ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ಬ್ಯಾನರ್ ತೆರವು ವಿಚಾರಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಶುಕ್ರವಾರ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಡಳಿತ ಭವನದ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಮಹಿಳಾ ಅಧಿಕಾರಿಯ ವಿರುದ್ಧ ಅವಾಚ್ಯ ಶದ್ಧಗಳನ್ನು ಬಳಸಿ ನಿಂದಿಸಿರುವುದು ಖಂಡನೀಯ. ಇಂತಹ ಘಟನೆಗಳು ಸಾರ್ವಜನಿಕ ಆಡಳಿತ ವ್ಯವಸ್ಥೆಗೆ ಕಳಂಕ ತರಲಿದೆ. ರಾಜೀವ್ ಗೌಡ ಅವರನ್ನು ಕೂಡಲೇ ಬಂಧಿಸಿ, ಇಂತಹ ಘಟನೆಗಳು ಮರುಕಳಿಸದಂತೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ದೂರವಾಣಿ ಮೂಲಕ ಪೌರಾಯುಕ್ತೆ ಅಮೃತಾ ಗೌಡರನ್ನು ಸಂಪರ್ಕಿಸಿ ಧೈರ್ಯ ತುಂಬಿದ್ದು, ಸಂಘವು ಅಧಿಕಾರಿ ಪರವಾಗಿ ನಿಲ್ಲಲಿದೆ ಎಂದು ನುಡಿದರು.
ಸಂಘದ ಪದಾಧಿಕಾರಿ ಉಮಾ ಮಾತನಾಡಿ, ಪ್ರಸ್ತುತದ ದಿನಗಳಲ್ಲಿಯೂ ಮಹಿಳಾ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಅಡಚಣೆ ಹಾಗೂ ಅವಮಾನಕಾರಿ ಘಟನೆ ಗಳನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿ ಲಲಿತಮ್ಮ ಮಾತನಾಡಿ, ಘಟನೆಯು ಮಹಿಳಾ ಅಧಿಕಾರಿಗಳಲ್ಲಿ ಭಯ ಹಾಗೂ ಅಸುರಕ್ಷಿತೆಯ ಭಾವನೆ ಹುಟ್ಟಿಸುವಂತಿದ್ದು, ಇಂತಹ ಘಟನೆಗಳು ಮಹಿಳಾ ಅಧಿಕಾರಿಗಳ ಆತ್ಮಸ್ಥೆöÊರ್ಯವನ್ನು ಕುಗ್ಗಿಸಿದೆ. ಈ ನಿಟ್ಟಿನಲ್ಲಿ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಮಹಿಳಾ ಅಧಿಕಾರಿಗಳು ನಿರ್ಭಯವಾಗಿ ಕೆಲಸ ನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಪ್ರಭು, ಪ್ರಕರಣವನ್ನು ಜಿಲ್ಲಾಡಳಿತ ಗಂಭೀರ ವಾಗಿ ಪರಿಗಣಿಸಿದ್ದು, ಈ ಸಂಬಂಧ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿದೆ. ರಾಜೀವ್ ಗೌಡ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ನೌಕರರ ಸಂಘದಿಂದ ಸಲ್ಲಿಸಲಾದ ಮನವಿ ಸ್ವೀಕರಿ ಸಲಾಗಿದ್ದು, ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಸಂಘದ ರಾಜ್ಯ ಕಾರ್ಯದರ್ಶಿ ಸುನಿಲ್, ರಾಜ್ಯ ಪರಿಷತ್ ಸದಸ್ಯ ವಿ.ಅಮರ್, ಜಿಲ್ಲಾ ಖಜಾಂಚಿ ಅರುಣ್, ಕಾರ್ಯದರ್ಶಿ ಬಾಲರಾಜ್, ಶಿಡ್ಲಘಟ್ಟ ತಾಲೂಕು ಸುಬ್ಬಾರೆಡ್ಡಿ, ಚಿಂತಾಮಣಿ ಅಧ್ಯಕ್ಷ ಅಶೋಕ್ ಕುಮಾರ್, ಬಾಗೇಪಲ್ಲಿ ಹನುಮಂತ ರೆಡ್ಡಿ, ಗುಡಿಬಂಡೆ ಮುನಿಕೃಷ್ಣಪ್ಪ, ಗೌರಿಬಿದನೂರು ಮಂಜುನಾಥ್ ಇದ್ದರು.