ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗೌರಿಬಿದನೂರಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಧರಣಿ; ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಧ್ವನಿಯಾಗಿ, ಭಾರತೀಯ ಸಂವಿಧಾನದ ಶಿಲ್ಪಿಯಾಗಿ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರು. ದೇಶದಾದ್ಯಂತ ಅವರ ಪ್ರತಿಮೆಗಳು ಸ್ಥಾಪನೆಯಾಗಿರುವಾಗ, ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾತ್ರ ಪ್ರತಿಮೆ ಸ್ಥಾಪನೆಗೆ ಕೆಲವರು ಅಡ್ಡಿಪಡಿಸುತ್ತಿರುವುದು ಖಂಡನೀಯ

ಗೌರಿಬಿದನೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಯನ್ನು ತಕ್ಷಣ ಸ್ಥಾಪಿಸಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ಹಾಗೂ ಧರಣಿ ನಡೆಸ ಲಾಯಿತು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ.ಆರ್.ಸತ್ಯನಾರಾಯಣ, ಕಳೆದ ಸುಮಾರು 30 ವರ್ಷಗಳಿಂದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸುವಂತೆ ಮನವಿ ಸಲ್ಲಿಸು ತ್ತಿದ್ದರೂ ತಾಲೂಕು ಆಡಳಿತ ಜಾಣಕುರುಡು ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಧ್ವನಿಯಾಗಿ, ಭಾರತೀಯ ಸಂವಿಧಾನ ದ ಶಿಲ್ಪಿಯಾಗಿ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರು. ದೇಶದಾದ್ಯಂತ ಅವರ ಪ್ರತಿಮೆಗಳು ಸ್ಥಾಪನೆಯಾಗಿರುವಾಗ, ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾತ್ರ ಪ್ರತಿಮೆ ಸ್ಥಾಪನೆಗೆ ಕೆಲವರು ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಇದನ್ನೂ ಓದಿ: Gauribidanur News: ಶ್ರೀಶಾರದಾ ದೇವಿ ದೇವಸ್ಥಾನದಲ್ಲಿ ವಿಮಾನ ಗೋಪುರ ಕಲಶ ಸ್ಥಾಪನೆ ಹಾಗೂ ಮಹಾಕುಂಭಾಭಿಷೇಕದಲ್ಲಿ ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿ ಭಾಗಿ

ಒಕ್ಕೂಟದ ಗೌರವಾಧ್ಯಕ್ಷ ಚೆನ್ನಪ್ಪ ಮಾತನಾಡಿ, ಅಂಬೇಡ್ಕರ್ ವೃತ್ತದಲ್ಲಿರುವ ವಿವಾದಿತ ಜಾಗ ನಗರಸಭೆಗೆ ಸೇರಿದ್ದು, ಆ ಸ್ಥಳದಲ್ಲೇ ಪ್ರತಿಮೆ ಸ್ಥಾಪನೆಗೆ ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ಹೇಳಿದರು. ಈ ಹಿಂದೆ ಕಸಾಯಿಖಾನೆಗೆ ಸೇರಿದ ಜಾಗವನ್ನು ಭಜನಾ ಕಾರ್ಯಕ್ರಮಗಳಿಗೆ ತಾತ್ಕಾಲಿಕ ವಾಗಿ ನೀಡಲಾಗಿತ್ತಾದರೂ, ನಂತರ ಅಲ್ಲಿ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಬಿ.ಎಚ್.ರಸ್ತೆ ಅಗಲೀಕರಣ ವೇಳೆ ಆ ಕಟ್ಟಡಗಳು ತೆರವುಗೊಂಡಿರುವುದರಿಂದ ಈಗ ಆ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ವಕೀಲ ಬಿ.ಕೆ. ನರಸಿಂಹಮೂರ್ತಿ ಮಾತನಾಡಿ, ಇದೇ ಬೇಡಿಕೆಗಾಗಿ ಈ ಹಿಂದೆ 19 ದಿನಗಳ ಕಾಲ ಸತ್ಯಾಗ್ರಹ ನಡೆಸಲಾಗಿತ್ತು. ಅಂದಿನ ತಹಶೀಲ್ದಾರ್ ನೀಡಿದ ಭರವಸೆಯ ಮೇರೆಗೆ ಧರಣಿಯನ್ನು ಹಿಂಪಡೆಯಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೆಪ ಹೇಳುವುದನ್ನು ಬಿಟ್ಟು ಶೀಘ್ರವೇ ಪ್ರತಿಮೆ ಸ್ಥಾಪನೆಗೆ ಮುಂದಾಗಬೇಕು. ಇಲ್ಲದಿದ್ದರೆ ತಾಲೂಕು ವ್ಯಾಪ್ತಿಯಲ್ಲಿ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಮಾ.ಕ. ರಾಮಚಂದ್ರ, ವಕೀಲ ಜೆ.ಕೆ. ಗಂಗಾಧರಪ್ಪ, ಎ. ಗಂಗಾಧರಪ್ಪ, ಗ್ಯಾರಂಟಿ ಯೋಜನೆಗಳ ಸದಸ್ಯ ಕೆ. ನಂಜುಂಡಪ್ಪ, ಅಶ್ವತ್ಥಪ್ಪ, ಎನ್. ಗಂಗಾಧರಪ್ಪ, ಮಲ್ಲಸಂದ್ರ ಗಂಗಾಧರಪ್ಪ, ಆದೀಶ್, ಬಾಲಯ್ಯ, ಮಂಜಣ್ಣ, ಕಿರಣ್, ನಾಗೇಶ್, ಸುದರ್ಶನ್, ಉಪ್ಪರ್, ಬಾಲಕೃಷ್ಣ, ನಾಗರಾಜ್, ಗೋಪಿ, ರಾಜು, ನಾರಾಯಣಸ್ವಾಮಿ, ಪ್ರಸನ್ನಕುಮಾರ್, ಶಿವಶಂಕರ್, ನರಸಿಂಹಮೂರ್ತಿ, ನಾರಾಯಣ, ಕೃಷ್ಣಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.