ಚಿಕ್ಕಬಳ್ಳಾಪುರ : ಅವಕಾಶ ವಂಚಿತ ಭಾರತೀಯರಿಗೆ ಘನತೆಯ ಬದುಕನ್ನು ಕಲ್ಪಿಸುವ ಏಕೈಕ ಉದ್ದೇಶದಿಂದ ತಮ್ಮಿಡೀ ಬದುಕನ್ನು ಅದಕ್ಕಾಗಿ ಮೀಸಲಾಗಿಟ್ಟಿದ್ದ ಸಾಮಾಜಿಕ ನ್ಯಾಯದ ಹರಿಕಾರ ನ್ಯಾಯದ ಹರಿಕಾರ ಡಾ.ಬಾಬಾ ಸಾಹೇಬ ಅಂಬೇಡ್ಕರ್(Dr.Babasaheb Ambedkar) ಮಾತ್ರ ಎಂದು ಚಿಂತಕ, ಉಪನ್ಯಾಸಕ ಎಂ.ಮುನಿರಾಜು ಅರಿಕೆರೆ ತಿಳಿಸಿದರು.
ನಗರದ ಗೋಲ್ಡ್ನ್ ಗ್ಲೀಮ್ಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಗೆ ದೀಪಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಪ್ರತಿಮ ಜ್ಞಾನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮಿಡಿ ಬದುಕನ್ನು ದಮನಿತ ಸಮುದಾಯಗಳ ಸಬಲೀಕರಣಕ್ಕಾಗಿ ಬಳಸಿದರು. ಎಲ್ಲರನ್ನೂ ಒಳಗೊಂಡ ಸದೃಢ ಭಾರತ ನಿರ್ಮಾಣಕ್ಕಾಗಿ ಅಂತಃಕರಣದಿಂದ ಮಿಡಿದರು. ಅವರ ಜೀವನ ವ್ಯಕ್ತಿತ್ವ ಹೋರಾಟ ಮತ್ತು ಕೊಡುಗೆಗಳ ಅರಿವಿನ ಅಗತ್ಯತೆ ಮತ್ತು ಅನಿವಾರ್ಯತೆ ಇಂದು ಹೆಚ್ಚಿದೆ. ಸಂವಿಧಾನದ ಶಕ್ತಿ ಮತ್ತು ಸೌಂದರ್ಯ ಅದರ ಅರಿವಿನಲ್ಲಿಯೇ ಇದೆ ಎಂದರು.
ನಮ್ಮದು ಶ್ರೇಷ್ಠ ಸಂವಿಧಾನ ಎನ್ನುತ್ತೇವೆ. 26 ಜನವರಿ 1950 ಸಂವಿಧಾನವನ್ನು ಅಂಗೀಕರಿಸಿ ಕೊಂಡ ನಾವು ಈ 76 ವರ್ಷದಲ್ಲಿ 105 ಬಾರಿ ತಿದ್ದುಪಡಿ ಮಾಡಿಕೊಂಡಿದ್ದೇವೆ. ಅಮೆರಿಕದ ಸಂವಿಧಾನಕ್ಕೆ ಹೋಲಿಸಿದರೆ ಭಾರತದ ಸಂವಿಧಾನಕ್ಕೆ ಆದಷ್ಟು ತಿದ್ದುಪಡಿ ಬೇರೆ ಯಾವುದಕ್ಕೂ ಆಗಿಲ್ಲದಿರುವುದು ದುಧೈವ ಎಂದರು.
ಇದನ್ನೂ ಓದಿ:Muniraju M Arikere Column: ಆದಿಯೋಗಿ ನೆಲೆ, ಭೂಮಿಗೆ ಚಿನ್ನದ ಬೆಲೆ
ಸAವಿಧಾನವೆಂದರೆ ಕೇವಲ ಪುಸ್ತಕವಲ್ಲ ಭಾರತೀಯರ ಆತ್ಮ. ಭಾರತದ ದಮನಿತರ ಅಶಕ್ತರ, ಶೋಷಿತರ ಬದುಕು ಸಂವಿಧಾನದಲ್ಲಿ ಇದೆ ಎಂದರೆ ತಪ್ಪಾಗಲಾರದು.ಸಂವಿಧಾನ ಎಷ್ಟೇ ಶ್ರೇಷ್ಠ ವಾಗಿದ್ದರು ಅದನ್ನು ಅನುಷ್ಠಾನ ಮಾಡುವವರು ದುರ್ಬಲರಾಗಿದ್ದರೆ ದುಷ್ಟರಾಗಿದ್ದರೆ ಅವಸಾನ ಖಚಿತ ಎಂದು ಅಂಬೇಡ್ಕರ್ ಹೇಳಿದ್ದರು. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಈ ಮಾತು ನಿಜವಾಗುತ್ತಿದೆ ಎಂದರು.
ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಮಾತನಾಡುವವರು ಖಂಡಿತವಾಗಿ ಹಿಂದೂ ಕೊಡ್‌ಬಿಲ್ ಬಗ್ಗೆ ಮಾತನಾಡಬೇಕು. ಹಿಂದೂ ಕೋಡ್ ಬಿಲ್ ಭಾರತೀಯ ಮಹಿಳೆಯರ ಆತ್ಮ ಗೌರವದ ಕಾಯ್ದೆಯಾಗಿತ್ತು.ಇದಕ್ಕೆ ಸೋಲಾದಾಗ ನೊಂದ ಅಂಬೇಡ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಆಗ ಹಿಮದು ಕೋಡ್‌ಬಿಲ್‌ಗೆ ಸೋಲಾಗುವಂತೆ ನೋಡಿಕೊಂಡ ಮನುವಾದಿಗಳೇ ಇಂದು ಈ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದಾರೆ ಎಂದರು.
ಅಂಬೇಡ್ಕರರು ಕೇವಲ ಸಂವಿಧಾನವನ್ನು ರಚಿಸಲಿಲ್ಲ ಆ ಮೂಲಕ ಸಮ ಸಮಾಜದ ಆಶಯ ಗಳನ್ನುಳ್ಳ ಬಲಿಷ್ಠ ಭಾರತ ಕಟ್ಟುವ ಕನಸು ಕಂಡಿದ್ದರು. ಶೋಷಿತ ಯುವಜನತೆ ರಾಜಕೀಯ ಪ್ರವೇಶ ಮಾಡಿ ಆಳುವ ವರ್ಗವಾದಾಗ ಸಾಮಾಜಿಕ ಅಸಮಾನತೆಗೆ ಮದ್ದರೆಯಬಹುದು, ನ್ಯಾಯ ಪಡೆಯಬಹುದು ಎಂದು ಅಂಬೇಡ್ಕರ್ ಭಾವಿಸಿದ್ದರು ಎಂದರು.
ಸAವಿಧಾನದಲ್ಲಿರುವ ನ್ಯಾಯ ಸ್ವಾತಂತ್ರ‍್ಯ ಸಮಾನತೆ ಭ್ರಾತೃತ್ವ ಇವು ಕೇವಲ ಶಬ್ದಗಳಲ್ಲ. ಇವುಗಳ ಅರ್ಥವನ್ನ ಅರಿತು ನಮ್ಮ ಬದುಕಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಂವಿಧಾನಕ್ಕೆ ಅರ್ಥ ಬರಲಿದೆ ಎಂದರು.
ನಮಗೆ ಘನತೆಯ ಬದುಕನ್ನು ಕೊಡಲು ತಮ್ಮಿಡಿ ಕುಟುಂಬವನ್ನು ಬಲಿಕೊಟ್ಟ ಏಕೈಕ ಸ್ವಾತಂತ್ರ‍್ಯ ಸೇನಾನಿ ಬಾಬಾ ಸಾಹೇಬರು. ಅವರ ಋಣದಲ್ಲಿ ಇಡೀ ದೇಶವಿದೆ. ಹೀಗಾಗಿ ಅವರ ಹುಟ್ಟುಹಬ್ಬ ಭಾರತೀಯರ ಮನೆ ಮನೆಯಲ್ಲಿ ಆಚರಿಸಲ್ಪಡಬೇಕು. ಆಗಲೇ ಸಮ ಸಮಾಜದ ಆಶಯದ ಹಣತೆ ಲೋಕ ಬೆಳಗಲಿದೆ ಎಂದು ಕರೆ ನೀಡಿದರು
ಖ್ಯಾತ ನ್ಯಾಯವಾದಿ ಶ್ರೀರಾಮಪುರ ನರಸಿಂಹಮೂರ್ತಿ ಮಾತನಾಡಿ, ದೇಶ ಮತ್ತು ದೇಶವಾಸಿಗಳ ಭವಿಷ್ಯಕ್ಕಾಗಿ ಸಂವಿಧಾನದ ಮೂಲಕ ಹೊಸ ಭಾಷ್ಯ ಬರೆದ ಧೀಮಂತ ನಾಯಕ ಅಂಬೇಡ್ಕರ ರಾಗಿದ್ದಾರೆ. ಅವರ ಆದರ್ಶದ ಬದುಕು ನಮ್ಮದಾಗಲಿ. ದೇಶಕ್ಕೆ ಹೊರೆಯಾಗದ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನಕ್ಕೆ ಬದ್ಧವಾಗಿ ಬಳಸೋಣ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಶೋಷಣೆ ಮುಕ್ತ ಸಮಾಜ ಕಟ್ಟೋಣ, ಆ ಮೂಲಕ ಭ್ರಾತೃತ್ವವನ್ನು ಜಗತ್ತಿಗೆ ಸಾರೋಣ. ಬಾಬಾ ಸಾಹೇಬರ ಜಯಂತಿ ಆಚರಿಸುವುದೆಂದರೆ ಭಾರತದ ಅಂಚಿನ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ದಿನವಾಗಲಿ ಎಂದು ಆಶಿಸಿದರು.
