ಚಿಕ್ಕಬಳ್ಳಾಪುರ : ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯಲ್ಲಿ ಭೂಸ್ವಾಧೀನ ಆಗಿರುವ ರೈತರಿಗೆ ಪರಿಹಾರ ಧನ ವಿತರಣೆ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಆಗಬೇಕು. ಈ ಕಾರ್ಯವನ್ನು ಆದ್ಯತೆ ಯಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು(District Collector G.Prabhu) ತಿಳಿಸಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ(Yettinahole drinking water project)ಯ ಭೂಸ್ವಾಧೀನ ಪ್ರಕ್ರಿಯೆಯ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರ ಕೈಗೊಂಡಿರುವ ಎತ್ತಿನಹೊಳೆ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗಳು ಜಿಲ್ಲೆಯಲ್ಲಿ ಭರದಿಂದ ಸಾಗುತ್ತಿವೆ. ಗೌರಿ ಬಿದನೂರು ಗುರುತ್ವ ಫೀಡರ್ ಪೈಪ್ ಲೈನ್ ಕಾಮಗಾರಿಯ ಎತ್ತಿನಹೊಳೆ ಮುಖ್ಯ ಗುರುತ್ವ ಕಾಲುವೆಯ ಸರಪಳಿ 257.57 ಕಿ.ಮೀ ನಲ್ಲಿ ಕವಲೊಡೆದು ಸು. 81.6 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ ಎಂದರು.
ಇದನ್ನೂ ಓದಿ: Chikkaballlapur News: ಜಿಲ್ಲಾ ಕೇಂದ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಕನ್ನಡ ಸೇನೆ ಸಂಘಟನೆ
ಈ ಕಾಮಗಾರಿಗಳು ಗೌರಿಬಿದನೂರು ತಾಲ್ಲೂಕಿನ 86 ಕೆರೆಗಳನ್ನು ತುಂಬಿಸಲು ಸಿದ್ದವಿವೆ, ಮುಖ್ಯ ವಾಗಿ ಈ ಯೋಜನೆಯಡಿ ಗೌರಿಬಿದನೂರು ಫೀಡರ್ ನ 10 ಗ್ರಾಮಗಳ ವ್ಯಾಪ್ತಿಯಲ್ಲಿ ಪರಿಹಾರಕ್ಕೆ ಈಗಾಗಲೇ ಅವಾರ್ಡ್ ಆಗಿದ್ದು, ಹಣ ಪಾವತಿಸುವ ಹಂತದಲ್ಲಿದೆ. ಇನ್ನುಳಿದ 25 ಗ್ರಾಮಗಳ ವ್ಯಾಪ್ತಿ ಯಲ್ಲಿ ಅವಾರ್ಡ್ ನಿರ್ಧಾರದ ಪ್ರಕ್ರಿಯೆಯು ವೇಗ ಪಡೆಯಲು ಸಂಬಂಧಪಟ್ಟ ಯೋಜನಾ ಅಭಿಯಂತರರು ತುರ್ತು ಕ್ರಮ ಕೈಗೊಳ್ಳಬೇಕು. ಮುಂದುವರೆದು ಸದರಿ ಯೋಜನೆಯಡಿ ಶ್ರೀನಿವಾಸ ಪುರ ಗುರುತ್ವ ಪೈಪ್ ಲೈನ್ ಕಾಮಗಾರಿಯ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆಯ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು.
ಒಂದು ವರ್ಷದ ಒಳಗಡೆ ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ನೀರು ಲಭ್ಯವಾಗುವ ಸಾಧ್ಯತೆ ಇದೆ. ನೀರು ಲಭ್ಯವಾಗುವ ವೇಳೆಗೆ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಯಡಿ ಪೂರ್ವಸಿದ್ದತಾ ಕಾಮಗಾರಿಗಳು ಪೂರ್ಣಗೊಂಡಿರಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಹೆಚ್ಚಿನ ನಿಗಾವಹಿಸಿ ಕೆಲಸ ಮಾಡಬೇಕು. ಯಾವುದೇ ಹಂತದಲ್ಲೂ ಯೋಜನೆಯ ಅನುಷ್ಠಾನಕ್ಕೆ ವಿಳಂಬವಾಗದಂತೆ ಕ್ರಮ ವಹಿಸಬೇಕು. ಲಭ್ಯವಾಗಲಿರುವ ಕುಡಿಯುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಕಲ ರೀತಿಯಲ್ಲಿ ಸನ್ನದ್ದರಾಗಬೇಕು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರಾದ ಕಿಶನ್ ಕಲಾಲ್, ಯೋಗೀಶ್, ಮುರಳಿ, ಶ್ರೀಕಾಂತ್ ಹಾಗೂ ಮತ್ತಿತರರು ಹಾಜರಿದ್ದರು.