ಗೌರಿಬಿದನೂರು: ಭೂಮಿ ಜೀವ ಸಂಕುಲ ಹೊಂದಿರುವ ಏಕೈಕ ಗ್ರಹ. ಭೂಮಿಯ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಗೀತಾ ಕುಂಬಾರ್ ಕೆ.ಬಿ. ಹೇಳಿದರು.
ನಗರದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಭೂಮಿ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಜ್ಞಾನ ಬೆಳೆದಂತೆಲ್ಲ ದುರಾಸೆ ಹೆಚ್ಚಿದೆ. ಮಾನವನ ಅತಿಯಾಸೆಯಿಂದ ವಾತಾವರಣ ಕಲುಷಿತವಾಗುತ್ತಿದೆ. ಏರುತ್ತಿರುವ ಜಾಗತಿಕ ತಾಪಮಾನ, ಪರಿಸರ ನಾಶದಿಂದ ಭೂಮಿ ನಿರಂತರ ವಾಗಿ ಹದೆಗೆಡುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ವಿಶ್ವ ಭೂ ದಿನ ಆಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: Gauribidanur News: ರಕ್ತದಾನ ಜೀವದಾನಕ್ಕೆ ಸಮಾನ: ಬಿ.ಆರ್.ಶ್ರೀನಿವಾಸ್ ಮೂರ್ತಿ
1970ರಲ್ಲಿ ಮೊದಲ ಪ್ರಾರಂಭವಾದ ವಿಶ್ವ ಭೂದಿನ ಆಚರಣೆ ಇಂದು ವಿಶ್ವದೆಲ್ಲೆಡೆ ಆಚರಿಸ ಲಾಗುತ್ತಿದೆ. ನಮ್ಮ ದೇಶದಲ್ಲಿ ಭೂಮಿಯ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದು, ಮಾತೃ ಸ್ಥಾನ ನೀಡಿದ್ದೇವೆ. ನಮ್ಮ ಸುತ್ತಮುತ್ತಲಿನ ಮಣ್ಣು, ನೀರು ಮತ್ತು ಗಾಳಿ ಸಂರಕ್ಷಣೆ ಮಾಡಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮಲ್ಲರ ಕರ್ತವ್ಯ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಗಣೇಶ್ ಎನ್ ಮಾತನಾಡಿ. ಪರಿಸರ ಹಾನಿಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಭೂಮಿ ದಿನವನ್ನು ಕೇವಲ ಸಾಂಕೇತಿಕ ಆಚರಣೆಯಾಗಿ ನಿಲ್ಲಿಸ ಬಾರದು. ಪ್ರಕೃತಿಯ ಉಳಿವಿಗೆ ಪ್ರತಿ ವ್ಯಕ್ತಿಯೂ ತಮ್ಮ ನಿತ್ಯ ಜೀವನದಲ್ಲಿ ಕಾಣಿಕೆ ನೀಡಬೇಕು. ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಬದಲಾಗಬೇಕು, ಪ್ಲಾಸ್ಟಿಕ್ ಬಳಕೆಯು ಪರಿಸರ ಹಾಗೂ ಮಾನವ ಆರೋಗ್ಯಕ್ಕೆ ಅಪಾಯಕಾರಿ. ಆಹಾರದ ಮೂಲಕ ದೇಹಕ್ಕೆ ಪ್ರವೇಶಿಸುತ್ತಿದೆ. ಜನರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಕೀಲ ಸಂಘದ ಅಧ್ಯಕ್ಷ ಟಿಪಿ ದಿನೇಶ್ ಕುಮಾರ್ ಮಾತನಾಡಿ, ಇಂದಿನ ಬಹುತೇಕ ಭೂಮಿ ಸಂಬಂಧಿತ ಸಮಸ್ಯೆಗಳಿಗೆ ಮಾನವನೇ ಕಾರಣ. ಪುರಾತನ ಕಾಲದಲ್ಲಿ ಸಾವಯವ ಗೊಬ್ಬರದ ಬಳಕೆಯಿಂದ ಭೂಮಿ ಫಲವತ್ತಾಗುತ್ತಿತ್ತು. ಆದರೆ ಈಗ ರಾಸಾಯನಿಕ ಗೊಬ್ಬರಗಳಿಂದ ಭೂಮಿಯ ಗುಣಮಟ್ಟ ಹದಗೆಡುತ್ತಿದೆ. ಸಾವಯವ ಕೃಷಿ ಮತ್ತು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಂಗ ರೆಡ್ಡಿ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ’ ‘ಮಾನವ ಅತಿಯಾಸೆಯಿಂದ ಪರಿಸರದ ಅಸಮತೋಲನಕ್ಕೆ ಕಾರಣನಾಗಿದ್ದಾನೆ, ಜಲಮೂಲ, ಗಾಳಿ ಕಲುಷಿತವಾಗಿದೆ. ಪ್ರಾಣಿ, ಪ್ರಕ್ಷಿಗಳ ಸಂಕುಲ ನಾಶವಾಗು ತ್ತಿದೆ. ಪರಿಸರ ದಿನೇದಿನೇ ಹದಗೆಡುತ್ತಿದೆ’ ಎಂದರು.
ಇದೇ ರೀತಿ, ಮುಂದುವರೆದಲ್ಲಿ ಜೀವ ಸಂಕುಲ ವಾಸಿಸುವುದು ಕಷ್ಟಕರವಾಗಲಿದೆ. ಈ ಕುರಿತು ಈಗಿನಿಂದಲೇ ಸರಿಪಡಿಸುವ ಕುರಿತು ಕಾರ್ಯ ಪ್ರವೃತ್ತರಾಗಬೇಕು’ ಎಂದು ಸಲಹೆ ಮಾಡಿದರು.
ಸರ್ಕಾರಿ ಅಭಿಯೋಜಕ ಫಯಾಜ್ ಪಟೇಲ್, ವಕೀಲರಾದ ಬಿ.ಲಿಂಗಪ್ಪ, ನರಸಿಂಹಮೂರ್ತಿ, ಮುಖ್ಯ ಶಿಕ್ಷಕರಾದ ಶ್ರೀನಿವಾಸ್, ದಾಳಪ್ಪ, ಪರಿಸರ ಪ್ರೇಮಿ ಎ.ಎಸ್.ಜಗನ್ನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.