ಗುಡಿಬಂಡೆ: ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿ ತೀಡುವ ನಿಟ್ಟಿನಲ್ಲಿ ಸರ್ವಸ್ವ ವನ್ನೂ ತ್ಯಾಗ ಮಾಡಿ ಶ್ರಮಿಸಿದಂತಹ ಕನಕದಾಸರ ವಚನಗಳು ಸರ್ವಕಾಲಿಕ ವಾದುದಾಗಿದ್ದು, ಜೀವನದಲ್ಲಿ ಪ್ರತಿಯೊಬ್ಬರು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳ ಬೇಕೆಂದು ಶಾಸಕ ಸುಬ್ಬಾರೆಡ್ಡಿ(MLA Subbareddy) ತಿಳಿಸಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ದಾಸಶ್ರೇಷ್ಟ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಭಕ್ತಿ ಶ್ರೇಷ್ಠತೆಯ ಪರಾಕಾಷ್ಠೆಯನ್ನು ಮೀರಿ ನಿಂತ ಸಂತ ಕನಕದಾಸರ ಆದರ್ಶಗಳ ಅನುಸರಣೆ ಅಗತ್ಯ ವಾಗಿದೆ. ವಿಶ್ವದ ಸಾಹಿತ್ಯಕ್ಕೆ ಭಾರತೀಯ ದಾರ್ಶನಿಕರ ಕೊಡುಗೆ ಅಪಾರವಾದುದು.
ನಾಡಿನ ೨೫೦ ಕ್ಕೂ ಹೆಚ್ಚಿನ ದಾಸರ ಪೈಕಿ ಶ್ರೇಷ್ಠರಾದವರು ಕನಕದಾಸರು. ಸರಳ ಭಾಷೆಯಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿ, ಮುಗ್ದ ಜನರಲ್ಲಿ ಜ್ಞಾನ ತುಂಬುತ್ತಿದ್ದರು. ಬಸವಣ್ಣನವರ ನಂತರ ಕನಕದಾಸರು ಜಾತಿಪದ್ದತಿ ಕುರಿತಂತೆ ಹೋರಾಟ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರ ಆದರ್ಶಗಳನ್ನು ಪ್ರತಿ ಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಇದನ್ನೂ ಓದಿ: MLA S.N. Subbareddy: ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ : ಶಾಸಕ ಭಾಗಿ
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸೋಮೇನಹಳ್ಳಿ ಪಿಎಂಶ್ರೀ ಶಾಲೆಯ ಶಿಕ್ಷಕ ರಾಮಕೃಷ್ಣ ಏಕಾಗ್ರತೆಯ ಧ್ಯಾನ, ಭಕ್ತಿಯಿಂದ ತಮ್ಮಲ್ಲಿನ ನಕಾರಾತ್ಮಕ ಗುಣಗಳನ್ನು ತೊರೆಯಬಹುದೆಂಬ ಸತ್ಯವನ್ನು ಜನರಲ್ಲಿ ಕನಕದಾಸರು ತುಂಬಿದರು. ತಮ್ಮ ಆಲೋಚನೆ, ಭಕ್ತಿಯನ್ನು ಸರಳವಾದ ಕನ್ನಡದಲ್ಲಿ ಜನರಿಗೆ ತಲುಪಿಸಿದವರು.
ಕನಕದಾಸರು ತಮ್ಮ ಜೀವನದಲ್ಲಿ ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿ ಕರ್ನಾಟಕ ಸಂಗೀತಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಜಾತಿ, ಕುಲ ವ್ಯವಸ್ಥೆಯ ವಿರುದ್ಧ ಜನಜಾಗೃತಿ ಮೂಡಿಸಿದವರು. ಕನಕರು ಸಮಾಜದ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಹೋಗ ಲಾಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಕನಕದಾಸರು ನಾಟಕಕಾರರಾಗಿ, ಸಂಗೀತಗಾರರಾಗಿ ನಾಡಿಗೆ ನಾನಾ ಕೊಡುಗೆ ನೀಡಿದ್ದು, ಅವರ ಜೀವನ ಚರಿತ್ರೆ ಹಾಗೂ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಚಿಂತನೆಗಳನ್ನು ಅನುಸರಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಮುಖ್ಯರಸ್ತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಸಮುದಾಯದ ಮುಖಂಡರು ಕನಕರಥದೊಂದಿಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಮುಖಂಡರಾದ ಆದಿರೆಡ್ಡಿ, ಆದಿನಾರಾಯಣರೆಡ್ಡಿ, ರಿಯಾಜ್, ಲಕ್ಷ್ಮೀನಾರಾಯಣ, ಕುರುಬ ಸಂಘದ ಅಧ್ಯಕ್ಷ ಅಶ್ವತ್ಥಗೌಡ ಸೇರಿದಂತೆ ಹಲವರು ಇದ್ದರು.