ಚಿಕ್ಕಬಳ್ಳಾಪುರ: ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆ ಗಳಾದ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಸಂಚಾರಿ ಜಾಥಾ ವಾಹನಕ್ಕೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ಅವರು ಶನಿವಾರ ಜಿಲ್ಲಾಡಳಿತ ಭವನದ ಮುಂಭಾಗದಿಂದ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಲು ಈ ಜಾಗೃತಿ ಸಂಚಾರಿ ವಾಹನ ವನ್ನು ಸಿದ್ದಪಡಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸಂಚರಿಸುವ ಮೂಲಕ ಅರಿವು ಮೂಡಿಸಲು ಉದ್ದೇಶಿಸಲಾಗಿದೆ.
ಈ ವಾಹನವು ಇಂದಿನಿಂದ ಐದು ದಿನಗಳ ವರೆಗೆ ಜಿಲ್ಲೆಯಲ್ಲಿನ ವಿವಿಧ ವಾರ್ಡ್ ಗಳು, ಗ್ರಾಮಗಳಲ್ಲಿ ಸಂಚರಿಸಲಿದೆ. ಪಂಚ ಗ್ಯಾರಂಟಿ ಯೋಜನೆಗಳು ಈಗಾಗಲೇ ಬಹುತೇಕ ಎಲ್ಲರನ್ನು ತಲುಪಿವೆ. ಅನಿವಾರ್ಯ ಕಾರಣಗಳಿಂದ ಈವರೆಗೆ ಈ ಯೋಜನೆಗಳಿಂದ ಹೊರಗುಳಿದಿದ್ದರೆ ಅಂತಹವರನ್ನು ಗುರಿಯಾಗಿಸಿಕೊಂಡು ಈ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: Chikkaballapur News: ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ರೆಡ್ಡಿ ಆಯ್ಕೆ
ಆದ್ದರಿಂದ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ಯಾರಾದರೂ ಈವರೆಗೂ ವಂಚಿತ ರಾಗಿದ್ದರೆ ನನ್ನ ಕಚೇರಿಯಲ್ಲಿಯನ್ನಾಗಲಿ ಅಥವಾ ಹತ್ತಿರದ ಸಕ್ಷಮ ಪ್ರಾಧಿಕಾರಗಳನ್ನು ಹಾಗೂ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕ ಮಾಡಿ ಈ ಯೋಜನೆಗಳಡಿ ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು. ಈ ಸಂಚಾರಿ ವಾಹನದಲ್ಲಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿಗಳನ್ನು ಬಿತ್ತಿ ಪತ್ರದ ರೂಪದಲ್ಲಿ ಅಳವಡಿಸಲಾಗಿದೆ ಜೊತೆಗೆ ಗೊಟ್ಲಗುಂಟೆ ಗ್ರಾಮೀಣ ಯುವ ಕಲಾ ಸಂಘದ 5 ಜನರ ಕಲಾವಿದರ ತಂಡ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. ಈ ಉಪಯೋಗ ವನ್ನು ಎಲ್ಲ ಸಾರ್ವಜನಿಕರು ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಯರಾಮ್ ಮಾತನಾಡಿ, ಇಂದಿರಾ ಕಿಟ್ ಸೌಲಭ್ಯವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಬರುವ ಯುಗಾದಿ ಹಬ್ಬದ ವೇಳೆಗೆ ಘೋಷಿಸಲಿದ್ದಾರೆ. ಶೀಘ್ರದಲ್ಲೇ ಜನರಿಗೆ ಈ ಸೌಲಭ್ಯ ಸಿಗುವ ಭರಸವಸೆ ಇದೆ. ಒಬ್ಬ ವ್ಯಕ್ತಿಗೆ ಪ್ರಸ್ತುತ ನೀಡುತ್ತಿರುವ 10 ಕೆ.ಜಿ ಅಕ್ಕಿ ಬದಲಾಗಿ 5 ಕೆ.ಜಿ. ದವಸ ಧಾನ್ಯಗಳನ್ನು ಹಾಗೂ 5 ಕೆ.ಜಿ. ಅಕ್ಕಿಸೇರಿ ಒಟ್ಟು 10 ಕೆ.ಜಿ.ಯ ಇಂದಿರಾ ಕಿಟ್ ಜನರ ಕೈಸೇರಲಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಚಿಕ್ಕಬಳ್ಳಾಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಯರಾಮ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಣ್ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಗೊಟ್ಲಗುಂಟೆ ಗ್ರಾಮೀಣ ಯುವ ಕಲಾ ಸಂಘದ ಕಲಾವಿದರಾದ ವೆಂಕಟರಮಣಪ್ಪ, ರೋಜಮ್ಮ ಮುಂತಾದವರು ಇದ್ದರು.