ಪ್ರಾಂಶುಪಾಲ ಸಿಎಂ ಮುನಿಕೃಷ್ಣಪ್ಪ ಮಾತನಾಡಿ, ಭಾರತ ಇಂದು ಏನಾದರೂ ಸಾಧಿಸಿದೆ ಎಂದರೆ ಆ ಸಾಧನೆಯಲ್ಲಿ ಅಂಬೇಡ್ಕರರ ಕೊಡುಗೆ ಇದೆ. ಸರ್ವರಿಗೆ ಸಮಬಾಳು ಸಮಪಾಲು ಕೊಡಲು ನಿರ್ವಂಚನೆಯಿAದ ಶ್ರಮಿಸಿದ, ಸಾಮಾಜಿಕ ನ್ಯಾಯದ ಅಗತ್ಯವನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟ ಮಹಾಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.
ಅAಬೇಡ್ಕರ್ ಎಂಬ ಜ್ಞಾನ ಸೂರ್ಯ ಭಾರತದಲ್ಲಿ ಉದಯವಾಗಲಿಲ್ಲವೆಂದಿದ್ದರೆ ಭಾರತದ ಮಹಿಳೆಯರಿಗೆ, ಕಾರ್ಮಿಕರಿಗೆ, ಶೋಷಿತರಿಗೆ, ಅಶಕ್ತರಿಗೆ ಒಟ್ಟಾರೆ ಬಹುಜನ ಭಾರತಕ್ಕೆ ಮುಕ್ತಿ ಎಂಬುದು ದೊರೆಯುತ್ತಿರಲಿಲ್ಲ ಎಂದರು.
ಶಿಕ್ಷಣ ಸಂಘಟನೆ ಹೋರಾಟ ಎಂಬುದು ಕೇವಲ ಶಬ್ದಗಳಲ್ಲ ಅವು ಅಧ್ಯಯನ ಆಂದೋಲನ ಅಧಿಕಾರ ಪಡೆಯುವ ಬಲಿಷ್ಠ ಅಸ್ತ್ರಗಳು. ಈ ದಿಕ್ಕಿನಲ್ಲಿ ಯುವಜನತೆ ಯೋಚಿಸಲಿಲ್ಲ ಎಂದರೆ ಸ್ವಾತಂತ್ರ‍್ಯಕ್ಕೆ ಅರ್ಥವಿರುವುದಿಲ್ಲ. ಅಂಬೇಡ್ಕರ್ ಜಯಂತಿ ಎಂದರೆ ಕೇವಲ ಆಡಂಬರದ ಕಾರ್ಯಕ್ರಮವಾಗಬಾರದು. ಬದಲಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಅರಿವಿನ ಜ್ಯೋತಿಯಾಗಬೇಕು. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರು.
ಗೋಲ್ಡನ್ ಗ್ಲಿಮ್ಸ್ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವುಳ್ಳ ಬೃಹತ್ ಕೇಕನ್ನು ಕತ್ತರಿಸಿ ಸಿಹಿ ಹಂಚುವ ಮೂಲಕ ಜ್ಞಾನ ಸೂರ್ಯನ ಜಯಂತಿಗೆ ಹೊಸ ಭಾಷ್ಯ ಬರೆದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮೂಡಿ ಬಂದ ಭಾಷಣ ಸಭಿಕರನ್ನು ತನ್ಮಯಗೊಳಿಸಿತು.
ಈ ವೇಳೆ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವರ್ಗ, ವಿದ್ಯಾರ್ಥಿ ಸಮೂಹ ಹಾಜರಿದ್ದು ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.