Chikkaballapur News: ಕೈಗಾರಿಕೆಗೆ ಭೂಮಿ ಕೊಡಲು ರೈತರು ಸಿದ್ಧ ಸರಕಾರ ಮುಂದಾಗುತ್ತಿಲ್ಲ: ಪ್ರತಿಭಟನಾಕಾರರ ಆಕ್ರೋಶ
ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ ಸರಕಾರ 2823 ಎಕೆರೆ ಭೂಮಿಯನ್ನು ಕೆಐಎಡಿಬಿಗೆ ಸ್ವಾದೀನಪಡಿಸಿಕೊಳ್ಳಲು 2024ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿ ಸಿತ್ತು. ಈ ಪೈಕಿ 730 ಎಕರೆ ಖರಾಬು, 539 ಎಕರೆ ಬೀಳು ಭೂಮಿ, 525 ಎಕರೆ ಪಿಎಸ್‌ಎಲ್ ಕಂಪನಿಗೆ ಸೇರಿದ ಭೂಮಿ ಒಟ್ಟು 1794 ಎಕರೆ ಭೂಮಿ ಈಗಾಗಲೇ ಸರಕಾರದ ವಶದಲ್ಲಿದೆ.
ಕೈಗಾರಿಕೆಗೆ ಭೂಮಿ ಕೊಡಲು ರೈತರು ಸಿದ್ಧ ಸರಕಾರ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತ ಭವನಬದ ಎದುರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. -
ಚಿಕ್ಕಬಳ್ಳಾಪುರ: ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಸುಳ್ಳನ್ನು ಎಷ್ಟೇ ಸಾರಿ ಹೇಳಿದರೂ ಸತ್ಯ ಸತ್ಯವೇ ಆಗಿದೆ. ಕೆಲವು ರೈತನಾಯಕರು ಮಾಧ್ಯಮಗಳಿಗೆ ಮತ್ತು ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡುವಲ್ಲಿ ನಿರತರಾಗಿದ್ದಾರೆ. ಇದನ್ನು ನಿಲ್ಲಿಸಬೇಕು. ತಾಲೂಕಿಗೆ ಕೈಗಾರಿಕೆಗಳು ಬರಲು ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರಾಮಾಂಜಿನಪ್ಪ ಸರಕಾರವನ್ನು ಒತ್ತಾಯಿಸಿದರು.
ನಗರದ ಜಿಲ್ಲಾಡಳಿತ ಭವವನದ ಎದುರು ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತರ ಪರ ಹೋರಾಟ ಸಮಿತಿ ಮತ್ತು ಇತರೆ ದಲಿತಪರ ಪ್ರಗತಿಪರ ರೈತ ಸಂಘಟನೆಗಳು ಕೈಗಾರಿಕೆ ಸ್ಥಾಪಿಸಿ, ರೈತರ ಭೂಮಿಗೆ ಎಕರೆಗೆ 4 ಕೋಟಿ ಪರಿಹಾರ ನಿಗದಿ ಪಡಿಸಿ ಎಂದು ಸರಕಾರಕ್ಕೆ ಆಗ್ರಹಿಸಿ ಮಾ.23ರಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.
ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ ಸರಕಾರ 2823 ಎಕೆರೆ ಭೂಮಿಯನ್ನು ಕೆಐಎಡಿಬಿಗೆ ಸ್ವಾದೀನಪಡಿಸಿಕೊಳ್ಳಲು 2024ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿ ಸಿತ್ತು. ಈ ಪೈಕಿ 730 ಎಕರೆ ಖರಾಬು, 539 ಎಕರೆ ಬೀಳು ಭೂಮಿ, 525 ಎಕರೆ ಪಿಎಸ್‌ಎಲ್ ಕಂಪನಿಗೆ ಸೇರಿದ ಭೂಮಿ ಒಟ್ಟು 1794 ಎಕರೆ ಭೂಮಿ ಈಗಾಗಲೇ ಸರಕಾರದ ವಶದಲ್ಲಿದೆ.
