ಚಿಕ್ಕಬಳ್ಳಾಪುರ: ಗೃಹ ಬಳಕೆಯ ಅನಿಲ ಸಿಲಿಂಡರ್ ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿದರೆ ಅಂತಹ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಅನಿಲ ವಿತರಕರ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಸರಾಸರಿ 10 ರಿಂದ 11 ಸಾವಿರ ಸಿಲೆಂಡರ್ ಗಳು ಪ್ರತಿ ದಿನ ದಾಸ್ತಾನು ಇರು ವಂತೆ ಇವರೆಗೆ ನಿರ್ವಹಣೆ ಮಾಡಲಾಗುತ್ತಿತ್ತು. ಪ್ರಸ್ತುತ 12 ಸಾವಿರಕ್ಕೂ ಹೆಚ್ಚು ಗೃಹ ಬಳಕೆ ಸಿಲಿಂಡರ್ ದಾಸ್ತಾನು ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮುಂಜಾಗ್ರತೆ ಯಾಗಿ ಅನಿಲ ಸಿಲಿಂಡರ್ ಗಳನ್ನು ತರಿಸಿಕೊಳ್ಳುವ ಪ್ರಕ್ರಿಯೆಯು ನಿರಂತರವಾಗಿ ಚಾಲ್ತಿಯಲ್ಲಿರುವಂತೆ ನಿಗಾ ಇಡಲಾಗಿದೆ.
ಗೃಹಬಳಕೆಯ ಅನಿಲ ಪೂರೈಕೆಯಲ್ಲಿ ಯಾವುದೇ ವೆತ್ಯಯ ಆಗದಂತೆ ಜಿಲ್ಲೆಯಲ್ಲಿರುವ 27 ಅನಿಲ ವಿತರಕರ ಪ್ರತಿನಿಧಿಗಳ ಸಭೆಯನ್ನು ಕರೆದು ಸೂಚನೆಗಳನ್ನು ನೀಡಲಾಗಿದೆ ಇಂಡಿಯನ್ ಆಯಿಲ್, ಎಚ್ ಪಿ ಪೆಟ್ರೋಲ್, ಭಾರತ್ ಪೆಟ್ರೋಲಿಯಂ ಸಂಸ್ಥೆಗಳ ಪ್ರತಿನಿಧಿ ಗಳ ಜೊತೆಯಲ್ಲೂ ಸಹ ಚರ್ಚಿಸಲಾಗಿದೆ.
ಜಿಲ್ಲೆಯಲ್ಲಿ ಅನಿಲ ಪೂರೈಕೆ ಹಾಗೂ ಸಮರ್ಪಕ ವಿತರಣೆಗೆ ಜಿಲ್ಲಾಡಳಿತ ಎಲ್ಲಾ ಉಪಕ್ರಮ ಗಳನ್ನು ತೆಗೆದುಕೊಂಡಿದ್ದು,ಸಾರ್ವಜನಿಕರು ಹಾಗೂ ಗೃಹ ಬಳಕೆ ಅನಿಲ ಗ್ರಾಹಕರು ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಹೋಟೆಲ್, ಬಾರ್, ರೆಸ್ಟೋರೆಂಟ್ ಗಳು ಸೇರಿದಂತೆ ಇತರ ವಾಣಿಜ್ಯ ಸಂಸ್ಥೆಗಳು ಅಕ್ರಮ ವಾಗಿ ಗೃಹಬಳಕೆಯ ಸಿಲಿಂಡರ್'ಗಳನ್ನು ಬಳಸಿದರೆ ಅಥವಾ ದಾಸ್ತಾನು ಮಾಡಿದರೆ ಏಳು ವರ್ಷ ಸಜೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಂತಹ ಉಲ್ಲಂಘನೆ ಕೃತ್ಯಗಳು ಜಿಲ್ಲೆಯ ಯಾವುದೇ ಭಾಗದಲ್ಲಿ ಕಂಡುಬಂದರೆ, ಯಾವುದೇ ವ್ಯಕ್ತಿ, ಸಂಸ್ಥೆ ಗೃಹ ಬಳಕೆ ಅನಿಲ ಸಿಲಿಂಡರ್ ಗಳನ್ನು ಒಂದೆಡೆ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಿದರೆ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ, ತಾಲೂಕು ಕಚೇರಿಗೆ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಚೇರಿಗಳಿಗೆ ಮಾಹಿತಿ ನೀಡಿದಲ್ಲಿ ಕೂಡಲೇ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಒಂದು ವೇಳೆ ಸಕ್ಷಮ ಪ್ರಾಧಿಕಾರಗಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ತಿಳಿಸುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ವೇಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಆಹಾರ ನಾಗರಿಕ ಸರಬ ರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನ ಮನಿ ಹಾಗೂ ಜಿಲ್ಲೆಯ 27 ಅನಿಲ ವಿತರಕ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.