Chinthamani News: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ: ಯು.ನಿಸಾರ್ ಅಹಮದ್
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ನೋಡಿ ಕೊಳ್ಳುವುದರ ಜೊತೆಗೆ, ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ಸೂಕ್ತ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಅಧಿಕಾರಿಗಳು ಹಾಗೂ ಪ್ರಾಂಶುಪಾಲರಿಗೆ ಸೂಚಿಸಿದರು
-
ಚಿಂತಾಮಣಿ: ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದರ ಜೊತೆಗೆ, ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ಸೂಕ್ತ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಅಧಿಕಾರಿಗಳು ಹಾಗೂ ಪ್ರಾಂಶುಪಾಲರಿಗೆ ಸೂಚಿಸಿದರು.
ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿಯ ಮಸ್ತೇನಹಳ್ಳಿಯಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿದ್ಯಾರ್ಥಿ ಗಳೊಂದಿಗೆ ಸುದೀರ್ಘವಾಗಿ ಸಂವಾದ ನಡೆಸಿ ಶಿಕ್ಷಣ, ವಸತಿ, ಆಹಾರ ಸೇರಿದಂತೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಇದನ್ನೂ ಓದಿ: Chikkaballapur News: ಶಿಕ್ಷಕರ ಸಮಸ್ಯೆಗಳಿಗೆ ಸಂಘಟಿತವಾಗಿ ಧ್ವನಿಯಾಗುತ್ತೇವೆ: ಕೆ.ಜಿ.ಶ್ರೀನಿವಾಸ್
ನಂತರ ವಸತಿ ನಿಲಯದ ಅಡುಗೆ ಕೋಣೆ, ವಿದ್ಯಾರ್ಥಿಗಳ ವಾಸದ ಕೊಠಡಿ ಹಾಗೂ ಶೌಚಾಲಯ ಗಳನ್ನು ಪರಿಶೀಲಿಸಿದ ಅವರು, ಸ್ವಚ್ಛತೆ ಹಾಗೂ ನೈರ್ಮಲ್ಯ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಭೋಜನಾಲಯದಲ್ಲಿ ಊಟ ಸೇವಿಸಿದ ಅವರು, ಆಹಾರದ ಗುಣಮಟ್ಟ ಹಾಗೂ ಅಡುಗೆ ಸಿಬ್ಬಂದಿಯ ಸ್ವಚ್ಛತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ವಸತಿ ಶಾಲೆ ಯಲ್ಲಿ ರಾಷ್ಟ್ರೀಯ ಕೆಡೆಟ್ ಪಡೆ ಘಟಕವನ್ನು ಶೀಘ್ರ ಆರಂಭಿಸಲು ಸಲಹೆ ನೀಡಿದರು. ಶಾಲಾ ಆವರಣದಲ್ಲಿ ಗಿಡ ನೆಟ್ಟು ನೀರುಣಿಸಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಶಾಲೆಯ ಪ್ರಾಂಶುಪಾಲೆ ಅರುಣಾ ಪಲ್ಲವಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಬಿಂದುಮಣಿ ಅವರೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಕುರಿತು ಚರ್ಚಿಸಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ನಿರ್ದೇಶನ ನೀಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮೇಜರ್ ಜನರಲ್ ಅಹಮದ್, ಉಪನಿರ್ದೇಶಕ ಮಾಷಾಕ್ ಸಾಬ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.