ಚಿಂತಾಮಣಿ ನಗರದ ಸ್ವಚ್ಛತೆ ಕಾಪಾಡಲು ಸೂಚನೆ
ಸಿಎಸ್‌ಆರ್ ನಿಧಿಯಿಂದ ಗ್ರಾಮೀಣ ಯುವಜನರಿಗೆ ಕೌಶಲ ತರಬೇತಿಗೆ ಸಲಹೆ
ಚಿಂತಾಮಣಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪೂಜಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪಿಓಪಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಅವಕಾಶ ನೀಡಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ(Eshwar B Khandre) ಅಧಿಕಾರಿಗಳಿಗೆ ಸೂಚಿಸಿದರು.
ಚಿಂತಾಮಣಿ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶೇ.90ರಿಂದ 95ರಷ್ಟು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಆರಾಧನೆ ನಡೆಯುತ್ತಿದೆ. ಇದೇ ರೀತಿಯ ಪರಿಸರ ಕಾಳಜಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಬೆಳೆಸಬೇಕು ಎಂದರು.
ಇದನ್ನೂ ಓದಿ: Chinthamani News: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ: ಯು.ನಿಸಾರ್ ಅಹಮದ್
ನೀರಿನಲ್ಲಿ ಕರಗದ ಪಿಓಪಿ ಮೂರ್ತಿಗಳಿಗೆ ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಜಲಚರಗಳ ಸಾವಿಗೆ ಕಾರಣವಾಗುವುದಲ್ಲದೆ, ಜಲಮೂಲಗಳು ಕಲುಷಿತ ಗೊಳ್ಳುತ್ತವೆ. ಇದರಿಂದ ಜನರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬಣ್ಣರಹಿತ ಮಣ್ಣಿನ ಗೌರಿ-ಗಣೇಶ ಮೂರ್ತಿಗಳ ಪೂಜೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ನಗರ ಸ್ವಚ್ಛತೆಗೆ ಆದ್ಯತೆ: ಚಿಂತಾಮಣಿ ನಗರದ ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಣ್ಣಿನಲ್ಲಿ ಕರಗದ ಹಾಗೂ ನೀರಿನಲ್ಲಿ ವಿಲೀನವಾಗದ ಏಕಬಳಕೆ ಪ್ಲಾಸ್ಟಿಕ್‌ನ ತಯಾರಿಕೆ, ಮಾರಾಟ ಮತ್ತು ದಾಸ್ತಾನಿಗೆ ಕಡಿವಾಣ ಹಾಕಬೇಕು. ಹಸಿ ಹಾಗೂ ಒಣ ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ವೈಜ್ಞಾನಿಕ ವಾಗಿ ನಿರ್ವಹಿಸುವ ವ್ಯವಸ್ಥೆ ಬಲಪಡಿಸಬೇಕು ಎಂದು ಸೂಚಿಸಿದರು.
ಸಿಎಸ್‌ಆರ್ ನಿಧಿಯಿಂದ ಕೌಶಲ ತರಬೇತಿ
ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಂದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಅನುದಾನ ಪಡೆದು ಗ್ರಾಮೀಣ ಯುವಜನರಿಗೆ ಕೌಶಲ ತರಬೇತಿ ನೀಡಬೇಕು. ಈ ಮೂಲಕ ಗ್ರಾಮೀಣ ಯುವಜನರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ಅರಿವು ಕೇಂದ್ರಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಿ ಆಧುನಿಕ ತಂತ್ರಜ್ಞಾನದ ಮೂಲಕ ಗ್ರಾಮೀಣ ಮಕ್ಕಳ ಕಲಿಕೆ ಹಾಗೂ ಅಧ್ಯಯನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ಅರಿವು ಕೇಂದ್ರಗಳಲ್ಲಿ ಆಂಗ್ಲ ಭಾಷಾ ತರಬೇತಿ
ಅರಿವು ಕೇಂದ್ರಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾತನಾಡುವ ಆಂಗ್ಲ ಭಾಷೆಯ ತರಬೇತಿ ನೀಡಿದರೆ ಅವರ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಗದಗ್‌ನ ಮಹಾತ್ಮ ಗಾಂಧಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೆರವು ಪಡೆದು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಈಗಿರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.