ಚಿಕ್ಕಬಳ್ಳಾಪುರ: ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಯ 30ನೇ ದತ್ತಿ ದಿನಾಚರಣೆ ಹಾಗೂ ಸಿ.ವಿ. ವೆಂಕಟರಾಯಪ್ಪ ಅವರ 111ನೇ ಜಯಂತಿ ಅಂಗವಾಗಿ ಒಂದು ತಿಂಗಳ ಕಾಲ ನಡೆಯಲಿರುವ ಸೇವಾ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ದೊರೆತಿದ್ದು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾವಿರಾರು ಮಂದಿಗೆ ಉಚಿತ ಅನ್ನದಾನ ನೆರವೇರಿಸಲಾಯಿತು.
ನಗರದ ಜೂನಿಯರ್ ಕಾಲೇಜು ಮುಂಭಾಗ, ಬಲಮುರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ನಗರಸಭೆ ವೃತ್ತ, ಎಪಿಎಂಸಿ ಆವರಣ, ನಂದಿಗ್ರಾಮ, ಮಂಚನಬೆಲೆ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Chikkaballapur News: ಡಾ.ಎನ್.ರಾಜಮ್, ಪಂಡಿತ್ ಉಲ್ಲಾಸ್ ಕಾಶಲ್ಕರ್ ಅವರಿಗೆ ಶ್ರೀ ಸತ್ಯ ಸಾಯಿ ಸಂಗೀತ ಶಿರೋಮಣಿ ಪುರಸ್ಕಾರ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್, 1960ರ ದಶಕದಲ್ಲಿಯೇ ಸಿ.ವಿ. ವೆಂಕಟರಾಯಪ್ಪ ಅವರು ಶಿಕ್ಷಣ ಕ್ರಾಂತಿಗೆ ಭದ್ರ ಬುನಾದಿ ಹಾಕಿದ್ದರಿಂದ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.
ಮೂರು ಬಾರಿ ಶಾಸಕರಾಗಿ ಜನಪರ ಸೇವೆ ಸಲ್ಲಿಸಿದ ಸಿ.ವಿ. ವೆಂಕಟರಾಯಪ್ಪ ಅವರ 111ನೇ ಜಯಂತಿ ಅಂಗವಾಗಿ ಜು.23ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಸಾವಿರಾರು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕೆ.ವಿ. ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 400ಕ್ಕೂ ಹೆಚ್ಚು ಸಿಬ್ಬಂದಿ ದತ್ತಿ ದಿನಾಚರಣೆ ಹಾಗೂ ಜಯಂತಿಯನ್ನು ತಮ್ಮ ಮನೆಯ ಹಬ್ಬದಂತೆ ಆಚರಿಸುತ್ತಿರುವುದು ಸಂಸ್ಥೆಯ ಕುಟುಂಬ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಯೂ ನಮ್ಮ ಕುಟುಂಬದ ಸದಸ್ಯರಾಗಿದ್ದು, ಇದೇ ಕಾರಣಕ್ಕೆ ಪ್ರತಿವರ್ಷದ ರಕ್ತದಾನ ಶಿಬಿರ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
2026ರಿಂದ ಆರಂಭಿಸಿರುವ ಅನ್ನದಾನ ಕಾರ್ಯಕ್ರಮವನ್ನು ಮುಂದಿನ ವರ್ಷಗಳಲ್ಲೂ ನಿರಂತರ ವಾಗಿ ನಡೆಸುವ ಸಂಕಲ್ಪ ಮಾಡಲಾಗಿದೆ. "ಹಸಿದವರಿಗೆ ಅನ್ನ, ಶೋಷಣೆಯಿಂದ ಮುಕ್ತಿಗೆ ಶಿಕ್ಷಣ, ಆಪತ್ತಿನಲ್ಲಿರುವವರಿಗೆ ಜೀವದಾನ ನೀಡುವ ರಕ್ತದಾನ" ಎಂಬ ತ್ರಿವಿಧ ಸೇವೆಯೇ ಸಂಸ್ಥೆಯ ಧ್ಯೇಯವಾಗಿದೆ ಎಂದು ನವೀನ್ ಕಿರಣ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮಹೇಶ್, ಆಟೋ ಚಾಲಕರ ಸಂಘಟನೆಯ ಮೊಬೈಲ್ ಬಾಬು, ಬಿಜೆಪಿ ಯುವ ಮುಖಂಡ ಅನು ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
![]()
ಪದ್ಮಶ್ರೀಗೆ ಕೆ.ವಿ. ನವೀನ್ ಕಿರಣ್ ಹೆಸರು ಪರಿಗಣಿಸಲಿ!! ಶಿಕ್ಷಣಕ್ಕೆ ಪ್ರೋತ್ಸಾಹ, ಪರೋಪಕಾರಕ್ಕೆ ಮಾದರಿ, ಬೇಡಿಬಂದವರಿಗೆ ಕೊಡುಗೈದಾನಿಯಾಗಿ, ಮಾನವೀಯತೆಯ ಸಾಕಾರರೂಪದಂತಿರುವ ಕೆ.ವಿ.ನವೀನ್ ಕಿರಣ್ ಅವರ ಅಕಳಂಕ ಸಮಾಜ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಗೆ ಪರಿಗಣಿಸಿದಲ್ಲಿ ಖಂಡಿತವಾಗಿ ಪ್ರಶಸ್ತಿ ಯ ಮೌಲ್ಯ ದ್ವಿಗುಣವಾಗಲಿದೆ. 30 ವರ್ಷಗಳಿಂದ ನಿರಂತವಾಗಿ ಶಿಕ್ಷಣ, ರಕ್ತದಾನಶಿಬಿರ, ಅನ್ನದಾನ ವಿದ್ಯಾದಾನಗಳ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ರಕ್ತದಾನ ಶಿಬಿರಗಳ ಆಯೋಜನೆಯಲ್ಲಿ ಇವರ ಮತ್ತು ಶಿಕ್ಷಣ ಸಂಸ್ಥೆಯ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಿದೆ. ಇದಾಗಲಿ ಎನ್ನುವುದೇ ಜಿಲ್ಲೆಯ ಜನತೆ ಆಶಯವಾಗಿದೆ.
-ಗುಂಪುಮರದ ಆನಂದ್ ಶಿಕ್ಷಕರು ಪಂಚಗಿರಿ ಬೋಧನಾ ಪ್ರೌಢಶಾಲೆ