Gauribidanur News: ಐದು ಲಕ್ಷ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷಿ ಯೋಜನೆಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಚಾಲನೆ
ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಮತ್ತು ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ, ಜಿಲ್ಲಾ ನ್ಯಾಯಾಂಗದ ನೇತೃತ್ವದಲ್ಲಿ ಕೈಗೊಂಡಿರುವ ಐದು ಲಕ್ಷ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷಿ ಯೋಜನೆಗೆ ತಾಲ್ಲೂಕಿನ ಶ್ರೀ ಕ್ಷೇತ್ರ ಮುದುಗಾನುಕಂಟೆ ಗಂಗಾಭಾಗಿರಥಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಚಾಲನೆ ನೀಡಿದರು.
-
ಗೌರಿಬಿದನೂರು: ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಮತ್ತು ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ, ಜಿಲ್ಲಾ ನ್ಯಾಯಾಂಗದ ನೇತೃತ್ವದಲ್ಲಿ ಕೈಗೊಂಡಿರುವ ಐದು ಲಕ್ಷ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷಿ ಯೋಜನೆಗೆ ತಾಲ್ಲೂಕಿನ ಶ್ರೀ ಕ್ಷೇತ್ರ ಮುದುಗಾನುಕಂಟೆ ಗಂಗಾಭಾಗಿರಥಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಅನ್ನತ್ ಸಂಜೀವ್ ಅವರ ದೂರದೃಷ್ಟಿಯ ಪರಿಕಲ್ಪನೆಯಂತೆ, ಜಿಲ್ಲೆಯಲ್ಲಿ ಆರಂಭವಾದ ಈ ಪರಿಸರ ಯೋಜನೆ ಇದೀಗ ರಾಜ್ಯಾದ್ಯಂತ ವಿಸ್ತರಣೆಯಾಗಿದ್ದು, ಒಟ್ಟು ಐದು ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನವಾಗಿ ಮಾರ್ಪಟ್ಟಿದೆ ಎಂದರು.
ನೆಟ್ಟ ಸಸಿಗಳು ಕೇವಲ ಗಿಡಗಳಾಗಿ ಉಳಿಯದೆ, ಹೆಮ್ಮರಗಳಾಗಿ ಬೆಳೆಯುವುದನ್ನು ಖಚಿತ ಪಡಿಸಿಕೊಳ್ಳಲು ವಿಶೇಷ ಒತ್ತು ನೀಡಲಾಗಿದೆ.
ಇದಕ್ಕಾಗಿ ವಂದೇ ಭಾರತಂ ಫೌಂಡೇಶನ್ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಮೂಲಕ ಸಸಿಗಳ ನಿರಂತರ ಮೇಲ್ವಿಚಾರಣೆ ಮತ್ತು ಪೋಷಣೆ ಮಾಡಲಾಗುವುದು. ಅಲ್ಲದೆ, ಶಾಲೆಗಳಲ್ಲಿ ನೆಡುವ ಸುಮಾರು 34 ಸಾವಿರ ಸಸಿಗಳ ಜವಾಬ್ದಾರಿಯನ್ನು ಎನ್‌ಜಿಒ ಸಂಸ್ಥೆಗಳಿಗೆ ವಹಿಸಲಾಗಿದೆ.
ಇದನ್ನೂ ಓದಿ: Gauribidanur News: ಗುರಿ ಸಾಧಿಸಲು ನಿರಂತರ ಪ್ರಯತ್ನ ಅಗತ್ಯ : ವಿಜ್ಞಾನಿ ಕೆಪಿಜೆ ರೆಡ್ಡಿ
ಗೌರಿಬಿದನೂರು ವಕೀಲರ ಸಂಘದ ವಕೀಲರು ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸ್ವಯಂಪ್ರೇರಿತರಾಗಿ ಹಣ ಸಂಗ್ರಹಿಸಿ, ಪರಿಸರ ರಕ್ಷಣೆಗೆ ಮುಂದಾಗಿರುವುದು ಇತರರಿಗೆ ಮಾದರಿ ಯಾಗಿದೆ. ಇವರ ಈ ಸಾಮಾಜಿಕ ಕಳಕಳಿ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್ ಮಾತನಾಡಿ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಂತಹ ಗಂಭೀರ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬ ನಾಗರಿಕನೂ ಪರಿಸರ ಕಾಳಜಿ ಹೊಂದುವುದು ಅನಿವಾರ್ಯವಾಗಿದೆ ಎಂದರು.
ತಹಸೀಲ್ದಾರ್ ಅರವಿಂದ್.ಕೆ.ಎಂ ಮಾತನಾಡಿ, ಐದಾರು ತಿಂಗಳ ಸಿದ್ದತೆಯ ಫಲವಾಗಿ ಈ ಅಭಿಯಾನ ಆರಂಭವಾಗಿದೆ. ದೇವಸ್ಥಾನದ ಸಹಕಾರದೊಂದಿಗೆ ಮುಕ್ಕಾಲು ಎಕರೆ ಜಾಗದಲ್ಲಿ ಸಸಿಗಳನ್ನು ನೆಡಲಾಗಿದೆ, ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಭರವಸೆ ನೀಡಿದರು.
ನ್ಯಾಯಾಧೀಶರಾದ ಶಿಲ್ಪ.ಬಿ, ನ್ಯಾಯಾಧೀಶರಾದ ಗೀತಾ ಕುಂಬಾರ್.ಕೆ.ಬಿ ಹಾಗೂ ಪುಷ್ಪಾ.ಡಿ, ವಕೀಲರ ಸಂಘದ ಅಧ್ಯಕ್ಷ ಟಿ.ಪಿ.ದಿನೇಶ್ ಕುಮಾರ್, ಕಾರ್ಯದರ್ಶಿ ಬಿ.ಲಿಂಗಪ್ಪ, ಸರ್ಕಾರಿ ಸಹಾಯಕ ಅಭಿಯೋಜಕ ಫಯಾಜ್ ಪಾಟೀಲ್, ಹಿರಿಯ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ,ಮುದುಗಾನಕುಂಟೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನರಸಿಂಹರೆಡ್ಡಿ, ಹಲವು ಗಣ್ಯರು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ವಕೀಲರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿ ದ್ದರು.