ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chalo Chinthamani: 1,500 ಎಕರೆ ಭೂಮಿ ಅರಣ್ಯಕ್ಕೆ ಸೇರಿಸುವ ಯತ್ನ ಆರೋಪ; ಡಿ.10ರಂದು ‘ಚಲೋ ಚಿಂತಾಮಣಿ’ ಬೃಹತ್ ಹೋರಾಟಕ್ಕೆ ಕರೆ

ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸರ್ವೆ ನಡೆಸಬೇಕು. ಅರಣ್ಯ ಇಲಾಖೆ ಈ ಹಿಂದೆ ಗಿಡಗಳನ್ನು ನೆಟ್ಟಿರುವ ಪ್ರದೇಶಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ತೊಂದರೆ ನೀಡಬಾರದು ಎಂದು ಆಗ್ರಹಿಸಿದರು.

ರೈತರ ಜಮೀನುಗಳಿಗೆ ಅರಣ್ಯ ಇಲಾಖೆ ಕಾಂಪೌಂಡ್: ಆಕ್ರೋಶ

-

Profile
Ashok Nayak Nov 25, 2026 8:57 PM

ಚಿಂತಾಮಣಿ: ಹಲವು ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಖಾತೆ, ಪಹಣಿ ಹೊಂದಿರುವ ಜಮೀನುಗಳಿಗೆ ಅರಣ್ಯ ಇಲಾಖೆ ಕಾಂಪೌಂಡ್ ನಿರ್ಮಿಸುತ್ತಿರುವುದನ್ನು ಖಂಡಿಸಿ ಡಿ.10ರಂದು ‘ಚಲೋ ಚಿಂತಾಮಣಿ’(Chalo Chinthamani) ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಜೆ.ವಿ.ರಘುನಾಥ್ ರೆಡ್ಡಿ ತಿಳಿಸಿದರು.

ತಾಲೂಕಿನ ಯಗವಕೋಟೆ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಯಾಟಲೈಟ್ ಸರ್ವೆ ನೆಪದಲ್ಲಿ ಮುನಗಾನಹಳ್ಳಿ ಮತ್ತು ಕೈವಾರ ಹೋಬಳಿ ಸೇರಿದಂತೆ ತಾಲೂಕಿನ 20ರಿಂದ 25 ಗ್ರಾಮಗಳ ಸುಮಾರು 1,500 ಎಕರೆ ರೈತರ ಜಮೀನನ್ನು ಅರಣ್ಯ ಭೂಮಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿ, ಖಾತೆ ಹಾಗೂ ಪಹಣಿ ಹೊಂದಿರುವ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: Chikkaballapur News: ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ

ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸರ್ವೆ ನಡೆಸಬೇಕು. ಅರಣ್ಯ ಇಲಾಖೆ ಈ ಹಿಂದೆ ಗಿಡಗಳನ್ನು ನೆಟ್ಟಿರುವ ಪ್ರದೇಶಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ತೊಂದರೆ ನೀಡಬಾರದು ಎಂದು ಆಗ್ರಹಿಸಿದರು.

ಈ ಹಿಂದೆ ಶ್ರೀನಿವಾಸಪುರ ತಾಲೂಕಿನಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿದ್ದು, ಇದೀಗ ಚಿಂತಾಮಣಿಯಲ್ಲೂ ರೈತರ ಭೂಮಿ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಹೋರಾಟ ನಿರತ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು. ಯಾವುದೇ ಶಾಂತಿಸಭೆ ನಡೆಸದೆ ಅಧಿಕಾರಿಗಳು ಏಕಾಏಕಿ ಜಮೀನು ವಶಕ್ಕೆ ಪಡೆಯಲು ಮುಂದಾದ ಸಂದರ್ಭ ದಲ್ಲಿ ಗಲಾಟೆ ನಡೆದಿದ್ದು, ರೈತರ ವಿರುದ್ಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.

ರೈತರ ಹಕ್ಕು ಮತ್ತು ಭೂಮಿಯ ರಕ್ಷಣೆಗಾಗಿ ಡಿ.10ರಂದು ನಡೆಯುವ ‘ಚಲೋ ಚಿಂತಾಮಣಿ’ ಹೋರಾಟದಲ್ಲಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ, ಶ್ರೀರಾಮರೆಡ್ಡಿ, ಯಲ್ಲಪ್ಪ, ಲಕ್ಷ್ಮಿ, ಗಂಗಾ ರತ್ನಮ್ಮ, ಪದ್ಮಾವತಮ್ಮ, ಈಶ್ವರಮ್ಮ, ನಾಗಮಣಿ, ಸುಪ್ರಿಯಾ, ರೂಪ, ನರಸಿಂಹಪ್ಪ, ಕದರೆಪ್ಪ, ವೆಂಕಟೇಶ್, ವೀರಪ್ಪ, ವೆಂಕಟರೋಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.