Gurupurnime: ಕೈವಾರದಲ್ಲಿ ಗುರುಪೂಜಾ ಸಂಗೀತ ಮಹೋತ್ಸವಕ್ಕೆ ಭರದ ಸಿದ್ಧತೆ
ಆಷಾಢ ಮಾಸದ ಹುಣ್ಣಿಮೆಯ ಸಂದರ್ಭದಲ್ಲಿ ಕೈವಾರ ಕ್ಷೇತ್ರವು ಭಕ್ತರಿಂದ ಕಿಕ್ಕಿರಿದು ತುಂಬ ಲಿದ್ದು, ಗುರುಪೂಜೆ ಹಾಗೂ ಸಂಗೀತಾರ್ಚನೆಯ ಮೂಲಕ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಸೇವೆ ಸಲ್ಲಿಸಲಾಗುತ್ತದೆ. ಮಹೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ವಿಶಾಲ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದ್ದು, ದೇವಾಲಯ ಮತ್ತು ಸುತ್ತಮುತ್ತ ಲಿನ ಪ್ರದೇಶವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ
-
ಚಿಕ್ಕಬಳ್ಳಾಪುರ: ತಾಲ್ಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಗುರುಪೌರ್ಣಿಮೆ(Gurupurnima)ಯ ಅಂಗವಾಗಿ ಜು.27ರಿಂದ ಆರಂಭವಾಗಲಿರುವ ಗುರುಪೂಜಾ ಮಹೋತ್ಸವ ಹಾಗೂ 72 ಗಂಟೆಗಳ ನಿರಂತರ ಸಂಗೀತ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಆಷಾಢ ಮಾಸದ ಹುಣ್ಣಿಮೆಯ ಸಂದರ್ಭದಲ್ಲಿ ಕೈವಾರ ಕ್ಷೇತ್ರವು ಭಕ್ತರಿಂದ ಕಿಕ್ಕಿರಿದು ತುಂಬ ಲಿದ್ದು, ಗುರುಪೂಜೆ ಹಾಗೂ ಸಂಗೀತಾರ್ಚನೆಯ ಮೂಲಕ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಸೇವೆ ಸಲ್ಲಿಸಲಾಗುತ್ತದೆ. ಮಹೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ವಿಶಾಲ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದ್ದು, ದೇವಾಲಯ ಮತ್ತು ಸುತ್ತಮುತ್ತ ಲಿನ ಪ್ರದೇಶವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಭಕ್ತರಿಗೆ ಪ್ರಸಾದ ಹಾಗೂ ಮೂಲಭೂತ ಸೌಲಭ್ಯಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕೈವಾರ ಕ್ರಾಸ್‌ನಲ್ಲಿ ಬೃಹತ್ ಸ್ವಾಗತ ಕಮಾನುಗಳನ್ನು ನಿರ್ಮಿಸಿ, ಅಲ್ಲಿಂದ ದೇವಾಲಯದವರೆಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ.
ಇದನ್ನೂ ಓದಿ: Chikkaballapur News: ಪತ್ರಿಕೋದ್ಯಮದ ಹಿರಿಯ ಸಾಧಕ ಭವಾನಿ ಲಕ್ಷ್ಮೀನಾರಾಯಣ್‌ಗೆ ಪಿ.ಆರ್.ರಾಮಯ್ಯ ಸ್ಮಾರಕ ದತ್ತಿ ಪ್ರಶಸ್ತಿ
ಜುಲೈ 27ರಂದು ಬೆಳಿಗ್ಗೆ 5.30ಕ್ಕೆ ಘಂಟಾನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ನೆರವೇರಲಿದ್ದು, ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅವರ ನೇತೃತ್ವದಲ್ಲಿ ಸಾಮೂಹಿಕ ನಾಮಸಂಕೀರ್ತನೆಯೊಂದಿಗೆ ಸಂಗೀತ ಮಹೋತ್ಸವ ಆರಂಭವಾಗಲಿದೆ. ನಂತರ ವಿವಿಧ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದ್ದು, ಸಂಜೆ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜು.27ರಿಂದ ಆರಂಭವಾಗುವ 72 ಗಂಟೆಗಳ ನಿರಂತರ ಸಂಗೀತ ಮಹೋತ್ಸವವು ಜುಲೈ 30ರ ಬೆಳಿಗ್ಗೆ 6 ಗಂಟೆಗೆ ಸಮಾಪ್ತಿಯಾಗಲಿದೆ. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕಲಾವಿದರು ಹಾಗೂ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಆಗಮಿಸುವ ಭಜನಾ ಮಂಡಳಿಗಳು ಮಹೋತ್ಸವದಲ್ಲಿ ಭಾಗವಹಿಸಲಿವೆ.
ಮಹೋತ್ಸವದ ಮೂರು ದಿನಗಳ ಅವಧಿಯಲ್ಲಿ ಸಾಮೂಹಿಕ ಭಜನೆ, ನಾದಸ್ವರ, ಹರಿಕಥೆ, ಬುರ್ರಕಥೆ, ಸಂಗೀತ ಕಚೇರಿ, ಭರತನಾಟ್ಯ, ಕಥಾಕೀರ್ತನೆ, ವೀಣಾವಾದನ, ಕೊಳಲುವಾದನ, ವೀರಗಾಸೆ, ಡೊಳ್ಳುಕುಣಿತ, ಪಂಡರಿ ಭಜನೆ, ಕೋಲಾಟ ಹಾಗೂ ತೊಗಲುಗೊಂಬೆಯಾಟ ಸೇರಿದಂತೆ ವಿವಿಧ ಜಾನಪದ ಮತ್ತು ಸಾಂಪ್ರದಾಯಿಕ ಕಲಾಪ್ರಕಾರಗಳು ಸದ್ಗುರು ಶ್ರೀಯೋಗಿ ನಾರೇಯಣ ತಾತಯ್ಯನವರಿಗೆ ಸಮರ್ಪಣೆಯಾಗಲಿವೆ.