ಗೌರಿಬಿದನೂರು: ಶಿಕ್ಷಣ ತಜ್ಞ ಡಾ.ಎಚ್ ನರಸಿಂಹಯ್ಯ(Educationist Dr. H. Narasimhaiah) ನವರು ಕೇವಲ ಒಬ್ಬ ವ್ಯಕ್ತಿಯಾಗಿರದೆ ಒಂದು ಸಂಸ್ಥೆಯ ರೀತಿ ಕೆಲಸ ಮಾಡಿದ ಮಹಾನ್ ಚೇತನ ಎಂದು ಬಿಹೆಚ್‌ಇಎಲ್ ಸಂಸ್ಥೆಯ ನಿವೃತ್ತ ಲೆಕ್ಕಪರಿಶೋಧಕರು ಹಾಗೂ ಲೇಖಕರಾದ ಎಸ್.ಎಲ್.ರಾಮಕೃಷ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸೂರು ಗ್ರಾಮದಲ್ಲಿನ ಡಾ.ಎಚ್.ನರಸಿಂಹಯ್ಯ ನ್ಯಾಷನಲ್ ಹೈಸ್ಕೂಲ್ನಲ್ಲಿ ಹಮ್ಮಿಕೊಂಡಿದ್ದ 42ನೇ ವರ್ಷದ ವಿಜ್ಞಾನ ಭಾಷಣ ಮತ್ತು ದೇಶಭಕ್ತಿ ಗೀತೆಗಳ ಗಾಯನ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ತಾಲೂಕಿನ ವಿವಿಧ ೧೦ ಶಾಲೆಗಳ ಶಿಕ್ಷಕರಿಗೆ ತಾವೇ ರಚಿಸಿದ್ದ "ಡಿಯರ್ ಟೀಚರ್" ಎಂಬ ಪುಸ್ತಕವನ್ನು ಉಚಿತವಾಗಿ ವಿತರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜಿ ಗೋಪಿ ಮಾತ ನಾಡಿ, ಎ.ಎಸ್ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಲೆ ,ವಿಜ್ಞಾನ, ದೇಶಭಕ್ತಿ ಮುಂತಾದವು ಗಳ ಬಗ್ಗೆ ಅರಿವು ಮೂಡಿಸುವ ಸ್ಪರ್ಧೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘ ನೀಯ ಎಂದರು.
ಇದನ್ನೂ ಓದಿ: Gauribidanur News: ಶ್ರದ್ಧಾಭಕ್ತಿಯಿಂದ ನಡೆದ ತ್ರಯಂಬಕೇಶ್ವರ ದೇವಾಲಯ ಜೀರ್ಣೋದ್ಧಾರ
ಅಧ್ಯಕ್ಷತೆ ವಹಿಸಿದ್ದ ಹೆಚ್.ಎನ್ ಪ್ರೈಮರಿ ಶಾಲೆಯ ಅಧ್ಯಕ್ಷ ಎಸ್.ವಿ ನಾಗಭೂಷಣಗುಪ್ತ 42 ವರ್ಷ ಗಳಿಂದ ನಿರಂತರವಾಗಿ ನಡೆಸಲಾಗುತ್ತಿರುವ ವಿಜ್ಞಾನ ಸ್ಪರ್ಧೆಯು ತಾಲೂಕಿನ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಸ್ಪರ್ಧೆಯಾಗಿದೆ ಎಂದರು.
ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ತನ್ನನ್ನು ಆದಿತ್ಯ ಇಂಜಿನಿಯರ್ ಸಂಸ್ಥೆಯ ಸಿಇಒ ಆಗುವ ಎತ್ತರಕ್ಕೆ ಏರಿಸುವಲ್ಲಿ ಎಚ್.ಎನ್ ಶಾಲೆಯಲ್ಲಿ ಪಡೆದ ಶಿಕ್ಷಣವೇ ಕಾರಣ ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ಹೆಚ್.ಮಧು ತಿಳಿಸಿದರು.
ಶಾಲೆಯ ನಿವೃತ್ತ ಶಿಕ್ಷಕ ಎಚ್ ಆರ್ ವೆಂಕಟರಾವ್ ಮಾತನಾಡಿ ಸಂವಿಧಾನದ ಮೂಲಭೂತ ಕರ್ತವ್ಯವಾದ ವೈಚಾರಿಕತೆ ಮತ್ತು ವೈಜ್ಞಾನಿಕತೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಈ ಸ್ಪರ್ಧೆಗಳನ್ನು ಎಚ್.ಎನ್ ಆರಂಭಿಸಿದರು ಎಂದರು.
ಭಾಷಣ, ಪ್ರಬಂಧ ,ದೇಶಭಕ್ತಿ ಗೀತೆ ಗಾಯನ ಮತ್ತು ನೃತ್ಯ ಸ್ಪರ್ಧೆಗಳ ಪರ್ಯಾಯ ಪಾರಿತೋಷಕ ಗಳನ್ನು ಕ್ರಮವಾಗಿ ಹೆಚ್ ಎನ್ ಆಂಗ್ಲ ಮಾಧ್ಯಮ ಶಾಲೆ ,ಸರ್ಕಾರಿ ಪ್ರೌಢಶಾಲೆ ಕಾದಲವೇಣಿ ಮತ್ತು ಗೆದ್ದರೆ, ಗೌರಿಬಿದನೂರಿನ ಎಇಎಸ್ ನ್ಯಾಷನಲ್ ಹೈಸ್ಕೂಲ್ ತಂಡಗಳು ಪಡೆದುಕೊಂಡವು.
ಈ ಸಾಲಿನ ಸಮಗ್ರ ಪರ್ಯಾಯ ಪಾರಿತೋಷಕವನ್ನು ಅತಿಥೇಯ ಶಾಲೆಯಾದ ಡಾ. ಎಚ್ ಎನ್ ಕನ್ನಡ ಮಾಧ್ಯಮ ಶಾಲೆಯು ಪಡೆದುಕೊಂಡಿತು. ಶಾಲೆಯ ಮುಖ್ಯ ಶಿಕ್ಷಕರಾದ ಕೆ ನಾಗರಾಜ್ ಪ್ರಾಸ್ತಾವಿಕ ನುಡಿ ನುಡಿದರು. ಅಧ್ಯಾಪಕ ಕಾರ್ಯದರ್ಶಿ ಎಚ್ಪಿ ಸಿದ್ದೇಶ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರತ್ನಮ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜ್ಞಾನ ಸಂಘದ ಕಾರ್ಯದರ್ಶಿ ಧನಂಜಯ ವಂದಿಸಿದರು. ಶಾಲಾ ಶಿಕ್ಷಕರಾದ ಕೆ ನರಸಿಂಹಮೂರ್ತಿ, ಶ್ರೀನಿವಾಸ ರೆಡ್ಡಿ, ಪವಿತ್ರ, ನಾಗಮಣಿ, ನಂದಿನಿ, ಗೋಪಿ ಉಪಸ್ಥಿತರಿದ್ದರು.
ಎಚ್ ಎನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪ ,ಪ್ರೈಮರಿ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಲತಾ ಹಾಜರಿದ್ದರು.