ಗೌರಿಬಿದನೂರು : ತಾಲ್ಲೂಕಿನ ಹೊಸೂರು ಹೋಬಳಿಯ ಕಾಚಮಾಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಹಾಗೂ ಸಾಮಾಜಿಕ ನ್ಯಾಯ ಆಯೋಗದ ವತಿಯಿಂದ ಶಾಲೆಯ ಎಲ್ಲ ಮಕ್ಕಳಿಗೆ ಕಲಿಕಾ ಕಿಟ್ ಗಳನ್ನು ವಿತರಿಸಲಾಯಿತು.
ಈ ವೇಳೆ ಸಂಸ್ಥೆಯ ಸಂಸ್ಥಾಪಕರಾದ ಡಾ.ಜಾನ್ ಶಮಿಯನ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯ ಇರುತ್ತದೆ. ಸರ್ಕಾರ ಮತ್ತು ಸ್ಥಳೀಯ ಸಂಘಸಂಸ್ಥೆಗಳು ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿ ಪ್ರೋತ್ಸಾಹ ನೀಡಿದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವ ಕಲಿಕಾ ಕಿಟ್ ಗಳನ್ನು ವಿತರಣೆ ಮಾಡುವ ಮೂಲಕ ಪ್ರೋತ್ಸಾಹ ಮಾಡಲಾಗುತ್ತಿದೆ. ಶಿಕ್ಷಕರು ಮತ್ತು ಪೋಷಕರು ನಿಗಾವಹಿಸಿ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ತಿಳಿದಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Gauribidanur News: ಡಿ.20ರಂದು ಸರಕಾರಿ ನೌಕರರ ಸಮಾವೇಶ: ರಾಜ್ಯಾಧ್ಯಕ್ಷ ಷಡಕ್ಷರಿ ಭಾಗಿ
ಸಂಸ್ಥೆಯ ರಾಜ್ಯ ನಿರ್ದೇಶಕರಾದ ಡೇವಿಡ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಈ ದೇಶಕ್ಕೆ ನಿಜವಾದ ಆಸ್ತಿಗಳಾಗಿದ್ದಾರೆ. ಅವರಿಗೆ ಕಲಿಕಾ ಹಂತದಿಂದಲೇ ಉತ್ತಮ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ನಿರಂತರವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯ ಕಲಿಕಾ ಪರಿಕರ ಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಎ.ಶಿವಣ್ಣ ಮಾತನಾಡಿ, ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರವು ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಇದರ ಜೊತೆಗೆ ಸ್ಥಳೀಯ ದಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಯವರು ನೀಡುವ ಸಹಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ವರದಾನವಾಗಿದೆ. ಇವುಗಳ ಸದ್ಬಳಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.
ಈ ವೇಳೆ ಸಂಸ್ಥೆಯ ವ್ಯವಸ್ಥಾಪಕರಾದ ಮಧುಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ನಿರ್ದೇಶಕರಾದ ಡಾ.ಶ್ರೀನಿವಾಸಲು ಫಿಲಿಪ್, ಕೀರ್ತನ್ ರಾಜ್, ಸಂಸ್ಥೆಯ ಪದಾಧಿಕಾರಿ ವಿದ್ಯಾ ಜಾನ್, ಸ್ಥಳೀಯ ಮುಖಂಡರಾದ ಜಿ.ಬೊಮ್ಮಣ್ಣ, ಚಿಕ್ಕಣ್ಣ, ಸಿ.ಆರ್.ಪಿ ನಾಗರಾಜ್, ಶಾಲೆಯ ಸಹಶಿಕ್ಷಕರಾದ ಲಕ್ಷ್ಮೀಪತಿ ಭಾಗವಹಿಸಿದ್ದರು.