ಗುಡಿಬಂಡೆ: ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಕ್ರಮ ಹಾಗೂ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಸರ್ಕಾರದ ನಿರ್ಧಾರ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ನೇತೃತ್ವದಲ್ಲಿ ಗುಡಿಬಂಡೆ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಬಳಿಕ ಸಂಘದ ಮುಖಂಡರು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ. ಜಯರಾಮ್ ರೆಡ್ಡಿ, ಪ್ರಸ್ತುತ ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗಾಗಿ ಸರ್ಕಾರ ಉಚಿತ ಹಾಗೂ ಸಬ್ಸಿಡಿ ಆಧಾರಿತ ವಿದ್ಯುತ್ ಪೂರೈಕೆ ಮಾಡುತ್ತಿದೆ. ಈ ವ್ಯವಸ್ಥೆಯ ಸಂಪೂರ್ಣ ಆರ್ಥಿಕ ಹೊರೆ ಸರ್ಕಾರಿ ಎಸ್ಕಾಂಗಳ ಮೇಲಿದೆ. ಇಂತಹ ಸಂದರ್ಭದಲ್ಲಿ ಲಾಭದಾಯಕ ಕೈಗಾರಿಕಾ ಹಾಗೂ ವಾಣಿಜ್ಯ ಗ್ರಾಹಕರನ್ನು ಖಾಸಗಿ ಕಂಪನಿಗಳು ಸೆಳೆಯುವ ಮೂಲಕ ಸರ್ಕಾರಿ ಸಂಸ್ಥೆಗಳ ಆದಾಯ ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರಿ ಎಸ್ಕಾಂಗಳ ಆರ್ಥಿಕ ಸ್ಥಿತಿ ದುರ್ಬಲಗೊಂಡರೆ ಕೃಷಿ ಕ್ಷೇತ್ರಕ್ಕೆ ನೀಡ ಲಾಗುತ್ತಿರುವ ಸಬ್ಸಿಡಿ ಆಧಾರಿತ ವಿದ್ಯುತ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಗ್ರಾಮೀಣ ಭಾಗದ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಿ ಹಿಂತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣ( Power sector privatization)ಗೊಂಡರೆ ಇಲಾಖೆಯ ನೌಕರರು ಹಾಗೂ ರೈತ ಸಮುದಾಯ ಎರಡಕ್ಕೂ ಹಾನಿಯಾಗಲಿದೆ. ಸಾವಿರಾರು ಕುಟುಂಬಗಳ ಜೀವನೋ ಪಾಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಖಾಸಗೀಕರಣದ ವಿರುದ್ಧದ ಹೋರಾಟ ಯಶಸ್ವಿಯಾಗಬೇಕಾದರೆ ರೈತ ಸಂಘಟನೆಗಳು ಮತ್ತು ವಿದ್ಯುತ್ ಇಲಾಖೆಯ ನೌಕರರು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಆದಿನಾರಾಯಣ, ಕಾರ್ಯ ದರ್ಶಿ ಶ್ರೀನಿವಾಸ್, ಖಜಾಂಚಿ ಸೀನಪ್ಪ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಕಾರ್ಯದರ್ಶಿ ರಾಘವೇಂದ್ರ, ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ವೆಂಕಟರಾಜು, ತಾಲೂಕು ಸಮಿತಿ ಸದಸ್ಯರಾದ ರಮಣ, ರಾಜಪ್ಪ ಹಾಗೂ ನವೀನ್ ಕುಮಾರ್, ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಗಂಗರಾಜು ಮತ್ತು ಡಿವೈಎಫ್‌ಐ ಮುಖಂಡ ಸೋಮಶೇಖರ್ ರೆಡ್ಡಿ ಸೇರಿದಂತೆ ಬೆಸ್ಕಾಂ ಸಿಬ್ಬಂದಿ ಹಾಗೂ ರೈತರು ಭಾಗವಹಿಸಿದ್ದರು.