ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯಡಿ ಗುರುತಿಸಲಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವುದು, ರೈತರ ಆದಾಯ ವೃದ್ಧಿಸುವುದು ಹಾಗೂ ಕೃಷಿ ಕ್ಷೇತ್ರದ ಮೂಲಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಯೋಜನೆಯ ಸೌಲಭ್ಯಗಳನ್ನು ಅರ್ಹ ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ಕೇಂದ್ರ ನೋಡಲ್ ಅಧಿಕಾರಿ ಅಲೆಕ್ಸ್ ಪಾಲ್ ಮೆನನ್, ಐಎಎಸ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿರುವ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೃಷಿ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ನೀರಾವರಿ ಸೌಲಭ್ಯ, ನೀರಿನ ಸಂಗ್ರಹಣೆ, ಬೆಳೆ ವೈವಿಧ್ಯೀಕರಣ ಹಾಗೂ ರೈತರಿಗೆ ಕೃಷಿ ಸಾಲದ ಲಭ್ಯತೆಯನ್ನು ಸುಧಾರಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಇದನ್ನೂ ಓದಿ: Chinthamani News: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ: ಯು.ನಿಸಾರ್ ಅಹಮದ್
ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ಆಧುನಿಕ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸುವತ್ತ ಗಮನಹರಿಸಬೇಕು. ಸರ್ಕಾರದ ವಿವಿಧ ಯೋಜನೆ ಗಳ ಪ್ರಯೋಜನವನ್ನು ಸಮರ್ಪಕವಾಗಿ ಪಡೆದುಕೊಂಡು ಕೃಷಿಯನ್ನು ಹೆಚ್ಚು ಲಾಭದಾಯಕ ವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಪಟ್ರೇನಹಳ್ಳಿ ಗ್ರಾಮದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದ ಜೈವಿಕ ಒಳಸುರಿಕೆ ಸಂಪನ್ಮೂಲ ಕೇಂದ್ರ ಹಾಗೂ ಜಾತವಾರ ಹೊಸಹಳ್ಳಿ ಗ್ರಾಮದ ಸರ್ವೆ ನಂ.74/1ರ ಪಾಲಿಹೌಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಾಲಿಹೌಸ್‌ನಲ್ಲಿ ಬೆಳೆಯುತ್ತಿರುವ ಬೆಳೆಗಳ ಸ್ಥಿತಿ, ಉತ್ಪಾದನೆ ಹಾಗೂ ಇಳುವರಿ ಕುರಿತು ರೈತರಿಂದ ಮಾಹಿತಿ ಪಡೆದ ಅವರು, ಆಧುನಿಕ ಕೃಷಿ ತಂತ್ರಜ್ಞಾನಗಳ ಬಳಕೆಯಿಂದ ಉತ್ಪಾದಕತೆ ಹೆಚ್ಚಿಸುವ ಸಾಧ್ಯತೆಗಳ ಕುರಿತು ಚರ್ಚಿಸಿದರು.
ಯೋಜನೆಯಡಿ ಕೈಗೊಳ್ಳಲಾಗುವ ಪ್ರತಿಯೊಂದು ಕಾರ್ಯಕ್ರಮವೂ ರೈತರಿಗೆ ನೇರವಾಗಿ ಪ್ರಯೋ ಜನವಾಗುವಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.