ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Ladle mashaik Dargah: ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ

Mahashivratri 2025: ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್ ಅನುಮತಿ‌ ನೀಡಿದೆ. ಆಂದೋಲ ಶ್ರೀ ಹೊರತು ಪಡಿಸಿ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಹಿಂದು ಸಂಘಟನೆಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಕಲಬುರಗಿ ಪೀಠ, ದರ್ಗಾದಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಿದೆ.

ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ

Profile Prabhakara R Feb 25, 2025 6:18 PM

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ (Ladle mashaik Dargah) ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಸಲ್ಲಿಸುವ ವಿಚಾರವಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಾಶಿವರಾತ್ರಿ (Mahashivratri 2025) ಅಂಗವಾಗಿ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಹಿಂದು ಸಂಘಟನೆಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಕಲಬುರಗಿ ಪೀಠ ತನ್ನ ತೀರ್ಪು ನೀಡಿದೆ. ಬುಧವಾರ (ಫೆಬ್ರವರಿ 26) ಮಧ್ಯಾಹ್ನ 2 ರಿಂದ ಸಾಯಂಕಾಲ 6 ಗಂಟೆವರೆಗೆ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.

ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತುಪಡಿಸಿ 15 ಹಿಂದು ಮುಖಂಡರಿಗೆ ಮಾತ್ರ ಶಿವಲಿಂಗ ಪೂಜೆ ನೆರವೇರಿಸಲು ಅವಕಾಶ ನೀಡಿದೆ. ಕಳೆದ ಬಾರಿ ನ್ಯಾಯಾಲಯ ಎರಡು ಸಮುದಾಯದ 15 ಜನರಿಗೆ ಪೂಜೆ ಮತ್ತು ಪ್ರಾರ್ಥನೆಗೆ ಅವಕಾಶ ನೀಡಿತ್ತು. ಕೋಮು ಗಲಭೆ ಮರುಕಳಿಸದಂತೆ ಕಲಬುರಗಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರು.

ಈ ಸುದ್ದಿಯನ್ನೂ ಓದಿ | Crime News: ಮಲ್ಪೆ ಸಮುದ್ರದಲ್ಲಿ ವಿದೇಶಿ ಬೋಟ್‌ ಪತ್ತೆ, ಕೋಸ್ಟ್‌ ಗಾರ್ಡ್‌ನಿಂದ ಸೆರೆ

ಸಿದ್ರಾಮಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಹಿಂದೂ ಸಂಘಟನೆಯಿಂದ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ವೇಳೆ ವಕ್ಫ್‌ ಮಂಡಳಿ ಇಲ್ಲಿ ಶಿವಲಿಂಗವೇ ಇಲ್ಲ ಎಂದು ವಾದ ಮಂಡಿಸಿತ್ತು. ಆದರೆ, ಸ್ಥಳ ಪರಿಶೀಲನೆ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಂಡ ಕಲಬುರಗಿ ಹೈಕೋರ್ಟ್ ಪೀಠದಿಂದ ಮಹತ್ವ ಆದೇಶ ಹೊರಡಿಸಲಾಗಿದೆ. ಹಿಂದೂ ಮುಖಂಡರಿಂದ 500 ಜನರು ಶಿವಲಿಂಗ ಪೂಜೆಗೆ ಅನುಮತಿ ಕೇಳಿದ್ದನ್ನು ನಿರಾಕರಿಸಿ ಕೇವಲ 15 ಜನರಿಗೆ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಇನ್ನು ಶಿವರಾತ್ರಿಗೆ ಮುನ್ನ ಮುಂಜಾಗ್ರತಾ ಕ್ರಮವಾಗಿ ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟವನ್ನು ಮಂಗಳವಾರ (ಫೆ.25) ರಾತ್ರಿ 11 ಗಂಟೆಯಿಂದ ಫೆ.27ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿ, ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ಸಲ್ಲಿಸಲು ಹೈಕೋರ್ಟ್‌ ಕಲಬುರಗಿ ಪೀಠ ಅವಕಾಶ ನೀಡಿದೆ.‌ ಈ ತೀರ್ಪನ್ನು ಎಲ್ಲ ಹಿಂದು ಸಂಘಟನೆಗಳು ಸ್ವಾಗತಿಸುತ್ತವೆ. ಕೋರ್ಟ್‌ ವರದಿ ತರಿಸಿಕೊಂಡು ಪರಿಶೀಲಿಸಿ, ವಾದ-ಪ್ರತಿವಾದ ಆಲಿಸಿ ಪೂಜೆಗೆ ಅನುಮತಿ ನೀಡಿದೆ. ಹೀಗಾಗಿ ನಮಗೆ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗ ಮಂದಿರ ನಿರ್ಮಿಸಲು ಮುಸ್ಲಿಮರು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಆಳಂದ ಪಟ್ಟಣದಲ್ಲಿ ಈ ಪ್ರಸಿದ್ದ ದರ್ಗಾ ಇದೆ. ಖ್ಯಾತ ಸೂಫಿ ಸಂತ ಲಾಡ್ಲೆ ಮಶಾಕ್ ಅವರ ದರ್ಗಾ ಇದಾಗಿದೆ. 14ನೇ ಶತಮಾನದಲ್ಲಿ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಪ್ರಸಿದ್ದಿ ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ 15ನೇ ಶತಮಾನದ ಸಂತ ರಾಘವ ಚೈತನ್ಯರ ಸಮಾಧಿಯೂ ಕೂಡ ಇದೆ. ಅದರ ಮೇಲೆ ಒಂದು ಶಿವಲಿಂಗ ಇದೆ. ಹೀಗಾಗಿ ಆ ಶಿವಲಿಂಗಕ್ಕೆ ಶ್ರೀ ರಾಘವ ಚೈತನ್ಯ ಶಿವಲಿಂಗ ಅಂತ ಕರೆಯಲಾಗುತ್ತದೆ.