ಮಾರ್ಚ್.೮ ರಂದು ರಾಷ್ಟ್ರೀಯ ಲೋಕ ಅದಾಲತ್ ಸದುಪಯೋಗ ಪಡೆದುಕೊಳ್ಳಲು ನ್ಯಾಯಾಧೀಶರ ಕರೆ
ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗುತ್ತದೆ.ಸಣ್ಣ-ಪುಟ್ಟ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡರೆ ಇತರೆ ಮೊಕದ್ದಮೆಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ


ಚಿಂತಾಮಣಿ: ನ್ಯಾಯಾಲಗಳಲ್ಲಿನ ಮೊಕದ್ದಮೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದು ಹಾಗೂ ಕಕ್ಷಿದಾರರಿಗೆ ಸಾಧ್ಯವಾದಷ್ಟು ಬೇಗ ನ್ಯಾಯ ಒದಗಿಸುವ ಉದ್ದೇಶದಿಂದ ಎಲ್ಲ ಹಂತ ಗಳಲ್ಲೂ ರಾಷ್ಟ್ರೀಯ ಲೋಕ ಅದಾಲತ್ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀರಾದ ನಾಗವೇಣಿ ರವರು ತಿಳಿಸಿದರು.
ಲೋಕ ಅದಾಲತ್ ಕೈಗೊಳ್ಳುವ ಸಲುವಾಗಿ ನ್ಯಾಯಾಲಯದಲ್ಲಿ ಕರೆದಿದ್ದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದರು.
ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗುತ್ತದೆ.ಸಣ್ಣ-ಪುಟ್ಟ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡರೆ ಇತರೆ ಮೊಕದ್ದಮೆಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
ಇದನ್ನೂ ಓದಿ: Chikkaballapur News: ಅಧಿಕಾರಿಗಳು ದರ್ಪ ಬಿಟ್ಟು ನ್ಯಾಯಯುತ ತೆರವುಗೊಳಿಸಿ
ಮೊಕದ್ದಮೆಗಳು ಕಡಿಮೆಯಾದಷ್ಟೂ ನ್ಯಾಯದಾನ ತ್ವರಿತವಾಗಿ ಸಿಗುತ್ತದೆ.ಲೋಕ ಅದಾಲತ್ ಗಳಲ್ಲಿ ರಾಜಿ ಮೂಲಕ ಇತ್ಯರ್ಥ ಮಾಡಿಕೊಂಡರೆ ಜನರಿಗೂ ಒಳ್ಳೆಯದಾಗುತ್ತದೆ, ಸಮಾಜಕ್ಕೂ ಅನುಕೂಲವಾಗುತ್ತದೆ ಎಂದರು.
ವಿದೇಶಗಳಲ್ಲಿ ಇಂತಿಷ್ಟು ಜನರಿಗೆ ಒಬ್ಬ ನ್ಯಾಯಾಧೀಶ ಎಂದು ಪರಿಮಿತಿ ಇರುತ್ತದೆ. ನಮ್ಮ ದೇಶ ದಲ್ಲಿ ಆ ರೀತಿಯ ಮಿತಿ ಇಲ್ಲ.ತ್ವರಿತವಾಗಿ ನ್ಯಾಯ ನೀಡಲು ನ್ಯಾಯಾಲಯಗಳಿಂದ ಸಾಧ್ಯ ವಾಗುವಂತಹ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ 2-3 ತಿಂಗಳಿಗೊಮ್ಮೆ ಲೋಕ ಅದಾಲತ್ ಕೈಗೊಳ್ಳುವುದರಿಂದ ಬಹಳಷ್ಟು ಪ್ರಕರಣಗಳು ಮುಕ್ತಾಯವಾಗುತ್ತವೆ ಎಂದು ತಿಳಿಸಿ ದರು.
ಸುಪ್ರೀಂ ಕೋರ್ಟ್ ಮತ್ತು ಉಚ್ಚ ನ್ಯಾಯಾಲಯದ ಆದೇಶದ ಹಾಗೂ ಸಹಕಾರದಿಂದ ಲೋಕ ಅದಾಲತ್ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡ ಪ್ರಕರಣಗಳಿಗೆ ನ್ಯಾಯಾಲಯದ ತೀರ್ಪುಗಳಂತೆ ಪರಿಗಣಿಸಲಾಗುತ್ತದೆ. ನ್ಯಾಯಾಲಯದಲ್ಲಿ ತೀರ್ಮಾನವಾದರೆ ಮುಂದಿನ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಬಹುದು. ಲೋಕ ಅದಾಲತ್ ನಲ್ಲಿ ತೀರ್ಮಾನವಾದ ಪ್ರಕರಣಗಳು ಮುಕ್ತಾಯವಾಗುತ್ತವೆ. ಹಿರಿಯ ವಕೀಲರು ಯಾವ ಒತ್ತಾಯ ವೂ ಇಲ್ಲದೆ ಮಾರ್ಗದರ್ಶನ ಮಾಡುತ್ತಾರೆ ಎಂದು ನುಡಿದರು.
ನ್ಯಾಯಾಲಯಗಳಿಗೆ ಅಲೆಯುವ ಶ್ರಮ,ನ್ಯಾಯಾಲಯದ ಶುಲ್ಕ, ವಕೀಲರ ಶುಲ್ಕಗಳು ಉಳಿತಾಯ ವಾಗುತ್ತವೆ. ಹಣ,ಶ್ರಮ, ಸಮಯ ಉಳಿತಾಯವಾಗುತ್ತದೆ. ರಾಜೀ ಸಂಧಾನದ ಮೂಲಕ ತೀರ್ಮಾನ ಮಾಡಿಕೊಳ್ಳುವುದರಿಂದ ಉತ್ತಮ ಬಾಂಧವ್ಯವೂ ಇರುತ್ತದೆ. ಪೊಲೀಸ್ ಇಲಾಖೆ, ಬ್ಯಾಂಕುಗಳ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸಹಕಾರ ನೀಡಬೇಕೆಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲ್ಲೂಕು ಕಾನೂನು ಸೇವಾ ಸಮಿತಿಯ ಪಿ.ಎಂ.ಪ್ರಕಾಶ್ ರವರು ಮಾತನಾಡಿ ರಾಜ್ಯ ಸೇವಾ ಕಾನೂನು ನಿರ್ದೇಶನಾಲಯದ ಸೂಚನೆಯಂತೆ ಮಾರ್ಚ್ 8 ರಂದು ನಗರದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗುತ್ತದೆ.
ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಆಸ್ತಿಗೆ ಸಂಬಂಧಿಸಿದಂತ ಪ್ರಕರಣಗಳು ಚೆಕ್ ಸಂಬಂಧ ಪಟ್ಟಂತ ಪ್ರಕರಣಗಳು ವಿದ್ಯುತ್ ಗೆ ಸಂಬಂಧಪಟ್ಟಂತ ಪ್ರಕರಣಗಳು ಹಾಗೂ ಪೂರ್ವ ವ್ಯಾಜ್ಯ ಪ್ರಕರಣಗಳು ಇತ್ಯರ್ಥಪಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿರುತ್ತದೆ.
ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕಾಗಿ ಎಲ್ಲ ಇಲಾಖೆಗಳು,ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್,ಕಾರ್ಯದರ್ಶಿ ಆರ್ ಎಸ್ ಶ್ರೀನಾಥ್ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಗಳು ಮತ್ತು ಬ್ಯಾಂಕ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.