ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಚೇಳೂರಿನಲ್ಲಿ ಸಿವಿಲ್ ಹಾಗೂ ಜೆಎಂಎಫ್‌ಸಿ ಇಟಿನೇರರಿ ನ್ಯಾಯಾಲಯ ಉದ್ಘಾಟಿಸಿ ನ್ಯಾ.ಹಂಚಾಟೆ ಸಂಜೀವ ಕುಮಾರ್ ಹೇಳಿಕೆ

ನ್ಯಾಯಾಂಗ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಇಂತಹ ಇಟಿನೇರರಿ ನ್ಯಾಯಾಲಯಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ನ್ಯಾಯ ಕ್ಕಾಗಿ ದೂರದ ಪಟ್ಟಣಗಳಿಗೆ ತೆರಳಬೇಕಾದ ಪರಿಸ್ಥಿತಿ ಕಡಿಮೆಯಾಗಬೇಕು. ಜನರಿಗೆ ಸುಲಭವಾಗಿ, ತ್ವರಿತವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ದೊರೆಯುವಂತಾಗಬೇಕು

ಚೇಳೂರು: ನ್ಯಾಯಾಂಗದ ಮೇಲೆ ಜನತೆ ಇಟ್ಟಿರುವ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲೆಯ ಗಡಿ ತಾಲೂಕುಗಳಲ್ಲಿ ನೂತನ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ(High Court of Karnataka)ದ ಮುಖ್ಯ ನ್ಯಾಯ ಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಹಂಚಾಟೆ ಸಂಜೀವ ಕುಮಾರ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದ ಮಾನಸ ಎಜುಕೇಷನಲ್ ಟ್ರಸ್ಟ್‌ನ ಪಿಯು ಕಾಲೇಜು ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸಿವಿಲ್ ಹಾಗೂ ಜೆಎಂಎಫ್‌ಸಿ ಇಟಿನೇರರಿ ನ್ಯಾಯಾಲಯವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಮಾರುಕಟ್ಟೆ ಮೌಲ್ಯ ಪರಿಗಣಿಸಿ ಸೂಕ್ತ ಪರಿಹಾರ ನೀಡಲು ಕ್ರಮ: ಜಿ.ಪ್ರಭು

ನ್ಯಾಯಾಂಗ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಇಂತಹ ಇಟಿನೇರರಿ ನ್ಯಾಯಾಲಯಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ನ್ಯಾಯಕ್ಕಾಗಿ ದೂರದ ಪಟ್ಟಣಗಳಿಗೆ ತೆರಳಬೇಕಾದ ಪರಿಸ್ಥಿತಿ ಕಡಿಮೆಯಾಗಬೇಕು. ಜನರಿಗೆ ಸುಲಭವಾಗಿ, ತ್ವರಿತವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ದೊರೆಯುವಂತಾಗಬೇಕು ಎಂದರು.

ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಮೂಲಸೌಕರ್ಯಗಳ ಅಭಿವೃದ್ಧಿ ಅತ್ಯಂತ ಅಗತ್ಯ ವಾಗಿದೆ. ನ್ಯಾಯಾಲಯಗಳ ಕಟ್ಟಡ, ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನ್ಯಾಯದಾನ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿ ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

1175305 ok

ಚೇಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಈ ನ್ಯಾಯಾಲಯದಿಂದ ಹೆಚ್ಚಿನ ಅನುಕೂಲವಾಗಲಿದೆ. ಸಣ್ಣಪುಟ್ಟ ಪ್ರಕರಣಗಳಿಗಾಗಿ ದೂರದ ಪ್ರದೇಶಗಳಿಗೆ ತೆರಳುವ ಅವಶ್ಯಕತೆ ತಪ್ಪಲಿದ್ದು, ಸ್ಥಳೀಯವಾಗಿಯೇ ನ್ಯಾಯ ಪಡೆಯಲು ಅವಕಾಶ ದೊರೆಯಲಿದೆ. ನ್ಯಾಯಾಲಯ ಸ್ಥಾಪನೆಯಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.

ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಸರ್ಕಾರ ಹಾಗೂ ನ್ಯಾಯಾಂಗದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಜಾಗ ಮತ್ತು ಮೂಲಸೌಕರ್ಯ ಒದಗಿಸುವುದು ಪ್ರಮುಖವಾಗಿದೆ. ಚೇಳೂರು ಹಾಗೂ ಮಂಚೇನ ಹಳ್ಳಿ ಭಾಗದಲ್ಲಿ ನ್ಯಾಯಾಲಯಗಳಿಗಾಗಿ ತಲಾ ಐದು ಎಕರೆ ಜಮೀನನ್ನು ಜಿಲ್ಲಾಡಳಿತ ನೀಡಿದೆ ಎಂದು ಹೇಳಿದರು.

ವಕೀಲರು ಕೇವಲ ವೃತ್ತಿಪರ ಜವಾಬ್ದಾರಿಗೆ ಸೀಮಿತವಾಗದೆ, ಸಮಾಜದ ದುರ್ಬಲ ವರ್ಗದ ಜನರಿಗೆ ಕಾನೂನು ಅರಿವು ಮೂಡಿಸುವ ಹಾಗೂ ಅವರಿಗೆ ನ್ಯಾಯ ದೊರಕಿಸಿಕೊಡುವ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಬೇಕು. ಕಾನೂನು ಸೇವೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರಾಘವೇಂದ್ರ ಸೀತಾ ರಾಮ ಶ್ರೀವತ್ಸ, ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್(Chikkaballapur MP Dr. K. Sudhakar), ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(S N Subbareddy), ಜಿಲ್ಲಾಧಿಕಾರಿ ಜಿ. ಪ್ರಭು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ನ್ಯಾಯಾಧೀಶರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಕೀಲರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.