ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ವಾರದ ಒಳಗೆ ದಾಖಲೆ ರಹಿತ ಜನ ವಸತಿಗಳನ್ನು ಗುರ್ತಿಸಿ: ಜಿಲ್ಲಾಧಿಕಾರಿ ಜಿ. ಪ್ರಭು

ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಕೂಡ ಕೆಲವು ಕುಟುಂಬಗಳು ಈವರೆಗೂ ಶಾಶ್ವತ ನೆಲೆ ಇಲ್ಲದ ಹಾಗೆ ಜೀವನ ಸಾಗಿಸುತ್ತಿವೆ. ಆ ಹಿನ್ನೆಲೆಯಲ್ಲಿ ಸರ್ಕಾರ “ಕಂದಾಯ ಗ್ರಾಮ ಅಭಿಯಾನ” ವನ್ನು ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದೆ.

ಚಿಕ್ಕಬಳ್ಳಾಪುರ: ಕನಿಷ್ಠ 10 ಮನೆಗಳ ವಾಸವಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಒಂದು ವಾರದ ಒಳಗಾಗಿ ನಿಖರವಾಗಿ ಗುರುತಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ “ಕಂದಾಯ ಗ್ರಾಮ ಅಭಿಯಾನ”ದ ಪೂರ್ವ ಸಿದ್ದತಾ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಕೂಡ ಕೆಲವು ಕುಟುಂಬಗಳು ಈವರೆಗೂ ಶಾಶ್ವತ ನೆಲೆ ಇಲ್ಲದ ಹಾಗೆ ಜೀವನ ಸಾಗಿಸುತ್ತಿವೆ. ಆ ಹಿನ್ನೆಲೆಯಲ್ಲಿ ಸರ್ಕಾರ “ಕಂದಾಯ ಗ್ರಾಮ ಅಭಿಯಾನ” ವನ್ನು ಕೈಗೆತ್ತಿಗೊಂಡು ದಾಖಲೆ ರಹಿತ ಜನವಸತಿಗಳ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡಲು ಮುಂದಾಗಿದೆ. ಆದ್ದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಕರಾರುವಕ್ಕಾಗಿ ನಿಗದಿತ ಏಳು ದಿನಗಳ ಒಳಗಾಗಿ ಈಗಿರುವ ಗ್ರಾಮಗಳು, ಕಂದಾಯ ಗ್ರಾಮಗಳನ್ನು ಹೊರತು ಪಡಿಸಿ ದಾಖಲೆ ಇಲ್ಲದೆ ವಾಸ ಮಾಡುತ್ತಿರುವ ಜನವಸತಿ ಪ್ರದೇಶಗಳನ್ನು ಗುರುತಿಸುವಂತಹ ಕೆಲಸವನ್ನು ಕಂದಾಯ ಇಲಾಖೆ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ (RDPR) ಇಲಾಖೆ, ಸರ್ವೆ ಇಲಾಖೆ ಗಳು ಸಮನ್ವಯ ಸಾಧಿಸಿಕೊಂಡು ಒಂದು ತಂಡದ ರೀತಿ ಈ ಕಾರ್ಯವನ್ನು ಹೆಚ್ಚು ಅರ್ಥಪೂರ್ಣ ವಾಗಿ ಹಾಗೂ ಸಮರ್ಪಕವಾಗಿ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಗಳಿಗೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Chikkaballapur News: ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕು: ಜಿಲ್ಲಾಧಿಕಾರಿ ಜಿ.ಪ್ರಭು

