ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ಕಳೆದ 28 ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳು, ನಿಗಮ-ಮಂಡಳಿ ಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಇನ್ನೂ ಸಮರ್ಪಕವಾಗಿ ದೊರೆಯದಿರುವುದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶದಂತೆ ವೇತನ ಪರಿಷ್ಕರಣೆ ಜಾರಿಯಾಗಬೇಕಿದ್ದರೂ, ಹಲವು ಇಲಾಖೆಗಳ ಮುಖ್ಯಸ್ಥರು ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವುದರಿಂದ ಸುಮಾರು 4.5 ಲಕ್ಷ ಹೊರಗುತ್ತಿಗೆ ನೌಕರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಸರ್ಕಾರದ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳನ್ನು ನಿಭಾಯಿಸುವಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ. ಕಡಿಮೆ ವೇತನಕ್ಕೆ ದುಡಿಯುತ್ತಿದ್ದರೂ, ಕುಟುಂಬ ನಿರ್ವಹಣೆಯ ಸಂಕಷ್ಟ ಗಳ ನಡುವೆಯೂ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆಡಳಿತ ಯಂತ್ರ ಸುಗಮವಾಗಿ ನಡೆಯಲು ಹಗಲಿರುಳು ಶ್ರಮಿಸುತ್ತಿರುವ ಈ ನೌಕರರ ಬದುಕಿಗೆ ಭದ್ರತೆ ಹಾಗೂ ನ್ಯಾಯಯುತ ವೇತನ ದೊರೆಯಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ.
ಇದನ್ನೂ ಓದಿ: Chikkaballapur News: ಬಡವರ ಬದುಕಿಗೆ ಆಸರೆಯಾಗಲು 501 ಜೋಡಿ ಸಾಮೂಹಿಕ ವಿವಾಹ ಆಯೋಜನೆ
ಹೊರಗುತ್ತಿಗೆ ನೌಕರರ ಸಂಘಟನೆಗಳು ಕಾಲಕಾಲಕ್ಕೆ ನಡೆಸಿದ ಹೋರಾಟಗಳ ಫಲವಾಗಿ ರಾಜ್ಯ ಸರ್ಕಾರವು 2026ರ ಫೆಬ್ರವರಿ 25ರಂದು ಅಧಿಸೂಚನೆ ಸಂಖ್ಯೆ ಕಾಇ 411 ಐWಂ 2023ರ ಮೂಲಕ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರ ಅನ್ವಯ ರಾಜ್ಯದ 34 ಸರ್ಕಾರಿ ಇಲಾಖೆಗಳು ಹಾಗೂ 52 ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಪರಿಷ್ಕೃತ ವೇತನ ನೀಡಬೇಕಿದೆ.
ಆದರೆ, ಈ ಆದೇಶದ ಅನುಷ್ಠಾನದಲ್ಲಿ ಇಲಾಖೆಗಳ ನಡುವೆ ತಾರತಮ್ಯ ಕಂಡುಬರುತ್ತಿದೆ. ಕೆಪಿಟಿಸಿಎಲ್, ಬೆಸ್ಕಾಂ, ಅಲ್ಪಸಂಖ್ಯಾತರ ನಿರ್ದೇಶನಾಲಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಬೆರಳೆಣಿಕೆಯ ಇಲಾಖೆಗಳಲ್ಲಷ್ಟೇ ಪರಿಷ್ಕೃತ ವೇತನ ಪಾವತಿಸಲಾಗುತ್ತಿದೆ. ಉಳಿದ ಹಲವು ಇಲಾಖೆಗಳು ಸರ್ಕಾರದ ಆದೇಶವನ್ನು ಇನ್ನೂ ಜಾರಿಗೊಳಿಸದಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದೇ ಸರ್ಕಾರದ ಅಡಿಯಲ್ಲಿ ವಿವಿಧ ಇಲಾಖೆಗಳಲ್ಲಿ ಸಮಾನ ಸ್ವರೂಪದ ಕೆಲಸ ನಿರ್ವಹಿಸುವ ನೌಕರರಿಗೆ ಪರಿಷ್ಕೃತ ವೇತನದ ವಿಚಾರದಲ್ಲಿ ವಿಭಿನ್ನ ಮಾನದಂಡ ಅನುಸರಿಸುವುದು ನ್ಯಾಯ ಸಮ್ಮತವಲ್ಲ. ಸರ್ಕಾರವೇ ಅಧಿಕೃತವಾಗಿ ಹೊರಡಿಸಿರುವ ಆದೇಶ ಅನುಷ್ಠಾನಗೊಳ್ಳದಿದ್ದರೆ ಅದರ ಪ್ರಯೋಜನ ನೌಕರರಿಗೆ ತಲುಪುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಈಗಾಗಲೇ ಕಡಿಮೆ ವೇತನದಲ್ಲಿ ಜೀವನ ಸಾಗಿಸುತ್ತಿರುವ ಹೊರಗುತ್ತಿಗೆ ನೌಕರರು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಯ ಹೊರೆ ನಿಭಾಯಿಸಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ವೇತನ ಪರಿಷ್ಕರಣೆ ಜಾರಿಯಾಗದಿರುವುದು ಅವರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಂಚಾಲಕ ಗಂಗಾಧರ್ ಎನ್., ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಕೂಡಲೇ ಮಧ್ಯಪ್ರವೇಶಿಸಿ ಎಲ್ಲ ಇಲಾಖೆಗಳಲ್ಲೂ ಪರಿಷ್ಕೃತ ಕನಿಷ್ಠ ವೇತನ ಆದೇಶವನ್ನು ಜಾರಿಗೊಳಿಸು ವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಆದೇಶವನ್ನು ಎಲ್ಲಾ ಇಲಾಖೆಗಳಲ್ಲೂ ಜಾರಿಗೊಳಿಸದಿದ್ದರೆ ನೌಕರರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಅಸಹಕಾರ ಚಳವಳಿ ನಡೆಸಬೇಕಾಗುತ್ತದೆ. ಇದರಿಂದ ಉಂಟಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವರ್ಷಗಳ ಕಾಲ ಸರ್ಕಾರದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹೊರಗುತ್ತಿಗೆ ನೌಕರರಿಗೆ ಕೇವಲ ಭರವಸೆಗಳಲ್ಲ, ಅವರ ಶ್ರಮಕ್ಕೆ ತಕ್ಕ ವೇತನ ಮತ್ತು ಗೌರವ ದೊರೆಯಬೇಕು. ಸರ್ಕಾರದ ಆದೇಶ ಕಾಗದದಲ್ಲಷ್ಟೇ ಉಳಿಯದೆ, ಅರ್ಹ ಪ್ರತಿಯೊಬ್ಬ ನೌಕರನಿಗೂ ಅದರ ಪ್ರಯೋಜನ ತಲುಪುವಂತೆ ಮಾಡುವುದು ಆಡಳಿತದ ಜವಾಬ್ದಾರಿಯಾಗಿದೆ.
ಈಗಿರುವ ವೇತನ ಡಿಗ್ರೂಪ್‌ಗೆ ೧೦ಸಾವಿರ, ಡಿಟಿಒಗೆ-ಪರಿಷ್ಕೃತ ವೇತನ ಜಾರಿಯಾದಲ್ಲಿ ವಲಯ2 ರಲ್ಲಿ ಕೆಲಸ ಮಾಡುವವರಿಗೆ ಅತಿಕುಶಲವರ್ಗಕ್ಕೆ-29361.27ಪೈಸೆ, ಕುಶಲ-26744.87 ಪೈಸೆ, ಅರೆಕುಶಲ-24407 ಕೊಡಬೇಕು. ಆದರೆ ಈಗ 10,12,15 ಸಾವಿರ ಕೊಡುತ್ತಿದ್ದಾರೆ. ಇದು ಬಹಿರಂಗ ಶೋಷಣೆಯಾಗಿದೆ.ಎಲ್ಲಾ ಇಲಾಕೆಗಳಲ್ಲಿ ಪರಿಷ್ಕೃತ ವೇತನ ಜಾರಿ ಮಾಡಬೇಕು ಎಂದು ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.