ಚಿಂತಾಮಣಿ: ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಸಮುದಾಯಗಳ ನಡುವೆ ಪರಸ್ಪರ ಬಾಂಧವ್ಯ ಬೆಳೆಸುವ ಜೊತೆಗೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ(J K Krishna Reddy) ತಿಳಿಸಿದರು.
ತಾಲೂಕಿನ ಉಪ್ಪಾರಪೇಟೆಯಲ್ಲಿ ನಡೆದ ದರ್ಗಾ ಉರುಸ್ ಹಾಗೂ ಕವ್ವಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುರುಗುಮಲ್ಲ ದರ್ಗಾ ಹಾಗೂ ಉಪ್ಪಾರಪೇಟೆ ದರ್ಗಾಗಳಲ್ಲಿ ನಡೆಯುವ ಉರುಸ್ ಸಂದರ್ಭದಲ್ಲಿ ಗಂಧದ ಕಾರ್ಯಕ್ರಮ, ಕವ್ವಾಲಿ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ಜರುಗುತ್ತವೆ. ಎಲ್ಲ ಸಮುದಾಯದ ಜನರು ಯಾವುದೇ ಗೊಂದಲ, ಗದ್ದಲಗಳಿಗೆ ಅವಕಾಶ ನೀಡದೆ ಶಾಂತಿ ಮತ್ತು ಸೌಹಾರ್ದತೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮೆಚ್ಚುವಂತಹ ಸಂಗತಿ. ದರ್ಗಾಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆಗಳಲ್ಲಿ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ಜನರು ಸುಖ, ಶಾಂತಿಯಿಂದ ಬದುಕುವಂತಾಗಲಿ ಎಂದು ಹಾರೈಸಲಾಗುತ್ತದೆ ಎಂದರು.
ಇದನ್ನೂ ಓದಿ: Ladle mashaik Dargah: ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ
ಬಿಜೆಪಿ ಮುಖಂಡ ವೇಣುಗೋಪಾಲ್ ಮಾತನಾಡಿ, ಚಿಂತಾಮಣಿ ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಮರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭೇದಭಾವವಿಲ್ಲದೆ ಒಟ್ಟಾಗಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆಗೆ ಮಾದರಿಯಾಗಿದ್ದಾರೆ. ದರ್ಗಾ ಕಮಿಟಿಯವರು ಕಾರ್ಯ ಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದು, ಹಿಂದೆ ಇದ್ದ ರಸ್ತೆ ಸಮಸ್ಯೆ ಇದೀಗ ಅಭಿವೃದ್ಧಿ ಯಿಂದ ಸುಧಾರಿಸಿದೆ ಎಂದು ತಿಳಿಸಿದರು.
ದೇಶದ ಜಾತ್ಯತೀತ ತತ್ವವನ್ನು ಎತ್ತಿ ಹಿಡಿಯಲು ಜಾತಿ-ಮತಗಳ ಭೇದ ಮರೆತು ಇಂತಹ ಸೌಹಾರ್ದ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದರ್ಗಾ ಕಮಿಟಿ ಪದಾಧಿಕಾರಿಗಳಾದ ಜಮೀರ್ ಪಾಷ, ಶಫಿ, ಅಕ್ಬರ್, ನವಾಜ್, ರಫೀಕ್, ಜಿಯಾವುಲ್ಲಾ, ನವೀನ್, ಜನಾರ್ಧನ್, ಶ್ರೀನಿವಾಸ್ ಗೌಡ, ಫೋಟೋ ನಾರಾಯಣಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.