ಜಿಲ್ಲೆಯಲ್ಲಿ ಪ್ರಸ್ತುತ 1,522 ಮೂಲ ಕಂದಾಯ ಗ್ರಾಮಗಳಿದ್ದು, ಈ ಪೈಕಿ 344 ಗ್ರಾಮಗಳನ್ನು ಕಂದಾಯ ಗ್ರಾಮ, ಉಪಗ್ರಾಮ ಹಾಗೂ ಗ್ರಾಮಠಾಣಾ ವಿಸ್ತರಣೆ ಎಂದು ಗುರ್ತಿಸಲಾಗಿದೆ. ಈ ಪ್ರದೇಶಗಳನ್ನು ಹೊರತುಪಡಿಸಿ ಬಾಕಿ ಇರುವ ದಾಖಲೆ ರಹಿತ ಜನವಸತಿಗಳನ್ನು ಗುರುತಿಸುವ ಕೆಲಸ ಜಿಲ್ಲೆಯಲ್ಲಿ ತ್ವರಿತವಾಗಿ ಆಗಬೇಕಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಗಳು, ಕಟ್ಟಡಗಳು ಮತ್ತು ಪ್ರದೇಶಗಳನ್ನೂ ಸೇರಿಸಿ ಕೊಂಡು ಕನಿಷ್ಠ 10 ದಾಖಲೆ ರಹಿತ ಮನೆಗಳು ಇದ್ದಲ್ಲಿ ಆ ಮಾಹಿತಿಯನ್ನು ನಿಗದಿತ ನಮೂನೆ ಯಲ್ಲಿ ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಈ ಬಗ್ಗೆ ತಾಲ್ಲೂಕು ತಹಸೀಲ್ದಾರ್ ಗಳು, ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡುವ ಜೊತೆಗೆ ಯಾದೃಚ್ಛಿಕವಾಗಿ ಕ್ಷೇತ್ರ ವೀಕ್ಷಣೆ ಮಾಡಿ ಮೇಲುಸ್ತುವಾರಿ ಮಾಡಬೇಕು ಎಂದರು.

 ದಾಖಲೆ ರಹಿತ ಜನವಸತಿಗಳನ್ನು ಗುರ್ತಿಸುವಾಗ ತಾಂತ್ರಿಕ ಸಹಾಯ ಪಡೆದುಕೊಳ್ಳಬೇಕು. ಕಳೆದ 15 ವರ್ಷಗಳ ಉಪಗ್ರಹ ಆಧಾರಿತ ಭಾವಚಿತ್ರಗಳನ್ನು ತೆಗೆದುಕೊಂಡು ಪರಿಶೀಲಿಸಬೇಕು. ಕಳೆದ 10 ರಿಂದ 15 ವರ್ಷಗಳಿಂದ ಅಂತಹ ಜನವಸತಿಗಳಲ್ಲಿ ಜನರು ವಾಸಮಾಡುಗುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಶಾಶ್ವತವಾಗಿ ವಾಸಿಸಲು ಇಚ್ಚೆಪಟ್ಟು ಕಟ್ಟಡಗಳನ್ನು, ಮನೆಗಳನ್ನು ಶಾಶ್ವತ ವಾಗಿ ನಿರ್ಮಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಬೇಕು. ತಾತ್ಕಾಲಿಕವಾಗಿ ನಿರ್ಮಿಸಿರುವ ಕಚ್ಚಾ ಮನೆಗಳನ್ನು ಪರಿಗಣಿಸಬಾರದು. ನಿಜವಾಗಿಯೂ ಅರ್ಹರಿರುವವರಿಗೆ ಹಕ್ಕುಪತ್ರಗಳನ್ನು ವಿತರಣೆ ಆಗುವ ರೀತಿಯಲ್ಲಿ ಕಾನೂನು ರೀತ್ಯ ಕ್ರಮವಹಿಸಲು ತಹಸೀಲ್ದಾರ್ ಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಭೂ ದಾಖಲೆಗಳ ಉಪನಿರ್ದೇಶಕ ಮಂಜುನಾಥ ತವಣೆ, ಎಲ್ಲ ತಹಸೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸರ್ವೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಈ ವೇಳೆ ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳಿಂದ ಕಂದಾಯ ಗ್ರಾಮ ಅಭಿಯಾನವನ್ನು ಯಶಸ್ವಿಗೊಳಿಸುವ ಸಂಬಂಧ ಸಲಹೆಗಳನ್ನು ಸ್ವೀಕಾರ ಮಾಡಿ ಅಗತ್ಯ ಸಹಕಾರವನ್ನು ನೀಡುವಂತೆ ಕೋರಿದರು.