ಚಿಕ್ಕಬಳ್ಳಾಪುರ: ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಯ ಫೌಂಡೇಶನ್ ವತಿಯಿಂದ ಮಂಚೇನಹಳ್ಳಿ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಕ್ತದ ಮಾದರಿಗಳು ಹಾಗೂ ಇತರ ವೈದ್ಯಕೀಯ ಸಾಮಗ್ರಿಗಳನ್ನು ಸಂರಕ್ಷಿಸಲು ಅಗತ್ಯವಿರುವ ಫ್ರಿಜ್‌ನ್ನು ಉಚಿತವಾಗಿ ಕೊಡುಗೆಯಾಗಿ ನೀಡಲಾಯಿತು. ಜೊತೆಗೆ ಆಸ್ಪತ್ರೆಗೆ ಆಗಮಿಸುವ ಗರ್ಭಿಣಿಯರು ಹಾಗೂ ವೃದ್ಧರು ಕುಳಿತುಕೊಳ್ಳಲು ಆಸನಗಳನ್ನೂ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಫೌಂಡೇಶನ್‌ನ ಜಯಕುಮಾರ್, ಈ ಹಿಂದೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಪ್ರಯೋಗಾಲಯದಲ್ಲಿ ಒಂದೇ ಫ್ರಿಜ್ ಇದ್ದು ಅದು ಅಗತ್ಯಕ್ಕೆ ಸಾಲುತ್ತಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಂದು ಫ್ರಿಜ್‌ನ್ನು ಒದಗಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳಿವೆ. ಪ್ರಸ್ತುತ ಒಬ್ಬ ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿರುವುದರಿಂದ ರೋಗಿಗಳು ಗಂಟೆಗಟ್ಟಲೆ ಕಾಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಗರ್ಭಿಣಿಯರು ಹಾಗೂ ವೃದ್ಧರಿಗೆ ಸಮರ್ಪಕ ವಾಗಿ ಕುಳಿತುಕೊಳ್ಳುವ ವ್ಯವಸ್ಥೆಯೂ ಇಲ್ಲದ ಕಾರಣ ಆಸನಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Chinthamani News: ಗ್ರಾಮಗಳ ಅಭಿವೃದ್ಧಿಗಾಗಿ ನಿಲ್ಲದ ಹೋರಾಟ: ಮೂರನೇ ಹಂತದ ಪಾದಯಾತ್ರೆಗೆ ಅನುಮತಿ ಕೋರಿದ ಮಂಜುನಾಥ್
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಕ್ಷಣ ಗಮನಹರಿಸಿ ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಬೇಕು. ಶಾಸಕ ಪ್ರದೀಪ್ ಈಶ್ವರ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸು ತ್ತಿರುವುದನ್ನು ಉಲ್ಲೇಖಿಸಿದ ಅವರು, ಅವರಿಗೆ ಮಾಸಿಕ ವೇತನ ಸೇರಿದಂತೆ ಎಲ್ಲಾ ನ್ಯಾಯಸಮ್ಮತ ಸೌಲಭ್ಯಗಳನ್ನು ಸರ್ಕಾರ ಶೀಘ್ರವೇ ಒದಗಿಸಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯ ಕುರಿತು ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಜಯಕುಮಾರ್ ತಿಳಿಸಿದರು.