ಚಿಕ್ಕಬಳ್ಳಾಪುರ: ಜೀತವಿಮುಕ್ತರಿಗೆ ವಸತಿ ನಿವೇಶನ ಒದಗಿಸುವುದು, ದರಖಾಸ್ತು ನಮೂನೆ 53 ಮತ್ತು 57ರ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಸಾಗುವಳಿ ಚೀಟಿ ವಿತರಿಸುವುದು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿವಿಧ ಸಮಸ್ಯೆಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸುವ ಕುರಿತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರ, ಸ್ಮಶಾನ ಮಂಜೂರು, ದಲಿತ ಕಾಲೋನಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದು, ಮಕ್ಕಳ ರಕ್ಷಣಾ ಕಾವಲು ಸಮಿತಿಯ ಕಾರ್ಯವೈಖರಿ ಕುರಿತು ಸಮಾಲೋಚನೆ ನಡೆಸಲಾಯಿತು.
ಇದನ್ನೂ ಓದಿ: Chalo Chinthamani: 1,500 ಎಕರೆ ಭೂಮಿ ಅರಣ್ಯಕ್ಕೆ ಸೇರಿಸುವ ಯತ್ನ ಆರೋಪ; ಡಿ.10ರಂದು ‘ಚಲೋ ಚಿಂತಾಮಣಿ’ ಬೃಹತ್ ಹೋರಾಟಕ್ಕೆ ಕರೆ
ಶಾಲಾ-ಕಾಲೇಜುಗಳು ಹಾಗೂ ವಸತಿ ನಿಲಯಗಳಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೊ ಕಾಯ್ದೆ ಕುರಿತು ಜಾಗೃತಿ ಮೂಡಿಸುವುದು, ಬ್ಯಾಂಕುಗಳಿಂದ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಸಾಲ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಚಿಕ್ಕಬಳ್ಳಾಪುರದ ಬಿ.ವಿ.ಆನಂದ್, ಗುಡಿಬಂಡೆಯ ಜೀವಿಕ ನಾರಾಯಣಸ್ವಾಮಿ, ಗೌರಿಬಿದನೂರಿನ ಮಂಜುಳಾ ಎನ್.ವಿ., ಚಿಂತಾಮಣಿ ಯ ವೇಣುಗೋಪಾಲ್, ಶಿಡ್ಲಘಟ್ಟದ ಜಗದೀಶ್, ವಕೀಲರಾದ ಎ.ಜಿ.ಸುಧಾಕರ್, ಬಾಲಗಂಗಾಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.