ಇನ್ನುಳಿದ 1029 ಎಕರೆ ಜಮೀನಿನ ಪೈಕಿ ಶೇ.80ರಷ್ಟು ರೈತರು ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಲು ಸ್ವಯಂ ಪ್ರೇರಣೆಯಿಂದ ಒಪ್ಪಿಗೆ ಸೂಚಿಸಿರುತ್ತಾರೆ. ಆದರೂ ಕೆಲವರು ನಮ್ಮ ಬಳಿ 850 ಮಂದಿ ರೈತರಿದ್ದು ಇರ‍್ಯಾರೂ ಕೂಡ ಭೂಮಿ ಕೊಡಲು ಸಿದ್ಧರಿಲ್ಲ, ಸರಕಾರ ಕೂಡಲೇ ಅಂತಿಮ ಅಧಿಸೂಚನೆ ಕೈಬಿಡಬೇಕು ಎಂದು ಪ್ರತಿಭಟನೆಯ ಹೆಸರಿನಲ್ಲಿ ಸುಳ್ಳಿನ ಪ್ರಚಾರ ಮಾಡುತ್ತಾ ಸರಕಾರ ಮತ್ತು ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿ ದರು.
ಈ ಹಿಂದೆ ನಮ್ಮ ಸಂಘಟನೆ ಹೋರಾಟ ನಡೆಸಿದ ಸಂದರ್ಭದಲ್ಲಿ ಕೆಐಎಡಿಬಿ ಇಲಾಖೆ ರೈತರ ನೀರಾವರಿ ಭೂಮಿಯನ್ನು ಕೈಬಿಟ್ಟು ಉಳಿದ ಭೂಮಿಯನ್ನು ಅಂತಿಮಗೊಳಿಸು ವಂತೆ ಹೋರಾಟ ಮಾಡಿತ್ತು. ಇದರ ಫಲವಾಗಿ ಸರಕಾರ 2823 ಎಕರೆ ಜಮೀನಿನಲ್ಲಿ 490 ಎಕರೆ ನೀರಾವರಿ ಭೂಮಿ ಬಿಟ್ಟು ಉಳಿದ 2332 ಎಕರೆ ಜಮೀನು ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಮುಂದಿನ ಪ್ರಕ್ರಿಯೆಯನ್ನು ಬೇಗ ನಡೆಸಿ ರೈತರ ಭೂಮಿಗೆ ದರ ನಿಗದಿಪಡಿಬೇಕು ಎಂದು ಆಗ್ರಹಿಸಿದರು.
2223 ಎಕರೆ ಪೈಕಿ 1250 ಎಕರೆ ಸರಕಾರಿ ಭೂಮಿಯೇ ಇದೆ. ಪಿಎಸ್‌ಎಲ್ ಕಂಪನಿಯ ಹೆಸರಲ್ಲಿ 525 ಎಕರೆ ಭೂಮಿಯಿದೆ. ಗೊಲ್ಲಹಳ್ಳಿ ಮತ್ತು ದೇವಗಾನಹಳ್ಳಿಯ ವ್ಯಾಪ್ತಿಯಲ್ಲಿ 100 ಎಕರೆಗೂ ಹೆಚ್ಚು ದಲಿತರ ಭೂಮಿಯನ್ನು ಸ್ವಯಂ ಪ್ರೇರಣೆಯಿಂದ ಕೊಡಲು ಮುಂದೆ ಬಂದಿದ್ದಾರೆ. ಇನ್ನು ನಡಿಪಿನಾಯಕನಹಳ್ಳಿ ಕೊಲುವೆ ಹೊಸೂರು, ಬಸವಾ ಪಟ್ಟಣ, ಯಣ್ಣಂಗೂರು ಈ ಭಾಗದಲ್ಲಿ ಕೂಡ 300 ಎಕರೆ ಕೊಡಲು ರೈತರು ಮುಂದೆ ಬಂದಿದ್ದಾರೆ. ಹೀಗಾಗಿ, ಸರಕಾರ ಈ ಕೂಡಲೇ ಎಕರೆಗೆ 4 ಕೋಟಿಯಂತೆ ಭೂ ಪರಿಹಾರ ಕೊಡಬೇಕು. ಪರಿಹಾರದ ಹಣಬೇಡ ಎಂಬ ರೈತರಿಗೆ ಬದಲಿ ಭೂಮಿಯನ್ನು ನೀಡಬೇಕು. ಭೂಮಿ ಕಳೆದುಕೊಳ್ಳುವ ಪ್ರತಿ ಕುಟುಂಬಕ್ಕೆ ಒಂದು ಖಾಯಂ ಉದ್ಯೋಗ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಬೈರಾಪುರ ಕಾಳು ಫ್ಯಾಕ್ಟರಿಯಲ್ಲಿ ಹಣ ಪಡೆದಿದ್ದು, ಹೈಟೆನ್ಷನ್ ಕಂಬ ಹಾಕುವಾಗ ಮಾರಾಟವಾಗಿದ್ದು, ನಿಮ್ಮ ಮಾತು ಕೇಳಿ ವಿಷ ಕುಡಿದ ರೈತರು ಕೇಸು ಹಾಕಿಸಿಕೊಂಡು ಕೋರ್ಟಿಗೆ ಅಲೆಯುತ್ತಿರುವುದು ಜನತೆ ಗಮನಿಸಿದ್ದಾರೆ. ಪಿ.ಎಸ್.ಎಲ್ ಕಂಪನಿ 525 ಎಕರೆ ರೈತರಿಗೆ ಮೋಸ ಮಾಡಿದಾಗ ಯಾಕೆ ಇವರು ನೆರವಿಗೆ ಬರಲಿಲ್ಲ ಎಂದು ಪ್ರಶ್ನಿಸಿದರು.
