ಚಿಕ್ಕಬಳ್ಳಾಪುರ: ಪಿಯು ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳಿಗೆ ಬೋಧನೆಗಾಗಿ ಪ್ರೌಢ ಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ಕರಡು ನಿಯಮಗಳು–2026 ಅನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಿ ಜುಲೈ ಮೊದಲ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ಸಿ. ಶಂಕರಪ್ಪ ಎಚ್ಚರಿಕೆ ನೀಡಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರದ ಈ ಕ್ರಮವು 10 ಸಾವಿರಕ್ಕೂ ಹೆಚ್ಚು ಪಿಯು ಉಪನ್ಯಾಸಕರ ಸೇವಾ ಹಿತಾಸಕ್ತಿಗೆ ಧಕ್ಕೆ ತರುವುದರ ಜೊತೆಗೆ ಪದವಿಪೂರ್ವ ಶಿಕ್ಷಣದ ಸ್ವತಂತ್ರ ಅಸ್ತಿತ್ವ, ಗುಣಮಟ್ಟ ಮತ್ತು ಉಪನ್ಯಾಸಕರ ವೃತ್ತಿ ಘನತೆಗೆ ಚ್ಯುತಿ ಉಂಟುಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballapur News: ಸುಭದ್ರ ದೇಶ ನಿರ್ಮಾಣದಲ್ಲಿ ತೆರಿಗೆ ಪ್ರಮುಖ ಪಾತ್ರ ವಹಿಸಲಿದೆ : ಆರ್.ರಾಮನಾಥನ್
ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ವಿಶೇಷವಾಗಿ ನೇಮಕ ಗೊಂಡಿರುವ ಗೆಜೆಟೆಡ್ ಗ್ರೂಪ್-ಬಿ ಉಪನ್ಯಾಸಕರನ್ನು ಪ್ರೌಢಶಾಲಾ ಬೋಧನೆಗೆ ನಿಯೋಜಿಸು ವುದು ಅವರ ಶೈಕ್ಷಣಿಕ ವಿಶೇಷತೆಯನ್ನು ಕುಗ್ಗಿಸುವ ಕ್ರಮವಾಗಿದೆ. ಇದು ಕೇವಲ ಉಪನ್ಯಾಸಕರ ಸೇವಾ ಸಮಸ್ಯೆಯಲ್ಲ; ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ ಹಾಗೂ ವಿಷಯ ಪರಿಣಿತಿಗಾಗಿ ಅವಲಂಬಿಸಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಹೇಳಿದರು.
ಈ ಕರಡು ನಿಯಮವು ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು-2023ರ ಆಶಯಗಳಿಗೆ ವಿರುದ್ಧವಾಗಿದೆ. ಸರ್ಕಾರವು ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಪೋಷಕರು, ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.
ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಸರ್ಕಾರ ನೇರ ನೇಮಕಾತಿ ನಡೆಸಬೇಕು, ಬಡ್ತಿಯ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಅಗತ್ಯವಿದ್ದರೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಬೇಕು. ಒಂದು ವೃಂದದ ಕೊರತೆಯನ್ನು ಮತ್ತೊಂದು ವಿಶೇಷ ವೃಂದವನ್ನು ದುರ್ಬಲ ಗೊಳಿಸುವ ಮೂಲಕ ಪರಿಹರಿಸುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕರ್ನಾಟಕದ ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಯ ಗುಣಮಟ್ಟ ಮತ್ತು ಸ್ವಾಯತ್ತತೆಯನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯಾದ್ಯಂತ ಹೋರಾಟ ಆರಂಭಿಸಿ ಜುಲೈ ಮೊದಲ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಎಂ.ಎಂ. ಕೃಷ್ಣಪ್ಪ, ಉಪಾಧ್ಯಕ್ಷೆ ರೆಡ್ಡಮ್ಮ, ಪ್ರಧಾನ ಕಾರ್ಯದರ್ಶಿ ಸಿ. ಮಧುಸೂದನ, ಖಜಾಂಚಿ ಎ. ಶಾಂತರಾಜು, ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಎಂ. ಶ್ರೀನಿವಾಸಯ್ಯ, ಕಾರ್ಯದರ್ಶಿ ಶ್ರೀನಿವಾಸ ಕೆ.ವಿ., ಜಂಟಿ ಕಾರ್ಯದರ್ಶಿ ಬಿ.ಕೆ. ರವಿ ಹಾಗೂ ಸಂಚಾಲಕ ಹೆಚ್.ಸಿ. ಮುನಿರಾಜು ಉಪಸ್ಥಿತರಿದ್ದರು.