ಚಿಂತಾಮಣಿ: ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಶ್ರೀಕ್ಷೇತ್ರ ಕೈವಾರದಲ್ಲಿ ತ್ರಿಕಾಲಜ್ಞಾನಿ, ಸಂತ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ 191ನೇ ಜೀವ ಸಮಾಧಿ ಪ್ರವೇಶ ಪರ್ವ ಆರಾಧನಾ ಮಹೋತ್ಸವವು ಜೂ.17ರಂದು ನೆರವೇರಲಿದೆ. ಆರಾಧನೆಯ ಪರ್ವ ಮಹೋತ್ಸವದ ದಿನದಂದು ಪ್ರಾತ:ಕಾಲ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತದೆ.
ತಾಳೆಗರಿಗಳಿಗೆ ವಿಶೇಷ ಪೂಜೆ: ಸದ್ಗುರು ತಾತಯ್ಯನವರು ರಚಿಸಿರುವ ತಾಳೆಗರಿಗಳನ್ನು ಮಠ ದಲ್ಲಿ ಸಂರಕ್ಷಿಸಿ ಇಡಲಾಗಿದೆ. ತಾಳೆಗರಿಗಳು ಆರಾಧನೆಯಂದು ಮಾತ್ರ ನೋಡಲು ಸಿಗುತ್ತದೆ. ಆರಾಧನಾ ಮಹೋತ್ಸವದ ಪ್ರಯುಕ್ತ ಸದ್ಗುರು ಕೈವಾರ ತಾತಯ್ಯನವರು ರಚಿಸಿರುವ ಕಾಲಜ್ಞಾನ, ಕೀರ್ತನೆ, ಶತಕಗಳ ಮೂಲ ತಾಳೆಗರಿಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುವುದು.
ಬೆಳಿಗ್ಗೆ 8 ಗಂಟೆಗೆ ಸದ್ಗುರು ತಾತಯ್ಯನವರ ಉತ್ಸವ ವಿಗ್ರಹವನ್ನು ಹಾಗೂ ತಾಳೆಗರಿಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ವಿಶೇಷ ಮೆರವಣಿಗೆಯೊಂದಿಗೆ ಕರೆತರಲಾಗುವುದು.
ಇದನ್ನೂ ಓದಿ: Chinthamani News: ಚೀಮಲಗುಟ್ಟ ಗ್ರಾಮದ ಭೂಮಿ ವಿಚಾರದಲ್ಲಿ ಸುಳ್ಳು ಆರೋಪ: ಕೋಡಿಗಲ್ ರಮೇಶ್ ಆಕ್ರೋಶ
ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟವಧಾನ ಸೇವೆ, ಪೂಜಾ ಕೈಂಕರ್ಯಗಳನ್ನು ನೆರವೇರಿಸ ಲಾಗುತ್ತದೆ. ಪ್ರತಿವರ್ಷದಂತೆ ಈ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಸಾಧು-ಸತ್ಪುರುಷರಿಗೆ ಕಾಷಾಯ ವಸ್ತçವನ್ನು ಉಚಿತವಾಗಿ ನೀಡಲಾಗುತ್ತದೆ.
ಸದ್ಗುರು ತಾತಯ್ಯನವರಿಗೆ 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಸಮರ್ಪಿಸಿ, ತಾತಯ್ಯನವರ ಗುರುಚಿಂತನಾ ಸಂದೇಶವನ್ನು ನೀಡುವರು.
ಆರಾಧನೆಯ ಮುನ್ನ ದಿನವಾದ ಇಂದು (ಜೂ.16 ಮಂಗಳವಾರ) ಬೆಳಿಗ್ಗೆ 10 ಗಂಟೆಗೆ ವಿಶೇಷ ಹೋಮವನ್ನು ನೆರವೇರಿಸಲಾಗುವುದು. ಇಂದು (ಮಂಗಳವಾರ ಜೂ.16)ರಾತ್ರಿ ಕ್ಷೇತ್ರದ ಭಜನಾ ಮಂದಿರದಲ್ಲಿ ಅಖಂಡ ನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮಗಳು ನಡೆಯುತ್ತದೆ.
ತಿರುಮಲದಲ್ಲಿ ತಾತಯ್ಯನವರ ಸ್ಮರಣೆ: ತಿರುಮಲ ತಿರುಪತಿ ದೇವಸ್ಥಾನಂ, ತಿರುಪತಿಯ ಬೆಟ್ಟದ ಮೇಲಿರುವ ನಾದನೀರಾಜನಂ ಸಾಂಸ್ಕೃತಿಕ ವೇದಿಕೆಯಲ್ಲಿ ತಾತಯ್ಯ ಅವರ ಸ್ಮರಣೆಯಲ್ಲಿ ಕಾರ್ಯ ಕ್ರಮ ನಡೆಯಲಿದೆ.
ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ 191ನೇ ಆರಾಧನಾ ಮಹೋತ್ಸವದ ಅಂಗವಾಗಿ ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರಿಂದ ದಿನಾಂಕ 18.6.2026 ಗುರುವಾರದಂದು ಸಂಜೆ 6 ಗಂಟೆಗೆ ಕೈವಾರ ತಾತಯ್ಯನವರ ಕೀರ್ತನೆಗಳ ಗಾಯನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.