ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟವಿಲ್ಲದೆ ಅನ್ಯ ಮಾರ್ಗ ವಿಲ್ಲ. ನಮ್ಮ ಹೋರಾಟಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಲುಪುವ ರೀತಿಯಲ್ಲಿ ಕಟ್ಟಿ ಬೆಳಸಬೇಕೆಂಬ ಉದ್ದೇಶದಿಂದ ಮತ್ತು ಶುದ್ದ ಕುಡಿಯುವ ನೀರು ನೀಡುವಲ್ಲಿ ಸರ್ಕಾರ ವಿಫಲ ಖಂಡಿಸಿ ಗಾಂಧಿ ಜಯಂತಿಯಂದು ಆರಂಭಿಸಿರುವ ಜಲಾಗ್ರಹ ಜನ ಜಾಗೃತಿ ಸಮಾವೇಶದ ಮೂರನೇ ಸಭೆಯನ್ನು ಕೋಲಾರ ನಗರದ ಸರ್ಕಾರಿ ಕಾಲೇಜು ಸರ್ಕಲ್ ನಲ್ಲಿ ಜ.17ರಂದು ಬೆಳಿಗ್ಗೆ 10.30ಕ್ಕೆ ಸರ್ವೋಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರು ಹಾಗೂ ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಜಸ್ಟೀಸ್ ವಿ.ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ದರು.
ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿಗಾಗಿ ಕಳೆದ ಮೂರು ದಶಕಗಳಿಂದ ನಾನಾ ರೀತಿಯ ಹೋರಾಟ ಮಾಡಿದ್ದೇವೆ. ಇದರಿಂದ ಬೆಂಗಳೂರಿನ ತ್ಯಾಜ್ಯ ನೀರಾದ ಕೆ.ಸಿ.ವ್ಯಾಲಿ, ಹೆಚ್.ಎನ್.ವ್ಯಾಲಿ, ಈಗ ವೃಷಭಾವತಿ ವ್ಯಾಲಿ ನೀರನ್ನು ಕೇವಲ ಎರಡು ಬಾರಿ ಸಂಸ್ಕರಿಸಿ ಮೂರು ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿದ್ದಾರೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಅಂತರ್ಜಲ ಮರುಪೂರಣ ಮಾಡುವ ನೆಪದಲ್ಲಿ ಬೆಂಗಳೂರು ನಗರದ ಅರೆಸಂಸ್ಕರಿತ ತ್ಯಾಜ್ಯ ನೀರನ್ನು ಕೆಲವು ಆಯ್ದ ಕೆರೆಗಳಿಗೆ ಹರಿಸುತ್ತಿರುವುದರಿಂದ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ. ಬರಪೀಡಿತ ಜಿಲ್ಲೆಗಳ ನಾಗರೀಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನೆಪದಲ್ಲಿ 24 ಸಾವಿರ ಕೋಟಿ ಖರ್ಚು ಮಾಡುತ್ತಿರುವ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ಯಿಂದ ಇಲ್ಲಿಯವರೆಗೂ ಒಂದು ಬೊಗಸೆ ಕುಡಿಯುವ ನೀರು ಪೂರೈಸಲಾಗಿಲ್ಲ. ಇದಲ್ಲದೆ ಜನತೆಗೆ ನೀರೇ ಇಲ್ಲದ ಎತ್ತಿನ ಹೊಳೆ ಯೋಜನೆಯ ಖಾಲಿ ಪೈಪುಗಳ ಪ್ರದರ್ಶನವಾಗುತ್ತಿದೆ.
ಪೈಪುಗಳ ಮೂಲಕ ಬಂದ ಸರ್ಕಾರಗಳ ಜನ ಪ್ರತಿನಿಧಿಗಳು ಹಣ ಹೊಳೆ ಹರಿಸಿಕೊಳ್ಳುತಿದ್ದಾರೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ದೀಕರಣ ಆಗಬೇಕು. ರಾಜಕಾರಣಿಗಳ ಇಚ್ಚಾ ಶಕ್ತಿ ಕೊರತೆಯಿಂದ ಶುದ್ದೀಕರಣವಾಗದ ಕಾರಣ ನಾನಾ ಸಮಸ್ಯೆಗಳು ಆವರಿಸಿವೆ ಎಂದು ಹೇಳಿದರು.
ಎರಡೇ ಹಂತಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆಲವು ಆಯ್ದ ನೀರಾವರಿ ಕೆರೆಗಳಿಗೆ ಹರಿಸುತ್ತಿದೆ. ಇದರಿಂದ ಅಂತರ್ಜಲ ವಿಷಪೂರಿತವಾಗಿ ಜನ ಮತ್ತು ಜಾನುವಾರುಗಳ ಜೀವಕ್ಕೆ ಸಂಚಕಾರ ಉಂಟಾಗಲಿದೆ.ಕನಿಷ್ಠ ಕೃಷ್ಣಾ ನದಿಯ ನಮ್ಮ ಪಾಲಿನ ನೀರನ್ನು ಕೃಷ್ಣಾ - ಪೆನ್ನಾರ್ ಜೋಡಿಸುವ ಮೂಲಕ ಬರಪೀಡಿತ ಜಿಲ್ಲೆಗಳ ನೀರಿನ ಬವಣೆಯನ್ನು ಶಾಶ್ವತವಾಗಿ ಪರಿಹರಿಸ ಬಹುದಾದರೂ ಸರ್ಕಾರಗಳು ಅದರ ಕಡೆ ಗಮನಹರಿಸುತ್ತಿಲ್ಲ.
ಎತ್ತಿನ ಹೊಳೆ ಮತ್ತುಬೆಂಗಳೂರಿನ ಎಚ್‌ಎನ್ ವ್ಯಾಲಿ,ಕೆ ಸಿ ವ್ಯಾಲಿ, ವೃಷಭಾವತಿ ವ್ಯಾಲಿಗಳಿಂದ ಎರಡೇ ಹಂತಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆಲವು ಆಯ್ದ ನೀರಾವರಿ ಕೆರೆಗಳಿಗೆ ಹರಿಸುತ್ತಿರುವ ಯೋಜನೆಗಳ ತಾಂತ್ರಿಕ , ಆರ್ಥಿಕ ತನಿಖೆ ಆಗಬೇಕೆಂದು ಸರ್ಕಾರವನ್ನು ಆಗ್ರಹಿಸಿಲು ಶಾಶ್ವತ ನೀರಾವರಿ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿದಿಗಳು, ಕನ್ನಡ ಪರ, ರೈತಪರ, ದಲಿತ ಪರ ಮತ್ತು ಕಾರ್ಮಿಕ, ಮಹಿಳಾ ಮತ್ತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕಾಗಿ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ನಾಗದೇನಹಳ್ಳಿ ನಾರಾಯಣ ಸ್ವಾಮಿ, ಮಳ್ಳೂರು ಹರೀಶ್, ಸುಷ್ಮಾಶ್ರೀನಿವಾಸ್, ಆನಂದಪ್ಪ, ಸುಧೀರ್,ಮತ್ತಿತರರು ಇದ್ದರು.