಾಲೆಯಲ್ಲಿ ಶೇ.೨೬ ರಷ್ಟು ಮಾತ್ರ ಫಲಿತಾಂಶ ಬಂದಿದೆ ಎಂದರೆ ಇವರು ಯಾವ ರೀತಿಯ ಬೋಧನೆ ಮಾಡಿದ್ದಾರೆ ಎಂಬುದು ಅರ್ಥವಾಗಲಿದೆ ಎಂದು ಆರೋಪಿಸಿದರು.
ಈ ಶಾಲೆಯಲ್ಲಿ ಶೇ.೮೫ರಷ್ಟು ಮಂದಿ ಗ್ರಾಮೀಣ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದಾರೆ, ಕೆಆರ್‌ಎಸ್ ಪಕ್ಷದಿಂದ ಮಕ್ಕಳ ಹಿತದೃಷ್ಟಿಯಿಂದ ಈ ಶಾಲೆಯ ಮುಖ್ಯಸ್ಥರನ್ನು ಪ್ರಶ್ನೆ ಮಾಡಿದ್ದೇವೆ, ಆದರೆ ಅವರನ್ನು ಕರೆಯಿಸಿ ಎಚ್ಚರಿಕೆ ನೀಡುವುದಾಗಿ ಹೇಳಿದ್ದಾರೆ. ಕೇವಲ ಎಚ್ಚರಿಕೆ ನೀಡುವುದು ಮತ್ತು ಚರ್ಚೆ ಮಾಡುವುದರಿಂದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸಾಧ್ಯವಿಲ್ಲ. ತಪ್ಪು ಮಾಡಿದ ವಿಷಯ ವಾರು ಶಿಕ್ಷಕರ ತಲೆದಂಡವಾಗದೇ ಈ ಸ್ಥಿತಿ ಸುಧಾರಿಸಲ್ಲ. ಹಾಗಾಗಿ ಇವರ ವಿರುದ್ಧ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ಗುಣಮಟ್ಟ ಸುಧಾರಿಸುವ ಮಾತು ಆಡುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಾರಿ ಮಾತ್ರ ಈ ಮಾತುಗಳನ್ನು ಆಡುತ್ತಿಲ್ಲ. ಕಳೆದ ಬಾರಿ ೧೮ನೇ ಸ್ಥಾನ ಪಡೆದಾಗಲೂ ಅದೇ ಮಾತು ಗಳನ್ನು ಆಡಿದ್ದರು, ಇದೀಗ ೨೨ನೇ ಸ್ಥಾನ ಬಂದರೂ ಅದೇ ಮಾತುಗಳನ್ನು ಆಡುತ್ತಿದ್ದಾರೆ. ಮುಂದಿನ ವರ್ಷ ೩೩ನೇ ಸ್ಥಾನ ಬಂದರೂ ಅದೇ ಮಾತುಗಳನನು ಆಡುತ್ತಾರೆ. ಹಾಗಾಗಿ ಇಂತಹ ನಿರ್ಲಕ್ಷ್ಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಬಪೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳಪೆ ಫಲಿತಾಂಶ ಬಂದಿದೆ. ಇದರ ಹೊಣೆ ಹೊರುವವರು ಯಾರು, ಶಾಸಕರಾ, ಸಚಿವರಾ ಇಲ್ಲವೇ ಶಿಕ್ಷಣ ಇಲಾಖೆ ಅಧಿಕಾರಿಗಳಾ ಎಂಬುದು ಸ್ಪಷ್ಟವಾಗಬೇಕು. ಕನ್ನಡ ಬಾರದ ಅಯೋಗ್ಯನಿಗೆ ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನ ನೀಡಲಾಗಿದೆ, ಇದರಿಂದಲೇ ರಾಜ್ಯದ ಫಲಿತಾಂಶವೇ ಅಂಧಪತನದತ್ತ ಸಾಗುತ್ತಿದೆ. ಸಾರ್ವಜನಿಕ ತೆರಿಗೆ ಹಣದಲ್ಲಿ ಊಟ ಮಾಡುವ ಶಿಕ್ಷಕರು ತಾವು ಮಾಡುವ ಊಟಕ್ಕಾದರೂ ಕನಿಷ್ಟ ಕೆಲಸ ಮಾಡಲು ಮುಂದಾ ದರೆ ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕೆಆರ್‌ಎಸ್ ಪಕ್ಷದ ನರಸಿಂಹಗೌಡ, ಶ್ರೀನಿವಾಸ್, ತಿಪ್ಪಣ್ಣ, ರುದ್ರಾರಾದ್ಯ, ಸೋಮಶೇಖರ್, ಗಜೇಂದ್ರ ಮತ್ತಿತರರು ಇದ್ದರು.