ಭಕ್ತರಹಳ್ಳಿ ಡಾ.ವಿಶ್ವನಾಥ್ ಮಾತನಾಡಿ, ಜಂಗಮ ಕೋಟೆ ಹೋಬಳಿಯಲ್ಲಿ ಎಷ್ಟು ಮಂದಿ ಲೇಔಟ್ ಮಾಡಿದ್ದಾರೆ ಎಂಬುದು ಭೂಮಿ ಕೊಡಲಾರೆ ಎಂಬ ಹೋರಾಟಗಾರರಿಗೆ ಗೊತ್ತಿಲ್ವೆ? ಸರಿಸುಮಾರು 2500 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಲೇ ಔಟ್ ಮಾಡಿ ದ್ದಾರೆ. ಇದು ಕೂಡ ರೈತರ ಭೂಮಿ ಆಗಿತ್ತಲ್ಲ. ಆಗ ನೀವು ಎಲ್ಲಿದ್ದೀರಿ. ಈಗ ದಲಿತರ ಭೂಮಿಗೆ ಉತ್ತಮ ಬೆಲೆ ಬರಲಿದೆ ಎಂದು ಅಸೂಯೆ ಪಟ್ಟು ಭೂಮಿ ಕೊಡಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದೀರಲ್ಲ, ನಿಮ್ಮದು ರಿಯಲ್ ಎಸ್ಟೇಟ್ ಹಿತಾಸಕ್ತಿ ಒಳಗೊಂಡ ಪ್ರೀತಿಯೇ ವಿನಃ ನಿಜವಾದ ರೈತಪರ ಕಾಳಜಿಯ ಹೋರಾಟವಲ್ಲ ಎಂದು ದೂರಿದರು.
ಲೇಔಟ್‌ಗೆ ಭೂಮಿ ಪರಿವರ್ತನೆ ಆಗುವಾಗ ರೈತ ಸಂಘದ ಮುಖಂಡರು ಎಲ್ಲಿದ್ದರು. ಕೈಗಾರಿಕೆಗೆ ಭೂಮಿ ಕೊಡುವಾಗ ಬೇಡ ಎಂದು ಹೇಳುವುದು ಸರಿಯಲ್ಲ. ರೈತರನ್ನು ಮುಂದೆ ಇಟ್ಟುಕೊಂಡು ಬಡವರ ಬದುಕಿಗೆ ಕಲ್ಲು ಹಾಕುವುದು ಎಷ್ಟು ಸರಿ. ಭೂಮಿ ಕೊಡಲ್ಲ ಎಂದು ನಿಜವಾದ ರೈತರು ಹೇಳಬೇಕು. ನೀವಲ್ಲ.ಸರಕಾರಿ ಭೂಮಿಯಲ್ಲಿ ಸರಕಾರ ಕೈಗಾರಿಕೆ ಮಾಡಿ ಎಂದು ನಾವು ಒತ್ತಾಯಿಸುತ್ತೇದ್ದೇವೆ. ಯಾವುದೋ ಖಾಸಗಿ ಭೂಮಿಯಲ್ಲಿ ಅಲ್ಲ ಎಂಬುದು ಮೊದಲು ಅರಿಯಿರಿ, ಅದನ್ನು ಬಿಟ್ಟು ವೈಯಕ್ತಿಕ ತೇಜೋವದೆಗೆ ಇಳಿಯುವುದು ಶೋಭೆ ತರುವುದಿಲ್ಲ. ಕೈಗಾರಿಕೆ ಸ್ಥಾಪಿಸದೆ ಜಿಲ್ಲಾಡಳಿತ ಮತ್ತು ಸರಕಾರ ಅನ್ಯಾಯಕ್ಕೆ ಮುಂದಾದಲ್ಲಿ ತೀವ್ರರತವಾದ ಹೋರಾಟ ನಡೆಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರಕಾರ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಎಲ್ಲಾ ಅನುಕೂಲ ಇದ್ದಾಗಲೂ ಸುಮ್ಮನೆ ಇರುವುದು ತರವಲ್ಲ. ಭೂಮಿ ಕೊಡಲ್ಲ ಎಂದು ಹೇಳುತ್ತಿರುವವರು ಕೇವಲ 200 ರೈತರು ಮಾತ್ರ ಹೋರಾಟ ಮಾಡುತ್ತಿದ್ದಾರೆ. ಆದರೆ ಹೋರಾಟವನ್ನೇ ಬಂಡವಾಳ ಮಾಡಿ ಕೊಂಡಿರುವ ಕೆಲವರು 850 ಎಕರೆ ರೈತರು ನಮ್ಮೊಂದಿಗೆ ಇದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಅಭಿಪ್ರಾಯ ಸಂಗ್ರಹ ಸಂದರ್ಭದಲ್ಲಿ ಕೂಡ ಇವರೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಸತ್ಯ ಹೇಳಬೇಕೆಂದರೆ ಆಗ 400 ಪಹಣಿದಾರರು ಮಾತ್ರ ಸಿಹಿ ಮಾಡಿರಲಿಲ್ಲ. ಉಳಿದಂತೆ ಶೇ.78ರಷ್ಟು ರೈತರು ಭೂಮಿ ಕೊಡಲು ಸಿದ್ಧರಿದ್ದಾರೆ. ಇಂತಹ ಕೆಲವು ಹೋರಾಟಗಾರರಿಗೆ ನ್ಯಾಯಾಲಯದ ಮೇಲೆ ನಂಬಿಕೆಯಿಲ್ಲ, ಜನಪ್ರತಿನಿಧಿಗಳು, ಸರಕಾರ ದ ಮೇಲೆಯೂ ಕೂಡ ಮೇಲೆ ನಂಬಿಕೆ ಇಲ್ಲ.ಇಂತಹ ಸ್ವಾರ್ಥಪರರು ಮಾತ್ರ ಹೋರಾಟ ಮಾಡುತ್ತಿದ್ದು ಜಿಲ್ಲಾಡಳಿತ ಇವರಿಗೆ ಪ್ರತಿಭಟನೆ ಮಾಡಲು ಹೇಗೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಬೆಳ್ಳುಟಿ ಬಿ.ಕೆ.ಮುನಿಕೆಂಪಣ್ಣ, ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ದಸಂಸದ ಈಧರೆ ಪ್ರಕಾಶ್,ಚಿಂತಾಮಣಿ ಕದಿರೇಗೌಡ, ಬಸವಾಪಟ್ಟಣ ಆಂಜಿನಪ್ಪ, ತಿಪ್ಪೇಗೌಡ,ಪ್ರಭು, ನಾಗರಾಜ್, ವೆಂಕಟೇಶ್, ಕನಕಪ್ಪ, ಯಣ್ಣಂಗೂರು ಈರಪ್ಪ,ಮಧು,ನರಸಿಂಹಪ್ಪ,ಹರೀಶ್, ಜಂಗಮಕೋಟೆ ಜೆ.ಜಿ.ಮಂಜಣ್ಣ,ನಾರಾಯಣಸ್ವಾಮಿ, ನಾರಾಯಣದಾಸರಹಳ್ಳಿ ನಾರಾಯಣಸ್ವಾಮಿ, ಮುನಿರಾಜು, ಚೀಮಂಗಲ ಚಿನ್ನಪ್ಪ, ಅತ್ತಿಗಾನಹಳ್ಳಿ ಮುನೇಗೌಡ, ವಿನೋದ್ ಕುಮಾರ್, ನಿರಂಜನ್‌ಕುಮಾರ್, ಸುವಣ್ಣಮ್ಮ, ನಂದಿನಿ, ಉಷಾ, ಗೌತಮಿ,ಮಂಜುಳಮ್ಮ, ಸಿಂಧು ಮತ್ತಿತರರು ಇದ್ದರು.