ಚಿಕ್ಕಬಳ್ಳಾಪುರ: ಈಗಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವರ್ಗಾವಣೆ ಮಾಡುವ ಸರಕಾರದ ಕಡತ ಸಂಖ್ಯೆ ಇಪಿ 10 ಡಿಜಿಡಿ 2026ರ ಪ್ರಸ್ತಾವನೆ ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಗುರುವಾರ ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ನೀಡಲು ಸರಕಾರದ ಮುಂದಿರುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು ಎಂದು ಪ್ರತಿಭಟನೆ ಮೂಲಕ ಆಗ್ರಹಿಸಲಾಯಿತು.
ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕವಾಗಿ ಪ್ರತಿಭಟನೆಯ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರ ಜಿಲ್ಲಾ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಕಳಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರೆಡ್ಡಿ ಮಾತನಾಡಿ ಸರಕಾರದ ಪ್ರಸ್ತಾವಿತ ಕಡತ ಸಂಖ್ಯೆ ಇಪಿ 10 ಡಿಜಿಡಿ 2026ರ ರಂತೆ ಈಗಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವರ್ಗಾವಣೆ ಮಾಡಲು ಸರಕಾರ ಚಿಂತಿಸಿದೆ.ಹೀಗಾದಲ್ಲಿ ಇಲಾಖೆಯ ಸ್ವಾಯತ್ತತೆ, ಸಂಸ್ಥಾಪಕ ಅಸ್ತಿತ್ವ ಹಾಗೂ ಸ್ಥಾಪಿತ ಆಡಳಿತಾತ್ಮಕ ವ್ಯವಸ್ಥೆಗೆ ಗಂಭೀರ ಧಕ್ಕೆಯನ್ನು ಉಂಟು ಮಾಡುವ ಕ್ರಮವಾಗಿದೆ. ಈ ವಿಷಯದ ಗಂಭೀರತೆಯನ್ನು ಮನಗಂಡು ನಮ್ಮ ಸಂಘವು ದಿನಾಂಕ 27/02/2026 ರಂದು ಇಲಾಖೆಗೆ ಮತ್ತು ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿ ಸರಕಾರದ ಕಡತ ಸಂಖ್ಯೆ ಇಪಿ 10 ಡಿಜಿಡಿ 2026ರ ಪ್ರಸ್ತಾವಣೆ ತಕ್ಷಣವೇ ಕೈಬಿಡಬೇಕೆಂದು ಮನವಿ ಮಾಡಲಾಗಿದೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ವ್ಯವಸ್ಥೆ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಅತ್ಯಂತ ಪ್ರಮುಖ ಶೈಕ್ಷಣಿಕ ಹಂತವಾಗಿದೆ.ಈ ವ್ಯವಸ್ಥೆಯ ವೈಶಿಷ್ಟ್ಯತೆ, ಪರೀಕ್ಷಾ ವ್ಯವಸ್ಥೆಯ ವ್ಯಾಪ್ತಿ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳ ಮಹತ್ವವನ್ನು ಪರಿಗಣಿಸಿ ರಾಜ್ಯ ಸರಕಾರವು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪ್ರತ್ಯೇಕ ನಿರ್ದೇಶನಾಲಯ ಹಾಗೂ ಜಿಲ್ಲಾ ಮಟ್ಟದ ಆಡಳಿತಾ ತ್ಮಕ ವ್ಯವಸ್ಥೆಯನ್ನೂ ರೂಪಿಸಿದೆ.
ಇದಲ್ಲದೆ ಬಹಳ ಹಿಂದೆಯೇ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯ ಆಡಳಿತಾತ್ಮಕ ರೂಪುರೇಷೆಗಳನ್ನು ಸರಕಾರವು ಸ್ಪಷ್ಟವಾಗಿ ನಿರ್ಧರಿಸಿದೆ. ಸರಕಾರಿ ಆದೇಶ ಸಂಖ್ಯೆ ಇಡಿ 2 ಯುಡಿಜಿ 70 ದಿನಾಂಕ 03/12/1970ರ ಮೂಲಕ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಿ ಪದವಿ ಪೂರ್ವ ಶಿಕ್ಷಣದ ಆಡಳಿತಾತ್ಮಕ ಹಾಗೂ ಪರೀಕ್ಷಾ ಕಾರ್ಯ ಚಟವಟಿಕೆ ಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ರೂಪಿಸಿತ್ತು. ಇದನ್ನು ಮನಗಂಡು ಸರಕಾರ ಕೂಡಲೇ ಪ್ರಸ್ತಾವಿತ ಪ್ರಸ್ತಾವನೆ ಕೈಬಿಡಬೇಕು ಎಂದು ಮನವಿ ಮಾಡಿದರು.
