ಗುಡಿಬಂಡೆ: ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಸಾರಥ್ಯದಲ್ಲಿ ಬಗರ್ ಹುಕುಂ ಸಾಗುವಳಿದಾರರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ರೈತರು ಕಳೆದ 30-40 ವರ್ಷಗಳಿಂದ ಜೀವನೋಪಾಯಕ್ಕಾಗಿ ಸರ್ಕಾರಿ ಭೂಮಿಯನ್ನು ನಂಬಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಭೂಮಿಯ ಹಕ್ಕು ಕೋರಿ ನಮೂನೆ 50, 53 ಮತ್ತು 57 ರ ಅಡಿಯಲ್ಲಿ ಅರ್ಜಿ ಗಳನ್ನು ಸಲ್ಲಿಸಿದ್ದರೂ, ಸರ್ಕಾರ ವರ್ಷಗಳಿಂದ ಅವುಗಳನ್ನು ಇತ್ಯರ್ಥಪಡಿಸದೆ ನೆನೆಗುದಿಗೆ ಇಟ್ಟಿದೆ. ನಮೂನೆ 57 ರ ಅಡಿಯಲ್ಲಿ ಅರ್ಜಿಗಳನ್ನು ಪಡೆದ ನಂತರ ಸಂಬಂಧಪಟ್ಟ ಇಲಾಖೆಯು ಯಾವು ದೇ ಸಭೆಗಳನ್ನು ನಡೆಸುತ್ತಿಲ್ಲ. ಅಧಿಕಾರಿಗಳು ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Gudibande News: ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿ: ಮುನಿಕೃಷ್ಣ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದ ತಹಸಿಲ್ದಾರ್ ಅವರು ಮಾತನಾಡಿ, ನಮೂನೆ 53 ರ ಅಡಿಯಲ್ಲಿ ನಿಯಮಾನುಸಾರ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಈಗಾಗಲೇ 37 ಅರ್ಜಿಗಳು ಸಿದ್ಧವಾಗಿವೆ. ಕೇವಲ ಎರಡು ತಿಂಗಳ ಒಳಗಾಗಿ ಇವುಗಳನ್ನು ಸಂಪೂರ್ಣವಾಗಿ ಇತ್ಯರ್ಥ ಪಡಿಸಲಾಗುವುದು. ಬಳಿಕ ನಮೂನೆ 57 ರ ಅಡಿಯಲ್ಲಿ ಬಂದಿರುವ ಅರ್ಜಿಗಳನ್ನು ಹಂತ ಹಂತ ವಾಗಿ ಪರಿಶೀಲಿಸಿ ಪ್ರಕ್ರಿಯೆಯನ್ನು ಮುಗಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳ ಈ ಭರವಸೆಯ ಬಳಿಕ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಹೋರಾಟ ದಲ್ಲಿ ತಾಲೂಕಿನ ನೂರಾರು ಬಗರ್ ಹುಕಂ ಸಾಗುವಳಿದಾರರು ಹಾಗೂ ಕರ್ನಾಟಕ ಭೂ ಹಕ್ಕು ದಾರರ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.