ಅಗಲಗುರ್ಕಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ನಿರ್ಮಿಸಿರುವ ನೂತನ ಗ್ರಾಮ ಸೌಧ ಕಟ್ಟಡ ಉದ್ಘಾಟಿಸಿ ಹೇಳಿಕೆ
ಚಿಕ್ಕಬಳ್ಳಾಪುರ : ಮಹಾತ್ಮಾ ಗಾಂಧೀಜಿ ಅವರ ಗ್ರಾಮಸ್ವರಾಜ್ಯದ ಕನಸು ಗ್ರಾಮಗಳ ಅಭಿವೃದ್ದಿ ಯಲ್ಲಿ ಅಡಗಿದೆ. ಗ್ರಾಮಗಳ ಅಭಿವೃದ್ದಿಗೆ ಗ್ರಾಮ ಪಂಚಾಯಿತಿಗಳೇ ಕೇಂದ್ರ ಬಿಂದುಗಳಾಗಿವೆ. ಅಗಲಗುರ್ಕಿ ಗ್ರಾಪಂ ಆಡಳಿತ ಮಂಡಳಿ 1.7 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ಕಟ್ಟಿ ಲೋಕಾ ರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತೀಕ್ ಪಾಷ ಹೇಳಿದರು.
ತಾಲೂಕಿನ ಅಗಲಗುರ್ಕಿ ಗ್ರಾಮದ ಗ್ರಾಮಾಡಳಿತ ನಿರ್ಮಿಸಿರುವ ನೂತನ ಗ್ರಾಮಸೌಧ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು.
ಜಿಲ್ಲಾಡಳಿತ ಭವನದಲ್ಲಿ ಕೂಡ ಇಲಾಖೆಗಳಿಗೆ ಇಷ್ಟೊಂದು ಉತ್ತಮವಾದ ಕಚೇರಿ ಇಲ್ಲ. ಆಧುನಿಕತೆಗೆ ತಕ್ಕಂತೆ ಗ್ರಾಮಸೌಧ ಕಟ್ಟಡ ನಿರ್ಮಾಣವಾಗಿದೆ.ಗ್ರಾಮ ಸೌಧದ ಕಟ್ಟಡದಂತೆ ಇಲ್ಲಿನ ಆಡಳಿತವೂ ಕೂಡ ಜನಪರವಾಗಿರಲಿ,ಭವಿಷ್ಯದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ: Chikkamagaluru: ಹಿಂದೂ ಗೃಹಿಣಿ ಮನೆಯಲ್ಲಿ ಅರೆಬೆತ್ತಲಾಗಿ ಕಂಡುಬಂದ ಮುಸ್ಲಿಂ ಕಾಂಗ್ರೆಸ್ ಮುಖಂಡ, ಹಲ್ಲೆ
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಮಾತನಾಡಿ, ದೀಪದ ಕೆಳಗಿನ ಕತ್ತಲೆಯಂತೆ ಅಗಲಗುರ್ಕಿ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ಇರಲಿಲ್ಲ.ನಿವೇಶನದ ಕೊರತೆ ಎದ್ದು ಕಾಣುತ್ತಿತ್ತು. ಗ್ರಾಮದ ನಡುವೆ ಇದ್ದ ಹುಲ್ಲುಬನಿ ಕರಾಬು ಪರಿವರ್ತಿಸಿ ಜಾಗ ನೀಡಲಾಗಿದೆ. ಪ್ರಜಾಪ್ರಭುತ್ವ ಮೂಲ ಉದ್ದೇಶಕ್ಕೆ ಇಂಬು ನೀಡುವಂತೆ 1.7 ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಲಾಗಿದೆ. ಇದಕ್ಕಾಗಿ ಪಂಚಾಯಿತಿಯ ಎಲ್ಲಾ ನಾಗರಿಕರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
ಪಿಡಿಒ ಅಶೋಕ್ ಮಾತನಾಡಿ ಜಿಲ್ಲಾ ಕೇಂದ್ರದ ಬುಡದಲ್ಲಿರುವ ಅಗಲಗುರ್ಕಿ ಗ್ರಾಮ ಪಂಚಾ ಯಿತಿಗೆ ತನ್ನದೇ ಆದ ವಿಶಾಲವಾದ ಕಟ್ಟಡದ ಕೊರತೆಯಿತ್ತು. ನಾನು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಬಂದ ಮೇಲೆ ಆಡಳಿತ ಮಂಡಳಿಯ ಗಮನಕ್ಕೆ ಈ ವಿಚಾರವನ್ನು ತಂದು ನೂತನ ಕಟ್ಟಡ ನಿರ್ಮಾಣಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಯಿತು. ಈಗಿನ ಆಡಳಿತ ಮಂಡಳಿಯ ಸಹಕಾರದಿಂದ,ಕರವಸೂಲಿ ಉತ್ತಮವಾಗಿ ಮಾಡಿದ ಪರಿಣಾಮ ಕಟ್ಟಡ ನಿರ್ಮಾಣ ಸಾಧ್ಯವಾಯಿತು. 59 ಲಕ್ಷ ವರ್ಗ ಒಂದರಿಂದ ಪಡೆಯಲಾಗಿದೆ. 15ನೆ ಹಣಕಾಸು ಯೋಜನೆಯಿಂದ 10 ಲಕ್ಷ, ಹೀಗೆ ವಿವಿಧ ಮೂಲಗಳಿಂದ 1 ಕೋಟಿ 7 ಲಕ್ಷದಲ್ಲಿ ನೂತನ ಕಟ್ಟಡ ನಿರ್ಮಾಣ ಆಗಿದೆ. ಇದು ಆಗುವಂತೆ ಮಾಡಿದ ಎಲ್ಲ ಸದಸ್ಯರ ಅಧ್ಯಕ್ಷರ ಸಹಕಾರ. ಇಲಾಖೆಯ ಮೇಲಾಧಿಕಾರಿಗಳ ಸಹಕಾರ ಇದ್ದರಿಂದ ಇದು ಸಾಧ್ಯವಾಗಿದೆ ಎಂದರು.