ಪ್ರಮುಖ ಬೇಡಿಕೆಗಳು
೧. ಜಿಲ್ಲಾ ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸುವ ಸರಕಾರದ ಕಡತ ಸಂಖ್ಯೆ ಇಪಿ 10 ಡಿಜಿಡಿ 2026ರ ಪ್ರಸ್ತಾವಣೆ ತಕ್ಷಣವೇ ಕೈಬಿಡಬೇಕು.
೨.ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾವಣೆ ಮಾಡಬೇಕು.
೩.ಇಲಾಖೆಯಲ್ಲಿ ಪ್ರಸ್ತುತ ಇರುವ 320:1 ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು ಎನ್‌ಸಿಇಆರ್‌ಟಿ ಮಾರ್ಹಸೂಚಿಗಳನ್ವಯ ಮರುನಿಗದಿಪಡಿಸಬೇಕು.
೪.ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು 3 ವರ್ಷಗಳಿಂದ ಪರಿಷ್ಕರಿಸಿಲ್ಲ.ಹಿಂದಿನ ವರ್ಷದ ಬಾಕಿ ಇರುವ ಸಂಭಾವನೆಯನ್ನು ತಕ್ಷಣ ಪಾವತಿಸಬೇಕು.ಪ್ರಥಮ ಆಧ್ಯತೆಯಾಗಿ ಖಾಸಗಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ರು ಮತ್ತು ಅತಿಥಿ ಉಪನ್ಯಾಸಕರಿಗೆ ವಿತರಿಸಬೇಕು.
೫. ಕಾರ್ಯಭಾರದ ಕೊರತೆ ಇರುವ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಗೊಳಿಸುವ ಆದೇಶವನ್ನು ಹಿಂಪಡೆದು ಅವರಿಗೆ ಸಮೀಪದ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು.
೬.ಉಪನ್ಯಾಸಕರ ವರ್ಗಾವಣೆ ಹಾಗೂ ಪದೋನ್ನತಿ ಹೊಂದಿದ ಪ್ರಾಂಶುಪಾಲರ ಸ್ಥಳ ನಿಯುಕ್ತಿಯ ಸಂದರ್ಭದಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಬೇಕು.
ಈ ವೇಳೆ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಮುನಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಹೆಚ್.ಚಿಕ್ಕಣಜಿ,ಕೋಶಾಧ್ಯಕ್ಷ ನಂಜಿರೆಡ್ಡಿ, ಪ್ರಾಂಶುಪಾಲರ ಸಂಘದ ಸತ್ಯೇಂದ್ರ, ಕಾರ್ಯದರ್ಶಿ ರವೀಂದ್ರ, ಖಜಾಂಚಿ ಗೋವಿಂದಪ್ಪ, ತಾಲೂಕು ಅಧ್ಯಕ್ಷರಾದ ಎನ್.ನಾಗರಾಜ್ ಬಾಗೇಪಲ್ಲಿ,ವೆಂಕಟಶಿವಾರೆಡ್ಡಿ ಶಿಡ್ಲಘಟ್ಟ,ಸೋಮಶೇಖರ್ ಗುಡಿಬಂಡೆ, ರವೀಂದ್ರ ಗೌರಿಬಿದನೂರು ಖಾಗಿ ಕಾಲೇಜು ಅಧ್ಯಕ್ಷರಾದ ರಾಜಾರೆಡ್ಡಿ, ಸುರೇಶ್, ರಘುನಾಥ ರೆಡ್ಡಿ, ಇತರೆ ಪದಾಧಿಕಾರಿಗಳು ಇದ್ದರು.