ಹಿರಿಯ ಸದಸ್ಯ ಪ್ರೊ.ಚಂದ್ರಣ್ಣ ಮಾತನಾಡಿ 60/70ವರ್ಷಗಳ ಇತಿಹಾಸ ನಮ್ಮ ಪಂಚಾಯಿತಿಗೆ ಇದೆ.ಕೊರೋನಾ ಸಂದರ್ಭದಲ್ಲಿ ಕಟ್ಟಡ ಕಟ್ಟಲು ತೀರ್ಮಾನ ಮಾಡಿದರೂ ಕರವಸೂಲಿ, ಸ್ಥಳದ ಸಮಸ್ಯೆ, ಅನುದಾನದ ಕೊರತೆ ಎಲ್ಲವನ್ನೂ ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಮುಗಿಸಲು 2026 ಬಂದಿದೆ. ಈಗಲೂ ಒಳಗಿನ ಕೆಲಸ ಅಂದರೆ ಇಂಟೀರಿಯರ್ ಕೆಲಸ ಬಾಕಿ ಯಿಟ್ಟುಕೊಂಡೇ ಸಿವಿಲ್ ಕಾಮಗಾರಿ ಮುಗಿಸಿ ನಮ್ಮ ಅವಧಿ ಮುಗಿಯುವ ಸಂದರ್ಭ ಬಂದಿದ್ದ ರಿಂದ ಲೋಕಾರ್ಪಣೆ ಆಗಿದೆ. ಈಗಿನ ಅಧ್ಯಕ್ಷ ಗೋವಿಂದಸ್ವಾಮಿ ಉಪಾಧ್ಯಕ್ಷೆ ಶಿಲ್ಪ ಮಹೇಶ್ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಸ್ಮರಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷ ಎ.ಟಿ.ಗೋವಿಂದ ಸ್ವಾಮಿ ಉಪಾಧ್ಯಕ್ಷೆ ಶಿಲ್ಪ ಮಹೇಶ್ ಕಾರ್ಯ ಪಾಲಕ ಅಭಿಯಂತರ ರಘುನಾಥ ಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್, ಪ್ರವೀಣ್ ಕುಮಾರ್, ಅಶ್ವತ್ಥ ನಾರಾಯಣ, ರವಿಕುಮಾರ್, ಪಿಡಿಒ ಅಶೋಕ್, ಸೈಯದ್ ಖಲೀಮುಲ್ಲಾ ಕಾರ್ಯದರ್ಶಿ, ಕರ ವಸೂಲಿಗಾರ ರಾಮಾಂಜಿನಪ್ಪ, ಸಮಿತಿ ಸದಸ್ಯರಾದ ಅಭಿಲಾಷ್, ರಾಜಮ್ಮ, ಮುನಿರಾಜು, ಪಾಪಮ್ಮ, ದೀಪಶ್ರೀ, ನಾರಾಯಣ ಮೂರ್ತಿ, ತಮ್ಮೇಗೌಡ, ನರಸಿಂಹಪ್ಪ, ಪಂಕಜ, ಜ್ಯೋತಿ, ನಾಗಮಣಿ, ಜಗದೀಶ್, ಗಾಯಿತ್ರಿ, ಶಿಲ್ಪಾ, ರಾಮಕ್ಕ ಇದ್ದರು.
ಗುತ್ತಿಗೆದಾರ ಮಂಜುನಾಥ್, ದಿಲೀಪ್ ಕುಮಾರ್, ಪಿಡಿಓ ವಿಜಯೇಂದ್ರ , ತಾಂತ್ರಿಕ ಸಹಾಯಕ ಅಭಿಲಾಷ್ ಮತ್ತಿತರರು ಇದ್ದರು.